ಕರ್ನಾಟಕ

ಭೂಕಂಪ ಸುದ್ದಿಗೆ ಹೆದರಿ ಊರು ಬಿಡಲು ಮುಂದಾಗಿರುವ ಗ್ರಾಮಸ್ಥರು; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

Pinterest LinkedIn Tumblr

Earthqake-village

ತುಮಕೂರು, ಮೇ 3: ನೇಪಾಳದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ನಂತರ ಗುಬ್ಬಿ ತಾಲೂಕು ಹೊಸಕೆರೆ ಹೋಬಳಿ ಅಳಿಲುಘಟ್ಟ ಬಳಿ ಭೂಕಂಪದ ಪಾಯಿಂಟ್ ಇದೆ ಎಂಬ ಸುದ್ದಿ ಹರಡುತ್ತಿದ್ದಂತೆ ಜನರು ಊರು ಬಿಡಲು ಮುಂದಾಗುತ್ತಿದ್ದಾರೆ. ಮಾಧ್ಯಮಗಳಲ್ಲಿ ಅಳಿಲಘಟ್ಟ-ಹೊಸಕೆರೆ ಮಧ್ಯೆ ಭೂ-ಕಂಪವಾಗಲಿದೆ ಎಂಬ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳು ಸಿದ್ದರಾಮಣ್ಣ ಎಂಬವರ ಮನೆಯ ಬಳಿ ಭೂಕಂಪನದ ಪಾಯಿಂಟ್ ಮಾಡಿದ್ದು ಗ್ರಾಮಸ್ಥರಲ್ಲಿ ಆತಂಕ ಮತ್ತಷ್ಟು ಹೆಚ್ಚು ಮಾಡಿದೆ.

ರಜಾ ದಿನವನ್ನು ಕಳೆಯಲು ಬಂದಿದ್ದ ಮಕ್ಕಳನ್ನು ಅವರ ಊರುಗಳಿಗೆ ಕಳುಹಿಸುತ್ತಿರುವ ಗ್ರಾಮಸ್ಥರು ತಾವು ಮಲಗಿರುವ ಹೊತ್ತಿನಲ್ಲಿ ಭೂಕಂಪ ಸಂಭವಿಸಿ ಮನೆ ನಮ್ಮ ಮೇಲೆ ಬೀಳಬಹುದು ಎಂಬ ಆಲೋಚನೆಯಿಂದ ಮನೆಯಿಂದ ಹೊರಗೆ ಮಲಗುತ್ತಿದ್ದಾರೆ. ಕೆಲವರು ಊರು ಬಿಟ್ಟು ಬಂದು ಬೇರೆ ಊರಿನಲ್ಲಿ ಮನೆ ಕಟ್ಟಿಕೊಂಡು ವಾಸವಿರುವಂತೆ ಸಲಹೆ ನೀಡುತ್ತಿದ್ದು ಇದರಿಂದ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಕೂಡಲೇ ಸಂಬಂಧಪಟ್ಟವರು ಸ್ಥಳಕ್ಕೆ ಆಗಮಿಸಿ ಜನತೆಗೆ ಸ್ಪಷ್ಟ ಅರಿವು ಮೂಡಿಸಲಿ ಎಂಬುದು ಜನತೆಯ ಒಕ್ಕೊರಲಿನ ಆಗ್ರಹವಾಗಿದೆ.

ಶೀಘ್ರವಾಗಿ ಜನತೆಯಲ್ಲಿರುವ ಗೊಂದಲಕ್ಕೆ ತೆರೆ ಎಳೆದು ಅಗತ್ಯಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಗಮನ ಸೆಳೆಯಲು ಚಿಂತನೆ ಆರಂಭವಾಗಿದೆ. ಹಾಗಲವಾಡಿ ಹೋಬಳಿಯ ಜನತೆಗೆ ಕುಡಿಯಲು ನೀರಿಲ್ಲ, ತೋಟಗಳೆಲ್ಲಾ ಒಣಗುತ್ತಿವೆ, ಪ್ರತಿ ದಿವಸ ಜೀವಂತ ಸಾಯುವ ಬದಲು ಶೀಘ್ರವಾಗಿ ಭೂ-ಕಂಪವಾಗಿ ಎಲ್ಲರೂ ಸಾಯುವುದೇ ಲೇಸು ಎಂಬ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಗುಬ್ಬಿ ತಹಶೀಲ್ದಾರ್ ಸಿದ್ದಪ್ಪನವರು ಅಳಿಲಘಟ್ಟಕ್ಕೆ ಬೇಟಿ ನೀಡಿರುವುದು ಜನತೆಗೆ ತುಸು ನೆಮ್ಮದಿ ನೀಡಿದೆ. ಅಳಿಲಘಟ್ಟ ಮತ್ತು ಹೊಸಕೆರೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಹಳ್ಳಿಗೆ ಭೇಟಿ ನೀಡಿ ಜನತೆಯ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರಕಾರಗಳಿಗೆ ಸ್ಪಷ್ಟ ವರದಿ ನೀಡಲು ಮುಖಂಡರಾದ ಎಸ್.ಗುಬ್ಬಣ್ಣ, ಸಿದ್ದರಾಮಯ್ಯ, ಸಿದ್ದಯ್ಯ, ನಾಗೇಶ್, ನಾರಾಯಣಪ್ಪ, ಲೋಕೇಶ್‌ಕೃಷ್ಣಪ್ಪ, ಚಿದಾನಂದಮೂರ್ತಿ, ಬಸವರಾಜ್, ಕೆಂಪರಾಜ್, ಶ್ರೀನಿವಾಸ್, ಆನಂದ್ ಒತ್ತಾಯಿಸಿದ್ದಾರೆ.

Write A Comment