ಕೆ.ಆರ್.ಪುರಂ, ಮೇ 2: ಸರಳ ವಿವಾಹ ಮಾಡಿಕೊಂಡವರಿಗೆ ಜೀವನ ಭದ್ರತೆಗಾಗಿ 50 ಸಾವಿರ ರೂ. ನೀಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಇಂದಿಲ್ಲಿ ತಿಳಿಸಿದರು.
ಹೆಚ್‌ಎಎಲ್ ಪರಿಶಿಷ್ಟ ಜಾತಿ/ಪಂಗಡದ ಕಾರ್ಮಿಕರ ಹಾಗೂ ಅಧಿಕಾರಿಗಳ ಸಂಘದಿಂದ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 124 ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರು ಅನ್ಯ ಜಾತಿಯವರನ್ನು ಮದುವೆಯಾದರೆ ಸರ್ಕಾರದಿಂದ ಮೂರು ಲಕ್ಷ ಹಾಗೂ ಪುರುಷರಿಗೆ ಎರಡು ಲಕ್ಷ ರೂ. ನೀಡಲಾಗುತ್ತಿದೆ ಎಂದು ಹೇಳಿದರು.
ಬಡ್ತಿ ಹಾಗೂ ಮೀಸಲಾತಿಯಲ್ಲಿ ಎಸ್‌ಸಿ-ಎಸ್‌ಟಿ ಜನಾಂಗದವರಿಗೆ ತೊಂದರೆಯಾದರೆ ನಿಮ್ಮೊಂದಿಗೆ ನಾನೂ ಇದ್ದು ಕೇಂದ್ರ ಸರ್ಕಾರವನ್ನು ಪ್ರಶ್ನಿಸುವೆ ಎಂದು ತಿಳಿಸಿದರು.
ಎಲ್ಲಾ ಜನಾಂಗದವರು ಶಿಕ್ಷಣಕ್ಕಾಗಿ ಹೋರಾಟ ನಡೆಸಬೇಕು. ಅಂಬೇಡ್ಕರ್ ರಾಷ್ಟ್ರ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ದಲಿತರ ಪರವಾಗಿ ನಿಂತು ಸದಾ ಸಹಕಾರ ನೀಡುತ್ತಿದೆ ಎಂದು ಹೇಳಿದರು. ಶಾಸಕ ಬೈರತಿ ಬಸವರಾಜ ಮಾತನಾಡಿ, ದಲಿತರ ಅಭಿವೃದ್ಧಿಗಾಗಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿದೆ. ನಮ್ಮ ಸಹಕಾರ ನಿಮಗೆ ಸದಾ ಇರುತ್ತದೆ ಎಂದು ಹೇಳಿದರು. ಹಳ್ಳಿಗಾಡಿನಿಂದ ಬರುವ ವಿದ್ಯಾರ್ಥಿಗಳಿಗೆ ಸಂಪೂರ್ಣ ವಿದ್ಯಾಬ್ಯಾಸ ಹಾಗೂ ಹಾಸ್ಟೆಲ್ ವ್ಯವಸ್ಥೆ ವ್ಯವಸ್ಥಿತವಾಗಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಬೆಳಗ್ಗೆ ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ನೃತ್ಯಗಳೊಂದಿಗೆ ಅಂಬೇಡ್ಕರ್ ಅವರ ಪ್ರತಿಮೆ ವರೆಗೆ ಮೆರವಣಿಗೆ ಮೂಲಕ ಹೋಗಿ ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ ಅಧ್ಯಕ್ಷ ಟಿ.ಈಶ್ವರ್, ಸಂಘದ ಅಧ್ಯಕ್ಷ ಬಿ.ಎನ್.ಶಿವಲಿಂಗು, ಡಾ.ಜಿ.ಈಶ್ವರ್, ರೇಣುಕ, ಚಮೋಲ, ಡಾ.ಎ.ಕೆ.ಮಿಶ್ರ, ಮತ್ತಿತರರು ಇದ್ದರು.