ಕರ್ನಾಟಕ

ಇನ್ನು ಬಿಪಿಎಲ್ ಪಡಿತರರಿಗೆ “ಅನ್ನಭಾಗ್ಯ” ಉಚಿತ: ವಿಧಾನಸೌಧ ಆವರಣದಲ್ಲಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

Pinterest LinkedIn Tumblr

cm-siddu

ಬೆಂಗಳೂರು: ಕಡಿಮೆ ಬೆಲೆಗೆ ಅನ್ನಭಾಗ್ಯದಡಿಯಲ್ಲಿ ಅಕ್ಕಿ ಪಡೆಯುತ್ತಿದ್ದ ಬಿಪಿಎಲ್ ಪಡಿತರರು ಇನ್ನು ಮುಂದೆ ಉಚಿತವಾಗಿ ಅಕ್ಕಿ ಪಡೆಯುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಚಾಲನೆ ನೀಡಿದರು.

ವಿಧಾನಸೌಧದ ಮುಂಭಾಗ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಆಯೋಜಿಸಿದ್ದ ಬಿಪಿಎಲ್, ಅಂತ್ಯೋದಯ ಫಲಾನುಭವಿಗಳಿಗೆ ಉಚಿತ ಅಕ್ಕಿ, ರಿಯಾಯ್ತಿ ದರದಲ್ಲಿ  ತಾಳೆಎಣ್ಣೆ ಮತ್ತು ಅಯೋಡಿನ್‌ಯುಕ್ತ ಉಪ್ಪನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತರಿಸಿದರು. ನೂರ್‌ಜಾನ್, ನೂರ್‌ಬಾನು, ಕೆಂಪಮ್ಮ ಎಂಬ ಬಿಪಿಎಲ್ ಪಡಿತರಿಗೆ ಸಾಂಕೇತಿಕವಾಗಿ ಪಡಿತರ ವಿತರಿಸುವ ಮೂಲಕ ಸಿದ್ದರಾಮಯ್ಯ ಅವರು ಯೋಜನೆಗೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಬಡವರನ್ನು ಹೊಂದಿರುವ ರಾಜ್ಯ ಕರ್ನಾಟಕ. ಈ ರಾಜ್ಯವನ್ನು ಹಸಿವು ಮುಕ್ತ ಹಾಗೂ ಪೌಷ್ಟಿಕಯುಕ್ತ ರಾಜ್ಯ ಮಾಡುವುದೇ ನಮ್ಮ ಸರ್ಕಾರದ ಗುರಿ ಎಂದು ಘೋಷಿಸಿದರು. ಆಂಧ್ರಪ್ರದೇಶದಲ್ಲಿ ಶೇ.21, ತಮಿಳುನಾಡಿನಲ್ಲಿ ಶೇ.17, ಕೇರಳದಲ್ಲಿ ಶೇ.12, ಕರ್ನಾಟಕದಲ್ಲಿ ಶೇ.23.6ರಷ್ಟು ಬಡ ಜನರಿದ್ದಾರೆ. ಹಾಗಾಗಿ ರಾಜ್ಯವನ್ನು ಹಸಿವುಮುಕ್ತ  ಹಾಗೂ ಬಡತನ ಮುಕ್ತ ಮಾಡುವ ಗುರಿ ಹೊಂದಿದ್ದೇವೆ ಎಂದರು. ಅರ್ಹರಿಗೆ ಬಿಪಿಎಲ್ ಕಾರ್ಡ್ ದೊರೆಯಬೇಕು, ಅನರ್ಹರಿಗೆ ಸಿಕ್ಕಿರುವುದು ರದ್ದಾಗಬೇಕೆಂಬುದು ನಮ್ಮ ಉದ್ದೇಶ, ಅದಕ್ಕೆ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

“ಇಂದಿನಿಂದ ಹೊಸದಾಗಿ ಎಪಿಎಲ್ ಮತ್ತು ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಜೂನ್ 1 ರಿಂದ ರಿಯಾಯ್ತಿ ದರದಲ್ಲಿ ಎಪಿಎಲ್ ಪಡಿತರದಾರರಿಗೂ ಅಕ್ಕಿ, ಗೋಧಿ ಕೊಡಲಾಗುತ್ತದೆ. 15 ರೂ.ಗೆ ಕೆಜಿ ಅಕ್ಕಿ, 5ರೂ. ಗೆ ಕೆಜಿ ಗೋಧಿ ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಹಿಂದೆ ತುತ್ತು ಅನ್ನಕ್ಕಾಗಿ ಬೇರೆಯವರ ಮನೆ ಬಾಗಿಲಲ್ಲಿ ಕಾಯುವ ಸ್ಥಿತಿ ಇತ್ತು. ಇದನ್ನು ತಪ್ಪಿಸಲು ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ನಾಲ್ಕು ಕೋಟಿ ಜನತೆಗೆ ಇದರ ಪ್ರಯೋಜನ ದಕ್ಕಿದೆ. ಇದರಿಂದ ಭತ್ತ, ರಾಗಿ, ಗೋಧಿ ಬೆಳೆಯುವವರಿಗೂ ಅನುಕೂಲವಾಗಿದ್ದು, ಅನ್ನಭಾಗ್ಯ ಯೋಜನೆಯಲ್ಲಿ ಸುಧಾರಣೆ ಮಾಡಲಾಗಿದೆ. ಕೆಜಿಗೆ 1. ರೂ. ನೀಡುತ್ತಿದ್ದುದನ್ನು ಈಗ ಉಚಿತವಾಗಿ ವಿತರಿಸಲಾಗುತ್ತಿದೆ. ಶತಶತಮಾನಗಳಿಂದ ದುಡಿದ ಜನ ವಿಶ್ರಾಂತಿ ಪಡೆಯಲಿ ಎಂಬುದು ನಮ್ಮಉದ್ದೇಶವಾಗಿದೆ” ಎಂದು ಅವರು ಹೇಳಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್‌ಗುಂಡೂರಾವ್ ಅವರು ಮಾತನಾಡಿ, “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 20 ಲಕ್ಷ ಪಡಿತರ ಚೀಟಿ ವಿತರಿಸಿದೆ. ಇದುವರೆಗೂ 1.8 ಕೋಟಿ ಕುಟುಂಬಗಳಿಗೆ ಪಡಿತರ ನೀಡಲಾಗಿದೆ. ಕಾಳಸಂತೆಯಲ್ಲಿ  ಪಡಿತರ ಮಾರಾಟವಾಗುತ್ತಿದ್ದುದನ್ನು ತಪ್ಪಿಸಲಾಗಿದೆ. 14.40 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದೆ, ಜೋಳ ನಿರೀಕ್ಷಿತ ಪ್ರಮಾಣದಲ್ಲಿ ಖರೀದಿಯಾಗಿಲ್ಲ. ಆಹಾರ ಭದ್ರತೆ ಒದಗಿಸುವ ಮೂಲಕ ಪೌಷ್ಟಿಕ ಆಹಾರವನ್ನು ಜನರಿಗೆ ತಲುಪುವಂತೆ ನೋಡಿಕೊಳ್ಳಲಾಗಿದೆ ಎಂದು ಹೇಳಿದರು. ಅಲಲ್ಲದೆ ಒಂದು ಕುಟುಂಬಕ್ಕೆ ತಲಾ 5 ಕೆಜಿ ಪಡಿತರ ಧಾನ್ಯ ನೀಡಲಾಗುತ್ತಿದ್ದು, ಒಂದು ಕುಟುಂಬದಲ್ಲಿ 60 ಜನರಿದ್ದರೆ 300 ಕೆಜಿ ಪಡಿತರ ಸಿಗಲಿದೆ ಎಂದು ಅವರು ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ರೋಷನ್‌ಬೇಗ್, ಶಾಸಕರಾದ ಮುನಿರತ್ನ, ಡಾ.ಅಶ್ವಥನಾರಾಯಣ, ಭೈರತಿ ಬಸವರಾಜ್, ಆರ್.ವಿ.ದೇವರಾಜ್, ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ, ಎಂ.ಆರ್.ಸೀತಾರಾಂ, ಗಾಯಕ ಶಿವಮೊಗ್ಗ ಸುಬ್ಬಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
-ಕೃಪೆ: ಕನ್ನಡಪ್ರಭ

Write A Comment