ಕರ್ನಾಟಕ

ಉಸಿರುಗಟ್ಟಿಸುವ ವಾತಾವರಣದಲ್ಲಿ ಬೆಂಗಳೂರು ವಿಲವಿಲ

Pinterest LinkedIn Tumblr

02-traffic

ಬೆಂಗಳೂರು, ಏ. 29 : ಒಂದಾನೊಂದು ಕಾಲದಲ್ಲಿ ದಟ್ಟವಾದ ಗಿಡಮರಗಳಿಂದಾಗಿ ಉದ್ಯಾನ ನಗರಿ ಎಂದು ಹೆಸರು ಪಡೆದಿದ್ದ ಬೆಂಗಳೂರು, ಇಂದು ದಟ್ಟವಾದ ವಾಯುಮಾಲಿನ್ಯದಿಂದಾಗಿ ಉಸಿರಾಡಲು ಪರದಾಡುತ್ತಿದೆ. ನಗರದ ಕೆಲ ಭಾಗಗಳ ವಾಯುಮಾಲಿನ್ಯ ರಾಷ್ಟ್ರೀಯ ಮಿತಿಯನ್ನು ಮೀರಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿರುವ ಮಾಲಿನ್ಯದ ದತ್ತಾಂಶ ದಂಗುಬಡಿಸುವಂತಿದೆ. ತಮಗೆ ಅರಿವಿಲ್ಲದಂತೆಯೆ ಬೆಂಗಳೂರಿನ ಜನತೆ ಇದೇ ವಾಯುವನ್ನು ಸೇವಿಸಿ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇದೊಂದು ರೀತಿ ನಿಧಾನ ವಿಷಪ್ರಾಶನವಿದ್ದಂತೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ವರ್ತೂರಿನಲ್ಲಿ ವಿಷಾನಿಲದಿಂದ ಕೂಡಿರುವ ಚರಂಡಿ ನೀರು ಹೊರಹೊಮ್ಮಿಸುತ್ತಿರುವ ನೊರೆಯಿಂದಾಗಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ವಾಹನದಟ್ಟಣೆಯಿಂದ ಹೆಚ್ಚುತ್ತಿರುವ ವಾಯುಮಾಲಿನ್ಯ ಮತ್ತು ಮಿತಿಮೀರಿರುವ ಅವುಗಳ ಪ್ರಮಾಣದ ಬಗ್ಗೆ ಮತ್ತೊಮ್ಮೆ ಚರ್ಚಿಸುವಂತಾಗಿದೆ.

ವೈಟ್ ಫೀಲ್ಡ್ ಮತ್ತು ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಅತಿಹೆಚ್ಚು ಮಾಲಿನ್ಯದಿಂದ ಕೂಡಿವೆ. ಹೆಚ್ಚುತ್ತಿರುವ ವಾಹನಗಳು, ವಿರಳವಾಗುತ್ತಿರುವ ಹಸಿರು, ನಿಯಂತ್ರಣ ಕಳೆದುಕೊಳ್ಳುತ್ತಿರುವ ಸಂಚಾರ ವ್ಯವಸ್ಥೆಗಳು ಬೆಂಗಳೂರಿಗೆ ಈ ದುರವಸ್ಥೆಯನ್ನು ತಂದೊಡ್ಡಿವೆ.

ವೈಟ್ ಫೀಲ್ಡ್‌ನ ಆರ್‌ಎಸ್‌ಪಿಎಂ (Respirable Suspended Particulate Matter) ಮಟ್ಟ ರಾಷ್ಟ್ರೀಯ ಮಟ್ಟಕ್ಕಿಂತ ಶೇ.155ರಷ್ಟು ಹೆಚ್ಚಿದ್ದರೆ, ಹೊಸೂರು ರಸ್ತೆಯ ವಾಯುಮಾಲಿನ್ಯದ ಮಟ್ಟ ಶೇ.202ರಷ್ಟು ಅಧಿಕವಾಗಿದೆ. ಪ್ರತಿವಾರ ವಾಯುಮಾಲಿನ್ಯದ ಮಟ್ಟವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಳೆಯುತ್ತಿರುತ್ತದೆ.

ಇವೆರಡು ಪ್ರದೇಶಗಳಲ್ಲದೆ ಯಶವಂತಪುರ, ಪೀಣ್ಯ ಔದ್ಯೋಗಿಕ ಪ್ರದೇಶ, ಮೈಸೂರು ರಸ್ತೆ, ವಿಕ್ಟೋರಿಯಾ ರಸ್ತೆ, ವಿಕ್ಟೋರಿಯಾ ಆಸ್ಪತ್ರೆ, ನಿಮ್ಹಾನ್ಸ್, ದೊಮ್ಮಲೂರು ಪ್ರದೇಶಗಳಲ್ಲಿನ ವಾಯುಮಾಲಿನ್ಯ ಆತಂಕಕಾರಿಯಾಗಿ ಬೆಳೆಯುತ್ತಿದೆ. ಮಾಲಿನ್ಯವನ್ನು ನಿಯಂತ್ರಣದಲ್ಲಿಡುವುದು ಹೇಗೆ? ಯಾರು?
-ಕೃಪೆ: ದಟ್ಸ್ ಕನ್ನಡ

Write A Comment