ಕರ್ನಾಟಕ

ರಾಜ್ಯದ 11 ಜಿಲ್ಲೆಗಳಲ್ಲಿ 22 ಕಡೆ ಏಕಕಾಲಕ್ಕೆ ಲೋಕಾಯುಕ್ತ ದಾಳಿ

Pinterest LinkedIn Tumblr

loka

ಬೆಂಗಳೂರು, ಏ.28-ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 11 ಜಿಲ್ಲೆಗಳಲ್ಲಿ 22 ಕಡೆ ಏಕಕಾಲಕ್ಕೆ ಮಿಂಚಿನ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 13 ಕಡು ಭ್ರಷ್ಟರನ್ನು ಬಲೆಗೆ ಕೆಡವಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಹಚ್ಚಿದ್ದಾರೆ.
ಬಲೆಗೆ ಬಿದ್ದ ಅಧಿಕಾರಿಗಳು: ಬಿ.ಎಂ.ವಿಜಯ್‌ಶಂಕರ್, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ., ಪಿ.ಎನ್.ಮೂರ್ತಿ, ಬಿಡಿಎ ಜಂಟಿ ನಿರ್ದೇಶಕ, ತಿಮ್ಮಯ್ಯ, ಜೂನಿಯರ್ ಅಸಿಸ್ಟೆಂಟ್ ಆಹಾರ ಮತ್ತು ನಾಗರಿಕ ಇಲಾಖೆ., ಕಾಶಿನಾಥ್, ಕೆಐಎಡಿಬಿ, ಉಪ ಅಭಿವೃದ್ಧಿ ಅಧಿಕಾರಿ.,

ಲಕ್ಷ್ಮಣ್ ನೀಲೋಗಲ್, ಕೆಎಸ್‌ಎಫ್‌ಸಿ ಎಕ್ಸಿಕ್ಯೂಟಿವ್ ಡೈರೆಕ್ಟರ್, ರಮೇಶ್‌ಬಾಬು, ಜಿಲ್ಲಾ ಆರೋಗ್ಯಾಧಿಕಾರಿ., ಎಸ್.ಪದ್ಮರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿ.,  ಚಂದ್ರಶೇಖರ್, ಎಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ., ವಿಜಯ್‌ಕುಮಾರ್, ಕಂದಾಯ ಇಲಾಖೆ, ಆರ್‌ಐ., ಮಾರ್ತಾಂಡಪ್ಪ ಬಡಿಗೇರಾ, ಕೆಐಎಡಿಬಿ ಸಹಾಯಕ ಅಭಿಯಂತ., ಸಿದ್ದೇಗೌಡ, ಗ್ರಾಮ ಲೆಕ್ಕಿಗ., ಪದ್ಮನಾಭಮುಲ್ಕಿ, ಅಭಿಯಂತ ಪಟ್ಟಣ ಪಂಚಾಯ್ತಿ., ಅಶೋಕ್‌ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಎಫ್‌ಡಿಎ.

ಬೆಂಗಳೂರು ವರದಿ:
ಲೋಕಾಯುಕ್ತ ಎಸ್‌ಪಿ ಸೋನಿಯಾನಾರಂಗ್ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕ ಬಿ.ಎಂ.ವಿಜಯ್‌ಶಂಕರ್ ಹಾಗೂ ಬಿಡಿಎ ಜಂಟಿ ನಿರ್ದೇಶಕ ಪಿ.ಎನ್.ಮೂರ್ತಿ ಅವರ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಹಚ್ಚಲಾಗಿದೆ.

ತುಮಕುರು:
ತಿಪಟೂರಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿರುವ ತಿಮ್ಮಯ್ಯ ಅವರ ಕುಣಿಗಲ್ ರಸ್ತೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಎಸ್‌ಪಿ ಲೋಕೇಶ್ವರ್ ಮತ್ತವರ ತಂಡ 18 ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಅಕ್ರಮ ಆಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.  ತಿಮ್ಮಯ್ಯ ತುಮಕೂರಿನಲ್ಲಿ ಮೆಡಿಕಲ್‌ಸ್ಟೋರ್, ಮೈಸೂರಿನಲ್ಲಿ ನಿವೇಶನ, ಎರಡು ಎಕರೆ ನೀರಾವರಿ ಜಮೀನು, ಎರಡು ಕಾರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ, ವಿವಿಧ ಬ್ಯಾಂಕ್‌ಗಳಲ್ಲಿ ಹಲವಾರು ಶಾಖೆಗಳನ್ನು ಹೊಂದಿರುವುದು ದಾಳಿ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಮಂಡ್ಯ:
ಎಸ್‌ಪಿ ವಿಜಯ್‌ಕುಮಾರ್ ನೇತೃತ್ವದ ತಂಡ ಮಂಡ್ಯದ ಹೊಸಹಳ್ಳಿಯಲ್ಲಿರುವ ಗ್ರಾಮ ಲೆಕ್ಕಿಗ ಸಿದ್ದೇಗೌಡ ಅವರ ಮನೆ ಹಾಗೂ ಸುಭಾಷ್ ನಗರದಲ್ಲಿರುವ ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಚಿಕ್ಕಬಳ್ಳಾಪುರ:
ದೊಡ್ಡಬಳ್ಳಾಪುರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ನಿರೂಪಣಾ ಅಧಿಕಾರಿಯಾಗಿರುವ ಎಸ್.ಪದ್ಮರಾಜ್ ಅವರ ನಿವಾಸದ ಮೇಲೆ ಎಸ್ಪಿ ಚಿನ್ನಸ್ವಾಮಿ ತಂಡ ದಾಳಿ ನಡೆಸಿದೆ. ಇದರ ಜತೆ ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಪದ್ಮರಾಜ್ ಅವರ ನಿವಾಸದ ಮೇಲೂ ದಾಳಿ ಮಾಡಿ ಅಕ್ರಮ ಆಸ್ತಿ ಪತ್ತೆಹಚ್ಚಲಾಗಿದೆ.

ಶಿವಮೊಗ್ಗ:
ಎಸ್‌ಪಿ ಶ್ರೀಧರ್ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಎಇಇ ಆಗಿರುವ ಚಂದ್ರಶೇಖರ್ ಹಾಗೂ ರೆವಿನ್ಯೂಇನ್ಸ್‌ಪೆಕ್ಟರ್ ವಿಜಯ್‌ಕುಮಾರ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.

ಧಾರವಾಡ:
ಕೆಐಎಡಿಬಿಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ಮಾರ್ತಾಂಡಪ್ಪಬಡಿಗೇರಾ ಅವರ ನಿವಾಸದ ಮೇಲೆ ಮುಗಿಬಿದ್ದ ಲೋಕಾಯುಕ್ತ ಎಸ್‌ಪಿ ಪರಶುರಾಮ್ ನೇತೃತ್ವದ ತಂಡ  ಸ್ನೇಹಿತ ಈಶ್ವರ್ ಏಣಗಿ ಮತ್ತು ಭಾವ ಎಸ್.ಎಸ್.ಕಮ್ಮಾರ್ ಅವರ ನಿವಾಸಗಳ ಮೇಲೂ ದಾಳಿ ನಡೆಸಿದೆ.

ಬಳ್ಳಾರಿ:
ಬಳ್ಳಾರಿಯಲ್ಲೂ ಮಿಂಚಿನ ಕಾರ್ಯಾಚರಣೆ ನಡೆಸಿರುವ ಲೋಕಾಯುಕ್ತ ಪೊಲೀಸರು ರೇಡಿಯೋ ಪಾರ್ಕ್ ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯಾಧಿಕಾರಿ ರಮೇಶ್‌ಬಾಬು ಅವರ ನಿವಾಸ ಹಾಗೂ ಜಿಲ್ಲಾ ಆರೋಗ್ಯ ಕಚೇರಿಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಬಾಗಲಕೋಟೆ:
ಕೆಎಸ್‌ಎಫ್‌ಸಿಯಲ್ಲಿ ಎಕ್ಸ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಲಕ್ಷ್ಮಣ್ ನಿಲೋಗಲ್ ಅವರ ಬಾದಾಮಿ ಪಟ್ಟಣದಲ್ಲಿರುವ ಆನಂದ್‌ನಗರ ನಿವಾಸದ ಮೇಲೂ ಎಸ್‌ಪಿ ಕಂಬಾರ್ ನೇತೃತ್ವದ ತಂಡ ದಾಳಿ ನಡೆಸಿದೆ.  ಈ ಭ್ರಷ್ಟ ಅಧಿಕಾರಿ ಬೆಂಗಳೂರಿನಲ್ಲೂ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅಲ್ಲೂ ದಾಳಿ ನಡೆಸಲಾಗಿದೆ.

ಮಂಗಳೂರು:
ಡಿವೈಎಸ್‌ಪಿ ವಿಠ್ಠಲ್‌ದಾಸ್ ನೇತೃತ್ವದ ತಂಡ ಮೂಡಬಿದರೆಯಲ್ಲಿರುವ ಪಟ್ಟಣ ಪಂಚಾಯ್ತಿ ಅಭಿಯಂತ ಪದ್ಮನಾಭಮುಲ್ಕಿ ಅವರ ನಿವಾಸದ ಮೇಲೆ ದಾಳಿ ನಡೆಸಿದೆ.

ಕಲ್ಬುರ್ಗಿ:
ಎಸ್‌ಪಿ ಎಂ.ಬಿ.ಪಾಟೀಲ್ ನೇತೃತ್ವದ ತಂಡ ಕೆಐಎಡಿಬಿಯಲ್ಲಿ ಉಪ ಅಭಿವೃದ್ಧಿ ಅಧಿಕಾರಿಯಾಗಿರುವ ಕಾಶಿನಾಥ್ ಅವರ ನಿವಾಸ ಹಾಗೂ ಗಬ್ಬೂರಿನಲ್ಲಿರುವ ತೋಟದ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದೆ.

ಬೀದರ್:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ  ಪ್ರಥಮ ದರ್ಜೆ ಸಹಾಯಕನಾಗಿರುವ ಅಶೋಕ್‌ಕುಮಾರ್ ಅವರ ಶಿವಾನಂದನಗರದ ನಿವಾಸ, ವಿದ್ಯಾನಗರ ಮತ್ತಿತರ ಕಡೆ ಇರುವ ಅವರ ಸಂಬಂಧಿಕರ ಮನೆ ಮೇಲೆ ಡಿವೈಎಸ್‌ಪಿ ಕಳಗಿಡ್ಡಿ ನೇತೃತ್ವದ ತಂಡ ದಾಳಿ ನಡಿಸಿದೆ.

– ಕೃಪೆ: ಈ ಸಂಜೆ

Write A Comment