ಕರ್ನಾಟಕ

ಬಿಪಿಎಲ್ ಕಾರ್ಡ್‌ದಾರರಿಗೆ ಸಹಕಾರಿ ಸದಸ್ಯತ್ವ

Pinterest LinkedIn Tumblr

04BGSIDDU_2267234f

ಬೆಂಗಳೂರು, ಎ.27: ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢಗೊಳಿಸಲು ಸರಕಾರವೇ ಶೇರು ಹಣ ಭರಿಸಿ ಸಹಕಾರಿ ಸಂಘದ ಸದಸ್ಯರನ್ನಾಗಿ ಮಾಡಲು ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಸಹಕಾರ ಸೌಧದ ಆವರಣದಲ್ಲಿ ಕರ್ನಾಟಕ ಸಹಕಾರ ಇಲಾಖೆ ಆಯೋಜಿಸಿದ್ದ ಸಹಕಾರ ಸೌಧದ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸುಮಾರು 1.08 ಕೋಟಿ ಬಿಪಿಎಲ್ ಕುಟುಂಬಗಳಿವೆ. ಸರಕಾರವೇ ಸಹಕಾರಿ ಸಂಘಗಳಿಗೆ ಷೇರು ಹಣವನ್ನು ನೀಡಿ ಬಿಪಿಎಲ್ ಕುಟುಂಬದ ಸದಸ್ಯರೊಬ್ಬರನ್ನು ಸಹಕಾರಿ ಸಂಘದ ಸದಸ್ಯರನ್ನಾಗಿ ಮಾಡಲು ತೀರ್ಮಾನಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ಯಾವುದೇ ಸಹಕಾರಿ ಸಂಘದ ಸದಸ್ಯರು ನಿಸ್ವಾರ್ಥ ಸೇವೆ ಸಲ್ಲಿಸಿದರೆ ಮಾತ್ರ ಅಂತಹ ಸಂಘಗಳು ಅಭಿವೃದ್ಧಿಯಾಗುತ್ತವೆ. ಇಲ್ಲದಿದ್ದರೆ ಅವು ದಿವಾಳಿಯಾಗುತ್ತವೆ ಎಂದು ಅವರು ಎಚ್ಚರಿಸಿದರು.

ರಾಜ್ಯದಲ್ಲಿ ಸದ್ಯ 63 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪ್ರತೀ ಲೀಟರ್ ಹಾಲಿಗೆ 2ರೂ. ಹೆಚ್ಚುವರಿ ಪ್ರೋತ್ಸಾಹಧನ ಸೇರಿ ಒಟ್ಟು 4 ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಇದರಿಂದ ಬಹುತೇಕ ಕುಟುಂಬಗಳು ಆರ್ಥಿಕವಾಗಿ ಸದೃಢಗೊಂಡಿವೆ. ಈ ಹಿಂದೆ 38 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲು ಈಗ 63 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ ಎಂದರೆ ಇದಕ್ಕೆ ಸಹಕಾರಿ ಸಂಘಗಳೇ ಪ್ರಮುಖ ಕಾರಣ ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಒಟ್ಟು 38 ಸಾವಿರ ವಿವಿಧ ಸಹಕಾರ ಸಂಘಗಳಿವೆ. 2.22ಕೋಟಿ ಸದಸ್ಯರು ಕಾರ್ಯ ನಿರ್ವಹಿಸು ತ್ತಿದ್ದಾರೆ. ಪ್ರತಿಯೊಂದು ಕ್ಷೇತ್ರ ಅಭಿವೃದ್ಧಿಗೆ ಸಹಕಾರ ಇಲಾಖೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ವಿವರಿಸಿದರು. ಅಲ್ಪಸಂಖ್ಯಾತರು, ಹಿಂದುಳಿದವರು, ದೀನದಲಿತರು, ಬಡವರು, ಅಕ್ಷರಸ್ಥರು, ಅನಕ್ಷರಸ್ಥರು, ದುರ್ಬಲರು ಆರ್ಥಿಕವಾಗಿ ಮುಂದೆ ಬರಲು ಸಹಕಾರಿ ಕ್ಷೇತ್ರ ಉತ್ತಮ ಮಾರ್ಗವಾಗಿದೆ. ನಮ್ಮ ಸರಕಾರ ಸಹಕಾರ ಇಲಾಖೆಗೆ ಸಾಕಷ್ಟು ಕಾಳಜಿ ವಹಿಸುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸರಕಾರ ಶೂನ್ಯ ಬಡ್ಡಿ ದರದಲ್ಲಿ 3ಲಕ್ಷದವರೆಗೆ ಸಾಲ ವಿತರಿಸುತ್ತಿದೆ. ಗ್ರಾಮೀಣ ಪ್ರದೇಶಕ್ಕೆ ಸೀಮಿತವಾಗಿದ್ದ ಯಶಸ್ವಿನಿ ಕಾರ್ಯಕ್ರಮವನ್ನು ನಗರ ಪ್ರದೇಶಕ್ಕೂ ವಿಸ್ತರಿಸಲಾಗಿದೆ. ಇದರಿಂದ ಹಲವರ ಆರ್ಥಿಕ ಸ್ಥಿತಿ ಸುಧಾರಿಸಿದೆ. ಏಷ್ಯಾಖಂಡದಲ್ಲೇ ಮೊದಲ ಬಾರಿಗೆ ಸಹಕಾರ ಚಳವಳಿ ಪ್ರಾರಂಭವಾಗಿರುವುದು ಕರ್ನಾಟಕದಿಂದಲೇ ಎಂದು ತಿಳಿಸಿದರು. ಸಹಕಾರ ಕ್ಷೇತ್ರದಿಂದ ಬಂದವರು ನಾಯಕತ್ವ ಗುಣ ಬೆಳೆಸಿಕೊಂಡಿರುತ್ತಾರೆ. ನನಗೆ ಈ ಕ್ಷೇತ್ರದಿಂದ ಬರಲು ಸಾಧ್ಯವಾಗಲಿಲ್ಲ. ಆದರೂ ಈ ಕ್ಷೇತ್ರದ ಬಗ್ಗೆ ನನಗೆ ವಿಶೇಷ ಒಲವಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್, ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಮೇಲೆ ಸಹಕಾರ ಕ್ಷೇತ್ರದ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಮೈಸೂರಿನಲ್ಲಿ ಸಹಕಾರಿ ಅಕಾಡಮಿಗೆ ಚಾಲನೆ ನೀಡಲಾಗಿದೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಅಶ್ವತ್ಥನಾರಾಯಣ, ಸಚಿವ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಸೋಮಶೇಖರ್, ಮುನಿರತ್ನ, ಬಿ.ಆರ್.ಯಾವಗಲ್, ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಟಿ.ಎ.ಶರವಣ ಮತ್ತಿತರರು ಉಪಸ್ಥಿತರಿದ್ದರು.

Write A Comment