ಹುಬ್ಬಳ್ಳಿ,ಏ.26: ಬಿಬಿಎಂಪಿಯನ್ನು ಸದ್ಯದ ಸ್ಥಿತಿಯಲ್ಲೇ ಕಾಪಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಗದಗ, ರಾಯಚೂರು ಸೇರಿದಂತೆ ವಿವಿಧೆಡೆ ಮಳೆಯಿಂದ ಆಗಿರುವ ಬೆಳೆ ಹಾನಿ ಪರಿಶೀಲನೆಗಾಗಿ ಇಂದು ಹುಬ್ಬಳ್ಳಿಗೆ ಬಂದಿಳಿದ ಸಿದ್ದರಾಮಯ್ಯ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ ಈ ವಿಷಯ ತಿಳಿಸಿದ್ದಾರೆ. ಈಗಾಗಲೇ ವಿಶೇಷ ಅಧಿವೇಶನ ಕರೆದು ಬಿಬಿಎಂಪಿ ವಿಭಜನೆಗೆ ಶತಾಯಗತಾಯ ಪ್ರಯತ್ನ ನಡೆಸಿರುವ ಸರ್ಕಾರ ದಿಢೀರನೆ ನಿಲುವು ಬದಲಾಯಿಸಿದೆ ಎಂಬ ಅನುಮಾನ ಕಾಡುತ್ತಿದೆ.
ಸಿಎಂ ಸಿದ್ದರಾಮಯ್ಯನವರ ಈ ಹೇಳಿಕೆಯಿಂದ ವಿಭಜನೆ ಪ್ರಸ್ತಾಪ ಮುಂದೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ನಾಳೆ ನಡೆಯಲಿರುವ ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಚರ್ಚೆ ಯಾವ ಹಂತ ತಲುಪಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಇದೇ ವೇಳೆ ಬೆಳೆ ಹಾನಿಯಿಂದ ಸಂಕಷ್ಟಕ್ಕೊಳಗಾಗಿರುವ ರೈತರ ಪರಿಸ್ಥಿತಿ ನನಗೆ ಗೊತ್ತಿದೆ. ಪರಿಶೀಲನೆ ನಡೆಸಿ ವರದಿ ಬಂದ ನಂತರ ಸೂಕ್ತ ಪರಿಹಾರವನ್ನು ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಕಳಸ ಭಂಡೂರಿ ಯೋಜನೆ ಕುರಿತಂತೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಸಿಎಂ ಅವರನ್ನು ಪ್ರಶ್ನಿಸಿದಾಗ, ಸದ್ಯದ ಮಟ್ಟಿಗೆ ಈ ಸಮಸ್ಯೆಯನ್ನು ಬಗೆಹರಿಸಲು ನಾವೇ ಪ್ರಯತ್ನಿಸುತ್ತೇವೆ. ಇಲ್ಲವಾದರೆ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತೇವೆ ಎಂದು ತಿಳಿಸಿದರು.