ಕರ್ನಾಟಕ

ಕಚ್ಚಿದ ಹಾವಿನೊಂದಿಗೇ ಚಿಕಿತ್ಸೆಗೆ ಬಂದ ಬಾಲಕ!

Pinterest LinkedIn Tumblr

snake

* ರಾಘು ಕಾಕರಮಠ ಅಂಕೋಲಾ(ಉತ್ತರ ಕನ್ನಡ)
ಹಾವು ಕಚ್ಚಿತೆಂದರೆ ಎಂತಹವರೂ ಭಯಬೀಳುವುದು ಸಹಜ. ಆದರೆ ಕಚ್ಚಿದ ಹಾವನ್ನು ಬಾಲಕನೊಬ್ಬ ಕೈಚೀಲದಲ್ಲಿ ಬಂಧಿಸಿ, ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಕುತೂಹಲಕಾರಿ ಘಟನೆ ಸಮೀಪದ ಬೇಳಾ ಬಂದರಿನಲ್ಲಿ ಬುಧವಾರ ನಡೆದಿದೆ.

ಬೇಳಾ ಬಂದರಿನ 6 ನೇ ತರಗತಿ ವಿದ್ಯಾರ್ಥಿ ಸಂದೇಶ ಸುರೇಶ ನಾಯ್ಕ (11) ಎಂಬಾತ ಆಟವಾಡಲು ಹೋದಾಗ ಹಾವು ಕಚ್ಚಿತ್ತು. ಇದರಿಂದ ಗಾಬರಿಯಾಗದ ಆತ ಅದನ್ನು ಹಿಡಿದುಕೊಂಡೇ ಆಸ್ಪತ್ರೆ ಧಾವಿಸಿ ವೈದ್ಯರಿಗೆ ತೋರಿಸಿದ್ದಲ್ಲದೇ, ಚಿಕಿತ್ಸೆ ನೀಡಲು ವಿನಂತಿಸಿಕೊಂಡ.

ಆತನಿಗೆ ಕಚ್ಚಿದ್ದು ಸಾಮಾನ್ಯ ವಿಷದ ಹಾವೆಂದು ದೃಢಪಡಿಸಿಕೊಂಡ ಡಾ. ಸುಮಲತಾ, ವಿಷ ಏರದ ಹಾಗೆ ಚುಚ್ಚುಮದ್ದು ನೀಡಿ ವಿಶ್ರಾಂತಿ ಪಡೆಯಲು ಹೇಳಿದರು. ಆದರೆ ನಿದ್ದೆ ಮಾಡಿದರೆ ವಿಷ ಏರುತ್ತದೆಂದು ಯಾರೋ ಹೇಳಿದ್ದನ್ನು ಕೇಳಿದ್ದ ಸಂದೇಶ ನಿದ್ದೆ ಮಾಡಲು ಒಪ್ಪಲಿಲ್ಲ. ಮಾತ್ರವಲ್ಲ ಕೈಚೀಲದಲ್ಲಿದ್ದ ಹಾವನ್ನು ಜಪ್ಪಯ್ಯ ಅಂದರೂ ಬಿಡಲೊಪ್ಪಲಿಲ್ಲ.

ಈತನ ಬಳಿ ಹಾವಿರುವ ವಿಷಯ ತಿಳಿದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇತರ ರೋಗಿಗಳು ಕಾಲು ಕೀಳಲಾರಂಭಿಸಿದರು. ಅಲ್ಲದೇ, ನರ್ಸ್ ಒಬ್ಬರು ಈತನ ಬಳಿ ಇರುವ ಚೀಲದಲ್ಲಿ ಹಾವಿರುವುದು ತಿಳಿಯದೇ ಚುಚ್ಚುಮದ್ದು ನೀಡಲು ಬಂದು, ಹಾವನ್ನು ನೋಡಿ ಬೊಬ್ಬೆ ಹಾಕಿ ಹೊರಗೆ ಓಡಿದ ಘಟನೆಯೂ ನಡೆಯಿತು.

ಗುರುವಾರದ ಹೊತ್ತಿಗೆ ಚೇತರಿಸಿಕೊಂಡ ಸಂದೇಶನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಮನೆಗೆ ಕಳಿಸಲಾಗಿದೆ. ಅತ್ತ ಹಾವಿನ ಚೀಲದೊಂದಿಗೆ ಸಂದೇಶ ಮನೆಯ ಹಾದಿ ಹಿಡಿದರೆ, ಇತ್ತ ಆಸ್ಪತ್ರೆ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಬಾಲಕ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಹಾವನ್ನು ಕಾಡಿಗೆ ಬಿಡಲಾಗಿದೆ.

ಬಾಲಕನ ತಂದೆ ಸುರೇಶ ನಾಯ್ಕ, ಅರವಿಂದ ನಾಯ್ಕ, ಉಲ್ಲಾಸ ಗಾಂವಕರ, ಉಮೇಶ ಎಂ. ನಾಯ್ಕ, ಗಣಪತಿ ಡಿ. ನಾಯ್ಕ ಬುಧ ವಾರ ರಾತ್ರಿಯಿಡೀ ನಿದ್ದೆಗೆಟ್ಟು ಸಂದೇಶನ ಕೈಯಲ್ಲಿದ್ದ ಚೀಲದಿಂದ ಹಾವು ಹೊರಬರದಂತೆ ನೋಡಿಕೊಂಡರು. —–

ಬಾಲಕನಿಗೆ ಕಚ್ಚಿದ್ದು ಸಾಮಾನ್ಯ ವಿಷದ ಹಾವು. ಚಿಕಿತ್ಸೆ ಬಳಿಕ ಆತ ಸಂಪೂರ್ಣ ಚೇತರಿಸಿಕೊಂಡಿದ್ದಾನೆ. ಸೂಕ್ತ ಚಿಕಿತ್ಸೆಗಾಗಿ ಹಾವನ್ನು ತಂದು ತೋರಿಸುವದು ಮಲೆನಾಡಿನಲ್ಲಿ ಸಹಜ. ಆದರೆ ಚಿಕ್ಕ ಬಾಲಕ ಈ ಸಾಧನೆ ಮಾಡಿರುವುದು ಅಪರೂಪದ ಸಂಗತಿ. * ಡಾ. ಸುಮಲತಾ, ವೈದ್ಯಾಧಿಕಾರಿ ಅಂಕೋಲಾ.

Write A Comment