ಕರ್ನಾಟಕ

ಗ್ರಾಮದಲ್ಲಿ ದ್ವೇಷದ ಕಿಚ್ಚುಹಚ್ಚಿಸಿದ ಲಿವಿಂಗ್ ಟುಗೆದರ್ ಪ್ರಕರಣ

Pinterest LinkedIn Tumblr

Living-Together-in-Village

ನಂಜನಗೂಡು, ಏ.23-ತಾಲ್ಲೂಕಿನ ಕೂಡ್ಲಾಪುರದಲ್ಲಿ ಅನ್ಯ ಜಾತಿ ಪ್ರೇಮಿಗಳ ಲಿವಿಂಗ್ ಟುಗೆದರ್ ಪ್ರಕರಣ ಕಿಚ್ಚುಹಚ್ಚಿಸಿದ್ದು, ಎರಡು ಗುಂಪುಗಳ ನಡುವೆ ಮಾರಾಮಾರಿ, ಕಲ್ಲುತೂರಾಟ, ಮನೆಗಳ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡುಬಿಟ್ಟಿದ್ದು, ಪರಿಸ್ಥಿತಿ ಕೈಮೀರದಂತೆ ಎಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೂಡ್ಲಾಪುರದಾದ್ಯಂತ ಪೊಲೀಸರ ಬೂಟಿನ ಸದ್ದೇ ಕೇಳಿಬರುತ್ತಿದೆ.

ಘಟನೆ ಹಿನ್ನೆಲೆ:
ಗ್ರಾಮದ ಯುವಕನೊಬ್ಬ ಅನ್ಯಜಾತಿಗೆ ಸೇರಿದ ಯುವತಿಯ ಪ್ರೇಮಪಾಶಕ್ಕೆ ಬಿದ್ದಿದ್ದ. ಕೆಲವು ದಿನಗಳ ಹಿಂದೆ ಆಕೆಯೊಂದಿಗೆ ಊರು ಬಿಟ್ಟು ಪರಾರಿಯಾಗಿದ್ದು, ನಂತರ ಮತ್ತೆ ಗ್ರಾಮಕ್ಕೆ ಹಿಂದಿರುಗಿದ್ದರು. ತಾನು ಕರೆದೊಯ್ದಿದ್ದ ಯುವತಿಯನ್ನು ಆತ ವಿವಾಹವಾಗಿರಲಿಲ್ಲ. ಹೀಗಾಗಿ ಊರಿನವರು ಪಂಚಾಯ್ತಿ ನಡೆಸಿ ಇಬ್ಬರು ಅಗಲಲೇಬೇಕು, ಮತ್ತೆ ಯುವಕ ಹುಡುಗಿಯ ತಂಟೆಗೆ ಹೋಗಬಾರದು ಹಾಗೂ 2 ಲಕ್ಷ ರೂ. ದಂಡ ತೆರಬೇಕು ಎಂದು ತೀರ್ಮಾನ ಕೈಗೊಂಡಿದ್ದರು. ದಂಡ ತೆರಲು ಸಮ್ಮತ್ತಿಸಿದ್ದ ಯುವಕ ಕೊಟ್ಟ ಮಾತಿಗೆ ತಪ್ಪಿದ್ದಲ್ಲದೆ, ತನ್ನ ಪ್ರೇಯಸಿಯೊಂದಿಗೆ ಒಟ್ಟಿಗೆ ಇರಲಾರಂಭಿಸಿದ. ಈ ಪ್ರಕರಣ ಊರಿನ ಎರಡು ಅನ್ಯ ಜಾತಿಗಳ ನಡುವಿನ ವೈಷಮ್ಯಕ್ಕೆ ಎಡೆಮಾಡಿಕೊಟ್ಟಿತ್ತು.

ಒಬ್ಬರನ್ನು ಕಂಡರೆ ಮತ್ತೊಬ್ಬರು ಮುಗಿಬೀಳಲು ಕಾಯುವಂತಿತ್ತು ಗ್ರಾಮದ ಪರಿಸ್ಥಿತಿ. ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಎರಡು ಮನೆಯವರ ನಡುವೆ ಕದನವೇರ್ಪಟ್ಟಿತ್ತು. ಎರಡೂ ಕಡೆಯವರು ಗುಂಪು ಗುಂಪಾಗಿ ಕೈಗೆ ಸಿಕ್ಕ ದೊಣ್ಣೆ, ಕಲ್ಲು ಮತ್ತಿತರ ವಸ್ತುಗಳೊಂದಿಗೆ ಬಡಿದಾಟಕ್ಕಿಳಿದರು.
ಪರಸ್ಪರರ ಮನೆಗಳ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಹಲವಾರು ಮನೆಗಳು ಜಖಂಗೊಂಡಿವೆ. ಘಟನೆಯಲ್ಲಿ ಎರಡೂ ಕಡೆಯ 10ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮದಲ್ಲಿ ಮೊಕ್ಕಂಹೂಡಿರುವ ಪೊಲೀಸರು ಯಾವುದೇ ಹೆಚ್ಚಿನ ಅನಾಹುತ ಸಂಭವಿಸದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಎರಡೂ ಕುಟುಂಬದ ಹಿರಿಯನ್ನು ಕರೆದು ಶಾಂತಿ ಸಭೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಪರಿಸ್ಥಿತಿ ಶಾಂತವಾಗಿದ್ದರೂ ಯಾವುದೇ ಕ್ಷಣದಲ್ಲೂ ಮತ್ತೆ ಘರ್ಷಣೆ ಭುಗಿಲೇಳುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

Write A Comment