ಕರ್ನಾಟಕ

ತುಮಕೂರು ಭೀಕರ ಅಪಘಾತದಲ್ಲಿ 5 ಮಂದಿ ದುರ್ಮರಣ

Pinterest LinkedIn Tumblr

Tumakur-Accident

ತುಮಕೂರು/ತಿಪಟೂರು, ಏ.22-ಅತಿ ವೇಗವಾಗಿ ಬಂದ ಶಿಫ್ಟ್ ಕಾರು ಮತ್ತು ಗೂಡ್ಸ್ ವಾಹನಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಐದು ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಕಿಬ್ಬನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಶಿಫ್ಟ್ ಕಾರಿನಲ್ಲಿದ್ದ ತಿಪಟೂರು ತಾಲೂಕಿನ ಗುಡಿಗೊಂಡನಹಳ್ಳಿ ನಿವಾಸಿಗಳಾದ ಜಯಣ್ಣ (36), ಉಮೇಶ್ (43), ಮಹಲಿಂಗಪ್ಪ (55) ಮತ್ತು ತಿಮ್ಲಾಪುರ ನಿವಾಸಿಗಳಾದ ನಿರಂಜನ (53) ಮತ್ತು ರಮೇಶ (41) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗೂಡ್ಸ್ ವಾಹನದ ಚಾಲಕರಿಬ್ಬರು

ಗಂಭೀರ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ದೂರದ ಸಂಬಂಧಿಗಳಾದ ಇವರೆಲ್ಲರೂ ಪೂಜೆ ಮಾಡುವ ವಂಶಸ್ಥರಾಗಿದ್ದು, ನಿನ್ನೆ ಗುಬ್ಬಿಯಲ್ಲಿ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದು, ಸಮಾರಂಭ ಮುಗಿಸಿಕೊಂಡು ಗುಬ್ಬಿಯಿಂದ ತಿಪಟೂರಿಗೆ ವಾಪಸಾಗುತ್ತಿದ್ದರು.

ಮಧ್ಯರಾತ್ರಿ 12.30ರ ಸಂದರ್ಭದಲ್ಲಿ ತಿಪಟೂರಿಗೆ 15ಕಿ.ಮೀ. ದೂರದ ಕೋಣನಕಾವಲು, ರಾಷ್ಟ್ರೀಯ ಹೆದ್ದಾರಿ-206ರ ಬಳಿ ಬರುತ್ತಿದ್ದಂತೆ ತಿರುವಿನಲ್ಲಿ  ಎದುರುಗಡೆಯಿಂದ ಬಂದ ಗೂಡ್ಸ್ ವಾಹನ ಕಾರಿಗೆ ಅಪ್ಪಳಿಸಿದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದ ತಿಪಟೂರು ಡಿವೈಎಸ್‌ಪಿ ರವೀಂದ್ರ, ನಗರಠಾಣೆ ಸಬ್‌ಇನ್ಸ್‌ಪೆಕ್ಟರ್ ರಾಮಕೃಷ್ಣಪ್ಪ ಸ್ಥಳಕ್ಕೆ ದೌಡಾಯಿಸಿದ್ದು, ಕಾರಿನಿಂದ ಶವಗಳನ್ನು ಹೊರತೆಗೆಯುವಲ್ಲಿ ಹರಸಾಹಸಪಟ್ಟರು. ಕಾರು ಮತ್ತು ಗೂಡ್ಸ್ ವಾಹನ ಅತಿ ವೇಗವಾಗಿದ್ದುದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತದಿಂದಾಗಿ ಈ ಹೆದ್ದಾರಿಯಲ್ಲಿ ಸುಮಾರು ಎರಡರಿಂದ ಮೂರು ಕಿ.ಮೀ.ನಷ್ಟು ವಾಹನ ಸಂಚಾರ ಅಸ್ತವ್ಯಸ್ತವಾಗಿ ವಾಹನಗಳು ನಿಂತಲ್ಲೇ ನಿಂತವು.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಲಕ್ಷ್ಮಣ್ ಭೇಟಿ ನೀಡಿ ಸಿಬ್ಬಂದಿಗಳ ನೆರವಿನಿಂದ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರಾದರೂ ನಿಂತಿದ್ದ ವಾಹನಗಳು ಮುಂಜಾನೆ 4 ಗಂಟೆ ಸಮಯದಲ್ಲಿ ಸಂಚಾರ ಮುಂದುವರಿಸಿದವು.  ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಲಕ್ಷ್ಮಣ್ ಸುದ್ದಿಗಾರರೊಂದಿಗೆ ಮಾತನಾಡಿ, ಕೋಣನಕಾವಲು ಮತ್ತು ಬಿಳಿಗೆರೆ ನಡುವೆ ಬರುವ ತಿರುವಿನಲ್ಲಿ ಎರಡೂ ವಾಹನಗಳು ಅತಿ ವೇಗವಾಗಿ ಬಂದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಅತಿ ವೇಗ, ಅಜಾಗರೂಕತೆಯೇ ಕಾರಣ ಎಂದು ಹೇಳಿದರು.  ಈ ತಿರುವುಗಳಲ್ಲಿ ಅಪಘಾತ ವಲಯ ಎಂದು ನಾಮಫಲಕ ಹಾಕಿದ್ದರೂ ಸಹ ವಾಹನ ಚಾಲಕರು ಅದನ್ನು ಗಮನಿಸದೆ ಅತಿ ವೇಗವಾಗಿ ಸಂಚರಿಸುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಹೇಳಿದರು.  ಇಂದು ಮುಂಜಾನೆ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ಐದೂ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.  ತಿಮ್ಲಾಪುರ ಮತ್ತು ಗುಡಿಗೊಂಡನಹಳ್ಳಿಯಲ್ಲಿ ಸ್ಮಶಾನ ಮೌನ ಆವರಿಸಿದೆ. ಕಿಬ್ಬನಹಳ್ಳಿ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Write A Comment