ಕರ್ನಾಟಕ

ಮೇಲಿಂದ ಮೇಲ್ಯಾಕೆ ಮೇಲ್ಮನವಿ?: ಒಮ್ಮೆ ಮಾತ್ರ ಮೇಲ್ಮನವಿ ಸಲ್ಲಿಕೆ ಅವಕಾಶ ನಿಯಮ, ಯೋಚನಾ ಕ್ರಮದಲ್ಲಿ ಬದಲಾವಣೆ ಅಗತ್ಯ

Pinterest LinkedIn Tumblr

pvec11Ap15santhosh hegde1

-ಎನ್‌.ಸಂತೋಷ್‌ ಹೆಗ್ಡೆ
ತಮ್ಮ ವಿರುದ್ಧ ಬರುವ ಆದೇಶ ಪ್ರಶ್ನಿಸಿ, ಎಷ್ಟು ಬಾರಿ ಮೇಲ್ಮನವಿ ಸಲ್ಲಿಸಬಹುದು ಎಂಬ ಬಗ್ಗೆ ಸ್ಪಷ್ಟ ನಿಯಮ ರೂಪುಗೊಳ್ಳಬೇಕು. ಇದರಿಂದ ನ್ಯಾಯಾಲಯಗಳ ಮೇಲಿರುವ ಒತ್ತಡ ಕಡಿಮೆಯಾಗುತ್ತದೆ. ಆ ಮೂಲಕ, ವಿಚಾರಣೆ ಹಂತದಲ್ಲಿ ವರ್ಷಗಳ ಕಾಲ ಬಾಕಿ ಉಳಿಯುವ ಪ್ರಕರಣಗಳ ಸಂಖ್ಯೆಯೂ ಕಡಿಮೆ ಆಗುತ್ತದೆ.

ಮುನ್ಸೀಫ್‌ ನ್ಯಾಯಾಲಯದಲ್ಲಿ ಬಂದ ಆದೇಶ ಒಬ್ಬ ಕಕ್ಷಿದಾರರಿಗೆ ಸಮ್ಮತವಾಗದಿದ್ದರೆ ಅವರು ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುತ್ತಾರೆ. ಅಲ್ಲಿ ಬರುವ ಆದೇಶ ಸರಿ ಕಾಣದಿದ್ದರೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುತ್ತಾರೆ. ಅಲ್ಲಿಂದ ಪ್ರಕರಣ  ಸುಪ್ರೀಂಕೋರ್ಟ್‌ ಮೆಟ್ಟಿಲೇರುತ್ತದೆ. ಹೀಗೆ, ಒಂದಾದ ನಂತರ ಒಂದು ಮೇಲ್ಮನವಿ ಸಲ್ಲಿಸಲು ಅವಕಾಶ ಇರಬಾರದು.

ಪ್ರಕರಣದಲ್ಲಿ ಹುರುಳಿಲ್ಲ ಎಂಬುದು ಕೆಲವ ರಿಗೆ ಅರ್ಜಿ ದಾಖಲು ಮಾಡುವಾಗಲೇ ಗೊತ್ತಿರು ತ್ತದೆ. ಆದರೂ ಅರ್ಜಿ ಸಲ್ಲಿಸುತ್ತಾರೆ. ಒಂದು ತಡೆ ಯಾಜ್ಞೆ ದೊರೆತರೆ, ಐದಾರು ವರ್ಷ ಪ್ರಕರಣ ಎಳೆಯಬಹುದು ಎಂಬ ಆಲೋಚನೆಯೂ ಇರುತ್ತದೆ. ಮೇಲ್ಮನವಿ ಸಲ್ಲಿಸಲು ಎಷ್ಟೇ ಅವಕಾಶ ನೀಡಿದರೂ, ಅಂತಿಮವಾಗಿ ಬರುವ ತೀರ್ಪು ಒಂದೇ. ಹಾಗಾಗಿ ಒಂದು ವಿಚಾರಣಾ ನ್ಯಾಯಾಲಯ, ಒಂದು ಮೇಲ್ಮನವಿ ನ್ಯಾಯಾ ಲಯ ಇದ್ದರೆ ಸಾಕು ಎಂಬುದು ನನ್ನ ನಿಲುವು.

ಅತ್ಯಂತ ಅಪರೂಪದ, ಸಾಂವಿಧಾನಿಕ ಮಹತ್ವವುಳ್ಳ ಪ್ರಕರಣಗಳು ಮಾತ್ರ ಸುಪ್ರೀಂಕೋರ್ಟ್‌ ಮೆಟ್ಟಿಲೇರಬೇಕು. ತೀರಾ ಸಾಮಾನ್ಯವಾದ ಸಿವಿಲ್‌ ವ್ಯಾಜ್ಯಗಳನ್ನು ಸುಪ್ರೀಂಕೋರ್ಟ್‌ ಏಕೆ ವಿಚಾರಣೆ ನಡೆಸಬೇಕು? ಮೇಲ್ಮನವಿ ಕುರಿತ ನಮ್ಮ ಯೋಚನಾ ಕ್ರಮವೇ ಬದಲಾಗಬೇಕು. ಒಂದು ಬಾರಿ ಮೇಲ್ಮನವಿ ಸಲ್ಲಿಸುವ ಅವಕಾಶ ಎಂಬ ನಿಯಮ ರೂಪಿಸುವುದರಿಂದ ಸಂವಿಧಾನ ನೀಡಿರುವ ಯಾವ ಹಕ್ಕೂ ಮೊಟಕಾಗುವುದಿಲ್ಲ. ಹಲವು ದೇಶಗಳಲ್ಲಿ ಇಂಥದ್ದೊಂದು ವ್ಯವಸ್ಥೆ ಇದೆ.

ನನ್ನ ತಂದೆಯವರು (ನ್ಯಾಯಮೂರ್ತಿ ಕೆ.ಎಸ್‌.ಹೆಗ್ಡೆ) ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ 70ರ ದಶಕದಲ್ಲಿ ವಾರ್ಷಿಕವಾಗಿ ದಾಖಲಾಗುತ್ತಿದ್ದ ಪ್ರಕರಣಗಳ ಸಂಖ್ಯೆಗೂ ಈಗ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ. ನ್ಯಾಯಮೂರ್ತಿಗಳ ಸಂಖ್ಯೆ ಸಹ ಹೆಚ್ಚಾಗಿದ್ದರೂ ಈಗ ಅವರೆಲ್ಲರಿಗೂ ಒತ್ತಡವೂ ಹೆಚ್ಚಿದೆ. ಹೀಗಾಗಿ ಎಲ್ಲ ಪ್ರಕರಣಗಳೂ ಸುಪ್ರೀಂಕೋರ್ಟ್‌ ಮೆಟ್ಟಿಲೇರಬಹುದು ಎಂಬ ಪ್ರವೃತ್ತಿಗೆ ಕಡಿವಾಣ ಬೇಕು.

ದೇಶದ ಜನಸಂಖ್ಯೆ, ಇಲ್ಲಿನ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ಮತ್ತು ನ್ಯಾಯಾಧೀಶರ ಸಂಖ್ಯೆ ಒಂದಕ್ಕೊಂದು ಹೋಲಿಕೆ ಆಗುತ್ತಿಲ್ಲ. ಜನ ಕೂಡ ನ್ಯಾಯಾಲಯದ ಹೊರಗೆ ತಕರಾರು ಬಗೆಹರಿಸಿಕೊಳ್ಳಲು ಮುಂದಾಗುತ್ತಿಲ್ಲ.

ಪ್ರಕರಣಗಳು ನ್ಯಾಯಾಲಯಗಳಲ್ಲಿ ತ್ವರಿತವಾಗಿಇತ್ಯರ್ಥವಾಗದಿರುವ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಸಂವಿಧಾನಬಾಹಿರ ಶಕ್ತಿಗಳು ತಲೆ ಎತ್ತುತ್ತವೆ.

‘ನಿಮ್ಮ ಮನೆಯನ್ನು ಬಾಡಿಗೆದಾರರಿಂದ ಬಿಡಿಸಿಕೊಡಬೇಕೇ? ಇಷ್ಟು ಹಣ ಕೊಡಿ. ನಾವು ಕೆಲಸ ಮಾಡಿಕೊಡುತ್ತೇವೆ. ನ್ಯಾಯಾಲಯಕ್ಕೆ ಹೋದರೆ ನಿಮಗೂ ಖರ್ಚು, ಕೆಲಸ ಆಗುವುದು ನಿಧಾನ’ ಎಂದು ಹೇಳುವ ಗೂಂಡಾಗಳು ಹುಟ್ಟಿಕೊಳ್ಳುವ ಸ್ಥಿತಿಯೂ ಬರಬಹುದು.

ಪ್ರಕರಣಗಳು ವಿಚಾರಣೆ ಹಂತದಲ್ಲಿ ವರ್ಷಗಳ ಕಾಲ ಬಾಕಿ ಉಳಿಯಲು ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳ ಕೊರತೆ ಪ್ರಮುಖ ಕಾರಣಗಳು. ಇದಲ್ಲದೆ, ಕೆಲವು ಕಾನೂನುಗಳೂ ಇಂಥದ್ದೊಂದು ಸ್ಥಿತಿಗೆ ಕಾರಣ. ವಿಶೇಷವಾಗಿ, ಭಾರತೀಯ ಸಾಕ್ಷ್ಯ ಕಾಯ್ದೆಗೆ ಸಂಬಂಧಿಸಿದ ಕಾನೂನುಗಳು.

ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿರುವ ಸಾಕ್ಷಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಕ್ಷಿದಾರರಿಗೆ ಅವಕಾಶ ಕಲ್ಪಿಸಬೇಕು. ಅಲ್ಲದೆ, ಕೆಳ ಹಂತದ ನ್ಯಾಯಾಲಯದಲ್ಲಿ ಒಂದು ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಕಕ್ಷಿದಾರರು, ಅದೇ ಪ್ರಕರಣದ ಯಾವುದೋ ಒಂದು ಕಾನೂನಿನ ಅಂಶ ಮುಂದಿಟ್ಟುಕೊಂಡು ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳಲ್ಲಿ ಅರ್ಜಿ ಸಲ್ಲಿಸುವ ಪ್ರವೃತ್ತಿಗೆ ಕಡಿವಾಣ ಬೀಳಬೇಕು.     ಮಾಜಿ ಮುಖ್ಯಮಂತ್ರಿಗಳಾದ ಜೆ.ಜಯಲಲಿತಾ, ಲಾಲು ಪ್ರಸಾದ್ ಪ್ರಕರಣಗಳಲ್ಲೂ ಇಂಥವೇ ಕಾರಣಗಳಿಂದ ವಿಚಾರಣೆ ತಡವಾಯಿತು. ಕೆಳ ಹಂತದ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡು ಆದೇಶ ಹೊರಬಂದ ನಂತರ ಮೇಲ್ಮನವಿ ಸಲ್ಲಿಸುವ ಅವಕಾಶವಿದ್ದರೆ ಸಾಕು. ಹಾಗೆ ಮಾಡುವುದರಿಂದ ವಿಚಾರಣೆ ತ್ವರಿತವಾಗಿ ಆಗುತ್ತದೆ.

ಪ್ರಕರಣಗಳ ಸಂಖ್ಯೆ: ವಕೀಲರು ಒಂದೇ ಬಾರಿಗೆ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಲು ಒಪ್ಪಿಕೊಳ್ಳುವುದು, ಕೆಲವು ಪ್ರಕರಣಗಳಿಗೆ ಸಮಯ ಕೊಡಲು ಆಗದಿದ್ದಾಗ ಅದರ ವಿಚಾರಣೆಯನ್ನು ಮುಂದಕ್ಕೆ ಹಾಕಿಸಿಕೊಳ್ಳುವುದರಿಂದ ಕೂಡ ವಿಚಾರಣೆ ವಿಳಂಬ ಆಗುತ್ತಿದೆ ಎಂಬುದು ನಿಜ. ಇದರಲ್ಲಿ ಪ್ರಕರಣ ವಿಳಂಬ ಆಗುವುದು ವಕೀಲರಿಂದಲೇ.

ಇಂಥ ಸಂದರ್ಭಗಳಲ್ಲಿ ವಕೀಲರು, ‘ನನಗೆ ವಕಾಲತ್ತು ವಹಿಸಿಕೊಳ್ಳಲು ಆಗುವುದಿಲ್ಲ’ ಎಂದು ಕಕ್ಷಿದಾರರಿಗೆ ಹೇಳಬೇಕು. ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳಲ್ಲಿ ಇದು ಸಮಸ್ಯೆಯಾಗಿ ಪರಿಣಮಿಸಿಲ್ಲ. ಆದರೆ, ವಿಚಾರಣಾ ನ್ಯಾಯಾಲಯಗಳ ಹಂತದಲ್ಲಿ, ಒಬ್ಬ ವಕೀಲ ನಿಗದಿತ ಅವಧಿಯಲ್ಲಿ ಇಷ್ಟೇ ಸಂಖ್ಯೆಯ ಪ್ರಕರಣಗಳಲ್ಲಿ ವಕಾಲತ್ತು ವಹಿಸಬಹುದು ಎಂಬ ಕಾನೂನು ಜಾರಿಯಾದರೆ ಒಳ್ಳೆಯದೇನೋ.

ನ್ಯಾಯಾಧೀಶ ಮತ್ತು ವಕೀಲರ ನಡುವೆ ಕೆಲವು ಸಂದರ್ಭಗಳಲ್ಲಿ ಹೊಂದಾಣಿಕೆ ಏರ್ಪಟ್ಟು, ಪ್ರಕರಣಗಳ ವಿಚಾರಣೆ ಮುಂದಕ್ಕೆ ಹಾಕಿಸಿಕೊಳ್ಳುವ ಪದ್ಧತಿಯೂ ಇದೆ ಎನ್ನಲಾಗಿದೆ. ಹೀಗೊಂದು ಪದ್ಧತಿ ಇದೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಇದು ನ್ಯಾಯಾಂಗ ವ್ಯವಸ್ಥೆಯ ವೈಫಲ್ಯ ಅಲ್ಲ. ಒಬ್ಬ ವ್ಯಕ್ತಿ ಭ್ರಷ್ಟ ಆಗಿದ್ದರೆ ಹೀಗಾಗಬಹುದು. ಭ್ರಷ್ಟಾಚಾರವನ್ನು ಹಣ ಪಡೆದೇ ಮಾಡಬೇಕು ಎಂಬುದಿಲ್ಲ. ಹಣ ಪಡೆಯದೆಯೇ ವಿಚಾರಣೆ ಮುಂದೂಡುವುದೂ ಈ ವ್ಯಾಪ್ತಿಗೆ ಬರುತ್ತದೆ. ಇಂಥ ಪ್ರವೃತ್ತಿಯಿಂದ ವಿಚಾರಣೆಗಳ ವಿಳಂಬ ಆಗುತ್ತಿರುವುದು ತೀರಾ ಅತ್ಯಲ್ಪ. ಆದರೆ, ಇಂತಿಷ್ಟು ಬಾರಿ ಮಾತ್ರ ಪ್ರಕರಣದ ವಿಚಾರಣೆ ಮುಂದೂಡಬಹುದು ಎಂಬ ನಿಯಮ ಇರುವುದು ಉತ್ತಮ.

ತ್ವರಿತಗತಿ ನ್ಯಾಯಾಲಯ: ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣೆ ಹಂತದಲ್ಲಿ ಬಾಕಿ ಇರುವುದು ವಿಚಾರಣಾ ನ್ಯಾಯಾಲಯಗಳಲ್ಲಿ. ಭಾರತೀಯ ಸಾಕ್ಷ್ಯ ಕಾಯ್ದೆಯಲ್ಲಿ ಬದಲಾವಣೆ ಆಗದೆ, ತ್ವರಿತಗತಿ ನ್ಯಾಯಾಲಯಗಳಲ್ಲಿ ವಿಚಾರಣೆ ಬೇಗ ಆಗುವುದಿಲ್ಲ. ಆ ನ್ಯಾಯಾಲಯಗಳೂ ಎಲ್ಲ ಕಾಯ್ದೆ, ನಿಯಮಗಳನ್ನು ಪಾಲಿಸಲೇಬೇಕಲ್ಲ? ಹಾಗೆಯೇ ಸರ್ಕಾರಗಳು, ತ್ವರಿತಗತಿ ನ್ಯಾಯಾಲಯಗಳ ಆರಂಭಕ್ಕೆ ಅನುಮತಿ ನೀಡಿ, ಅಗತ್ಯ ಮೂಲಸೌಕರ್ಯ ನೀಡದಿದ್ದರೆ ಏನು ಪ್ರಯೋಜನ?
ಅರ್ಜಿ ಸಲ್ಲಿಕೆಯಾಗುವ ಸಂದರ್ಭದಲ್ಲೇ ಅದನ್ನು ತಿರಸ್ಕರಿಸುವ ಅಧಿಕಾರವನ್ನು ವಿಚಾರಣಾ ನ್ಯಾಯಾಲಯಕ್ಕೆ ನೀಡಬೇಕು.

ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳಿಗೆ ಈಗಾಗಲೇ ಇಂಥ ಅಧಿಕಾರ ಇದೆ. ವಿಚಾರಣಾ ನ್ಯಾಯಾಲಯ ಅರ್ಜಿ ತಿರಸ್ಕರಿಸಿದ್ದು ತಪ್ಪು ಎಂದು ಕಕ್ಷಿದಾರರಿಗೆ ಅನಿಸಿದರೆ ಆಗ ಬೇಕಾದರೆ ಅವರು ಅದನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಿ. ಅದಕ್ಕೂ ಮುನ್ನ, ಕೆಳ ಹಂತದ ವಿಚಾರಣಾ ನ್ಯಾಯಾಲಯಗಳಿಗೆ ಇಂಥದ್ದೊಂದು ಅಧಿಕಾರ ನೀಡಬೇಕಾಗಿದೆ.

**
ಪ್ರಕರಣಗಳು ನ್ಯಾಯಾಲಯಗಳಲ್ಲಿ ತ್ವರಿತವಾಗಿ ಇತ್ಯರ್ಥವಾಗದಿರುವ ಪರಿಸ್ಥಿತಿ ಇದೇ ರೀತಿ ಮುಂದುವರಿದಿದ್ದೇ ಆದರೆ, ಸಂವಿಧಾನಬಾಹಿರ ಶಕ್ತಿಗಳು ತಲೆ ಎತ್ತುತ್ತವೆ.

**
3  ಕೋಟಿ ಪ್ರಕರಣಗಳು ದೇಶದ ಕೋರ್ಟ್ಗಳಲ್ಲಿ  ಬಾಕಿ ಇವೆ, 5 ವರ್ಷ ಕಾಲಮಿತಿಯಲ್ಲಿ ವಿಚಾರಣೆ ಮುಗಿಸಲು ಸೂಚನೆ, 5 ವರ್ಷ ಕಾಲಮಿತಿ ಮೇಲ್ಮನವಿಗೆ ಅನ್ವಯಿಸದು

(ಲೇಖಕರು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ)
ನಿರೂಪಣೆ: ವಿಜಯ್‌ ಜೋಷಿ

Write A Comment