ಬೆಂಗಳೂರು, ಏ.16- ಬಿಬಿಎಂಪಿ ವಿಭಜನೆ ಮಾಡಬೇಕೆ ಬೇಡವೆ ಎಂಬ ಬಗ್ಗೆ ಮಾಜಿ ಮತ್ತು ಹಾಲಿ ಸಾರಿಗೆ ಸಚಿವರ ನಡುವೆ ಮಾತಿನ ಚಕಮಕಿ ನಡೆಯಿತು. ಯಡಿಯೂರು ವಾರ್ಡ್‌ನಲ್ಲಿ ಪಾಲಿಕೆಯಿಂದ ಇದೇ ಪ್ರಥಮ ಬಾರಿಗೆ ನಿರ್ಮಿಸಲಾಗಿರುವ ನವತಾರೆ ಷೆಟಲ್ ಬ್ಯಾಡ್ಮಿಂಟನ್ ಅಕಾಡೆಮಿ ಉದ್ಘಾಟನಾ ಸಮಾರಂಭದಲ್ಲಿ ಈ ಪ್ರಸಂಗ ನಡೆಯಿತು. ಮೊದಲು ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಬಿಬಿಎಂಪಿ ವಿಭಜನೆಗೆ ನಮ್ಮ ಪಕ್ಷದಿಂದ ಯಾರದ್ದು ಸಹಮತ ಇಲ್ಲ. ಇದರಲ್ಲಿ ಎರಡು ಮಾತಿಲ್ಲ.
ನಾವೆಲ್ಲ ಒಂದಾಗಿದ್ದೇವೆ ಎಂದರು. ಬಿಬಿಎಂಪಿ ವಿಭಜನೆ ಮಾಡಲು ನಾವು ಬಿಡುವುದಿಲ್ಲ. ನಿಗದಿತ ಸಮಯಕ್ಕೆ ಚುನಾವಣೆ ನಡೆಯಬೇಕು. ಒಂದು ವೇಳೆ ವಿಭಜನೆಯಾದರೆ ವೇತನದಲ್ಲಿ ಭಾರೀ ವ್ಯತ್ಯಾಸವಾಗುತ್ತದೆ. ಅಧಿವೇಶನ ನಡೆಸಿ ಒಪ್ಪಿಗೆ ಪಡೆಯಲು ಮುಂದಾದರೆ ನಾವು ಕಾನೂನು ಹೋರಾಟ ಮಾಡುತ್ತೇವೆ. ಅಖಂಡ ಬೆಂಗಳೂರು ಹಾಗೆಯೇ ಉಳಿಯಬೇಕು ಎಂದು ಹೇಳಿದರು.
ನಂತರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಒಂದೇ ಬಿಬಿಎಂಪಿಯಾಗಿ ಮುಂದುವರೆದು ನಗರ ಬೆಳೆಯುತ್ತಲೇ ಇದ್ದರೆ ನೀರು, ವಿದ್ಯುತ್, ಕಸದ ಸಮಸ್ಯೆ ಮಿತಿ ಮೀರುತ್ತದೆ. ಹಾಗಾಗಿ ವಿಭಜನೆ ಮಾಡಲು ಉದ್ದೇಶಿಸಿದ್ದೇವೆ ಎಂದು ತಿಳಿಸಿದರು.
ವಿಭಜನೆಗೆ ನ್ಯಾಯಾಲಯ ಒಪ್ಪಿಗೆ ಕೊಡುತ್ತದೆ ಎಂದುಕೊಂಡಿದ್ದೆವು. ನಮಗೆ ಸ್ವಲ್ಪ ಹಿನ್ನಡೆಯಾಗಿದೆ. ಹಾಗಾಗಿ ಅಧಿವೇಶನ ಕರೆದು ಪ್ರಸ್ತಾಪಿಸಿ ಒಪ್ಪಿಗೆಗೆ ಮತ್ತೆ ರಾಜ್ಯಪಾಲರಿಗೆ ಕಳುಹಿಸುತ್ತೇವೆ. ಪಾಲಿಕೆ ವಿಭಜನೆ ಮಾಡಲು ನಾವು ಸರ್ವಪ್ರಯತ್ನ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು. ಹೀಗೆ ಮಾಜಿ-ಹಾಲಿ ಸಾರಿಗೆ ಸಚಿವರು ಸಮಾರಂಭದಲ್ಲೇ ಮಾತಿನ ದಾಳ ಉರುಳಿಸಿದರು.
ನಂತರ ಸ್ಥಳೀಯ ಪಾಲಿಕೆ ಸದಸ್ಯ ಎನ್.ಆರ್.ರಮೇಶ್ ಮಾತನಾಡಿ, ಉದಯೋನ್ಮುಖ ಕ್ರೀಡಾಪಟುಗಳನ್ನು ಗುರುತಿಸಿ ಅವರನ್ನು ರಾಷ್ಟ್ರಮಟ್ಟದಲ್ಲಿ ಬೆಳೆಯುವಂತೆ ಮಾಡಲು ಅಕಾಡೆಮಿಯನ್ನು ತೆರೆದಿದ್ದೇವೆ. ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಂದ ಕಡಿಮೆ ವೆಚ್ಚದಲ್ಲಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು. ನಮ್ಮ ವಾರ್ಡಿನಲ್ಲಿ ಕುಡಿಯುವ ನೀರಿಗೆ ಅಭಾವವಾಗಬಾರದು ಎಂಬ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಘಟಕ ತೆರೆದಿದ್ದೇವೆ. ಮಾದರಿ ಪಾದಚಾರಿ ಮಾರ್ಗ ಮಾಡಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮೇಯರ್ ಶಾಂತಕುಮಾರಿ, ಉಪಮೇಯರ್ ಕೆ.ರಂಗಣ್ಣ, ಮಾಜಿ ಮೇಯರ್ ಎಸ್.ಕೆ.ನಟರಾಜ್, ಪಾಲಿಕೆ ಸದಸ್ಯ ಸಿ.ಕೆ.ರಾಮಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.