ಕರ್ನಾಟಕ

2,000 ಕೋಟಿ ರೂ. ಮೌಲ್ಯದ ಕೆರೆ ಒತ್ತುವರಿ ತೆರವು

Pinterest LinkedIn Tumblr

Bangalore-New-s

ಬೆಂಗಳೂರು, ಏ.16- ಅಕ್ರಮವಾಗಿ ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸಲು ಮುಂದಾಗಿರುವ ನಗರ ಜಿಲ್ಲಾಡಳಿತ ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿ ಸಾರಕ್ಕಿ ಕೆರೆಯ 82 ಎಕರೆ ಜಾಗದಲ್ಲಿ ಒತ್ತುವರಿಯಾಗಿರುವ 32.2 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಮನೆಗಳು, ಅಪಾರ್ಟ್‌ಮೆಂಟ್‌ಗಳು, ಕಟ್ಟಡಗಳು, ಅಂಗಡಿ ಮಳಿಗೆಗಗಳನ್ನು ಮುಲಾಜಿಲ್ಲದೆ ಕೆಡವಿ ಹಾಕಿ ಸುಮಾರು ಎರಡು ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಜಾಗವನ್ನು ವಶಪಡಿಸಿಕೊಂಡಿದೆ.

ಇಂದು ಬೆಳಗ್ಗೆಯೇ ಸುಮಾರು 800ಕ್ಕೂ ಹೆಚ್ಚು  ಸಿಬ್ಬಂದಿ, 50ಕ್ಕೂ ಹೆಚ್ಚು ಜೆಸಿಬಿ, ಅಪಾರ ಸಂಖ್ಯೆ ಪೊಲೀಸರು ಸಾರಕ್ಕಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 32.2  ಎಕರೆ ಪ್ರದೇಶವನ್ನು ವಶಪಡಿಸಿಕೊಂಡರು.

ಇದರ ಮೌಲ್ಯ ಬರೋಬ್ಬರಿ ಎರಡು ಸಾವಿರ ಕೋಟಿಗಳಾಗುತ್ತದೆ. ಕಾರ್ಯಾಚರಣೆ ವೇಳೆ ಸ್ಥಳೀಯರ ಭಾರೀ ವಿರೋಧ ವ್ಯಕ್ತವಾಯಿತಾದರೂ ಪೊಲೀಸರ ಬಂದೋಬಸ್ತ್ ನಡುವೆ ನಿರ್ದಾಕ್ಷಿಣ್ಯವಾಗಿ ಅಕ್ರಮ ಕಟ್ಟಡಗಳು, ಮನೆಗಳನ್ನು ನೆಲಸಮ ಮಾಡಲಾಯಿತು.
ನಿನ್ನೆಯಷ್ಟೆ ಇಟ್ಟಮಡು ಕೆರೆ ಪ್ರದೇಶದಲ್ಲಿ ಮಾಡಿಕೊಂಡಿದ್ದ ಒತ್ತುವರಿಯನ್ನು ತೆರವುಗೊಳಿಸಿದ್ದ  ಜಿಲ್ಲಾಡಳಿತ ಹೈಕೋರ್ಟ್ ವಿಭಾಗೀಯ ಪೀಠದ ಆದೇಶದಂತೆ ಇಂದು ಸಾರಕ್ಕಿ ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಕಟ್ಟಿದ್ದ ಕಟ್ಟಡಗಳು, ಕಾಲೇಜುಗಳು, ಅಪಾರ್ಟ್‌ಮೆಂಟ್‌ಗಳನ್ನು ನೆಲಸಮಗೊಳಿಸಿತು. ಆದರೆ ಈ ಪ್ರದೇಶದಲ್ಲಿದ್ದ ದೇವಾಲಯ, ಚರ್ಚ್, ಮಸೀದಿಗಳಿಗೆ ಕೈ ಹಾಕಲಿಲ್ಲ.  ಇವುಗಳನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬಿಡಲಾಗಿದೆ. ಸುಮಾರು 178 ಮನೆಗಳು, 6 ಸರ್ಕಾರಿ ಶಾಲೆಗಳು, 7 ಅಪಾರ್ಟ್‌ಮೆಂಟ್‌ಗಳು, ಪಿಬ್ಲ್ಯೂಡಿ ಕಚೇರಿ, 3 ಆಟದ ಮೈದಾನಗಳು ಎಲ್ಲವನ್ನೂ ತೆರವುಗೊಳಿಸಿ ಬೇಲಿ ಹಾಕಲಾಗಿದೆ.

ಕಾರ್ಯಾಚರಣೆ ನಂತರ  ಜಿಲ್ಲಾಧಿಕಾರಿ ವಿ.ಶಂಕರ್ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿ, ಕೆಲವರು ಸತ್ಯವನ್ನು ಮರೆಮಾಚಿ ಇಲ್ಲಿ ಅಕ್ರಮವಾಗಿ  ಕಟ್ಟಡಗಳನ್ನು ನಿರ್ಮಿಸಿದ್ದರು. ಹೈಕೋರ್ಟ್ ವಿಭಾಗೀಯ ಪೀಠ ಅಕ್ರಮ ಕಟ್ಟಡಗಳನ್ನು ತೆರವು ಮಾಡುವಂತೆ ಆದೇಶ ನೀಡಿತ್ತು. ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತಿತ್ತು. ಬಹಳ ದಿನಗಳ ಹಿಂದೆಯೇ ನಾವು ತೆರವುಗೊಳಿಸಬೇಕಾಗಿತ್ತು. ಈಗ ಮಾಡುತ್ತಿದ್ದೇವೆ. ಇದರಲ್ಲಿ ಯಾವುದೇ ಪಕ್ಷಪಾತವಿಲ್ಲ. ಈ ತೆರವು ಕಾರ್ಯಾಚರಣೆ ಇನ್ನು ನಾಲ್ಕೈದು ದಿನಗಳ ಕಾಲ ನಡೆಯಲಿದೆ.
ಇಲ್ಲಿ ಕೆಲವರು ಮನೆಗಳನ್ನು ಕಟ್ಟಿ ಬಾಡಿಗೆ ಹಾಗೂ ಭೋಗ್ಯಕ್ಕೆ ನೀಡಿದ್ದಾರೆ. ಇನ್ನು ಕೆಲವರು ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿದ್ದಾರೆ. ಅಕ್ರಮವಾಗಿ ಒತ್ತುವರಿಯಾಗಿರುವ ಎಲ್ಲವನ್ನೂ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.

ಇಂದು ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಯಿತು. ಬೆಂಗಳೂರು ದಕ್ಷಿಣ ತಾಲ್ಲೂಕು ಉತ್ತರಹಳ್ಳಿ ಹೋಬಳಿಯಲ್ಲಿರುವ ಸಾರಕ್ಕಿ ಕೆರೆಯು ಮೂರು ಸರ್ವೆ ನಂಬರ್‌ಗಳನ್ನು ಒಳಗೊಂಡಿದೆ. 82.24 ಎಕರೆಯಲ್ಲಿ 34  ಎಕರೆಯಷ್ಟು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದನ್ನು ಕಂದಾಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದರು.  ಕಳೆದ ಮೂರು ದಿನಗಳ ಹಿಂದೆ ಒತ್ತುವರಿಯಾಗಿರುವ ಜಾಗವನ್ನು ತೆರವುಗೊಳಿಸುವಂತೆ ಎಲ್ಲ ಕಟ್ಟಡಗಳ ಮಾಲೀಕರಿಗೆ ಜಿಲ್ಲಾಡಳಿತ ನೋಟಿಸ್ ನೀಡಿತ್ತು. ಇಂದು ಬೆಳಗ್ಗೆ ಏಕಕಾಲದಲ್ಲಿ ಕಂದಾಯ ಇಲಾಖೆ, ಬಿಎಂಟಿ ಎಫ್ ಅಧಿಕಾರಿಗಳ ಸಹಕಾರದೊಂದಿಗೆ ಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು.

Write A Comment