ಕರ್ನಾಟಕ

ದಾವಣಗೆರೆಯಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಬಂಧನ

Pinterest LinkedIn Tumblr

Sevalal-swamiji

ದಾವಣಗೆರೆ: ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿಯನ್ನು ದಾವಣಗೆರೆಯಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಶಾಲಾ ಶಿಕ್ಷಕಿಯೊಬ್ಬರು ಸಲ್ಲಿಸಿದ್ದ ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ 24 ಗಂಟೆಯೊಳಗೆ ಸ್ವಾಮೀಜಿಯನ್ನು ಬಂಧಿಸುವಂತೆ ಆದೇಶ ನೀಡಿತ್ತು. ಈ ಹಿನ್ನಲೆಯಲ್ಲಿ ಇಂದು ದಾವಣಗೆರೆ ಪೊಲೀಸರು ಸೇವಾಲಾಲ್ ಸ್ವಾಮೀಜಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಈ ಹಿಂದೆ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನನ್ನನ್ನು ಮುದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಈ ವಿಚಾರವನ್ನು ಬಹಿರಂಗ ಗೊಳಿಸಿದರೆ ತನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದಾವಣಗೆರೆಯ ನಾಗಿಬಾಯಿ ಎಂಬ ಮಹಿಳೆ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಮೂಲತಃ ದಾವಣಗೆರೆ ಜಿಲ್ಲೆ ಬೆಳವನೂರು ಸಮೀಪದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ನಾಗಿಬಾಯಿ ಅವರು 2006ರಿಂದಲೂ ಸ್ವಾಮೀಜಿ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ವಂಚನೆ ಮಾಡಿದ್ದಾರೆ. ಎರಡು ಬಾರಿ ನನ್ನ ಕೊಲೆಗೆ ಯತ್ನಿಸಿದ್ದಾರೆ. ಅವರಿಂದ ನನಗೆ ರಾಣ ಬೆದರಿಕೆ ಇದೆ ಎಂದು ದಾವಣಗೆರೆ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತಾದರೂ ಸ್ವಾಮೀಜಿ ಮಾತ್ರ ಕಲಾಪಕ್ಕೆ ಹಾಜರಾಗಿರಲಿಲ್ಲ. ಎರಡೆರಡು ಬಾರಿ ಸ್ವಾಮೀಜಿ ಗೈರು ಹಾಜರಾದ ಹಿನ್ನಲೆಯಲ್ಲಿ ನ್ಯಾಯಾಲಯ ಅವರಿಗೆ ನೋಟಿಸ್ ನೀಡಿತ್ತು. ಆದರೆ ಸ್ವಾಮೀಜಿ ನ್ಯಾಯಾಲಯದ ನೋಟಿಸ್ ಅನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಮಂಗಳವಾರ ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 24 ಗಂಟೆಯೊಳಗೆ ಸ್ವಾಮೀಜಿಯನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿತ್ತು.

ಇನ್ನು ಈ ಪ್ರಕರಣ 2 ವರ್ಷಗಳಷ್ಟು ಹಳೆಯದಾಗಿದ್ದು, 2013ರ ಜನವರಿಯಲ್ಲಿ ನಾಗಿಬಾಯಿ ಅವರು ಸೇವಾಲಾಲ್ ಸ್ವಾಮೀಜಿ ವಿರುದ್ಧ ದೂರು ನೀಡಿದ್ದರು. ಎರಡು ವರ್ಷಗಳಿಂದ ವಿಚಾರಣೆಗೆ ಸರಿಯಾಗಿ ಹಾಜರಾಗದ ಕಾರಣ ಸ್ವಾಮೀಜಿಯನ್ನು ಬಂಧಿಸಲು ಕೋರ್ಟ್ ಆದೇಶ ನೀಡಿತ್ತು. ಈ ಆದೇಶದಂತೆ ಬುಧವಾರ ಸ್ವಾಮೀಜಿಯನ್ನು ಬಂಧಿಸಲಾಗಿದೆ.

Write A Comment