ಕರ್ನಾಟಕ

ನ್ಯಾಯಕ್ಕಾಗಿ ಮೊರೆ ಇಡುತ್ತಿದೆಯೇ ಡಿ.ಕೆ.ರವಿಯ ಆತ್ಮ..? ಸಾರ್ವಜನಿಕರಲ್ಲಿ ಅನುಮಾನ !

Pinterest LinkedIn Tumblr

Ravi-NN

ಬೆಂಗಳೂರು, ಏ.8: ದಿನದ 24 ಗಂಟೆಯೂ ಕ್ರಿಯಾಶೀಲರಾಗಿರುತ್ತಿದ್ದ ದಕ್ಷ-ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವನ್ನಪ್ಪಿ 24 ದಿನಗಳಾಗಿದ್ದರೂ ಸೂಕ್ತ ತನಿಖೆ ನಡೆದು ಯಾವುದೇ ವರದಿಗಳು ಸರ್ಕಾರದ ಕೈ ಸೇರಿಲ್ಲ. ದೊಡ್ಡಕೊಪ್ಪಲಿನಲ್ಲಿ ಸಮಾಧಿಯಾಗಿರುವ ಅವರ ದೇಹ ಸಾವಿನ ನ್ಯಾಯಕ್ಕಾಗಿ ನಿರೀಕ್ಷಿಸುತ್ತಿರಬಹುದು… ಅವರ ಆತ್ಮ ಕೂಡ ಈ ವ್ಯವಸ್ಥೆಯ ವಿರುದ್ಧ ಕನಲುತ್ತಿರಬಹುದು… ಈ ಸಾವಿಗೆ ನ್ಯಾಯ ದೊರೆಯುವುದೇ..? ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಕಡಿವಾಣ ಬೀಳಬಹುದೇ… ಎಂಬ ಪ್ರಶ್ನೆಗಳು ಈಗ ಭೂತಾಕಾರವಾಗಿ ಕಾಡುತ್ತಿವೆ.

ಕಳೆದ ಮಾ.16ರಂದು ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢವಾಗಿ ಸಾವನ್ನಪ್ಪಿದ ನಂತರ ರಾಜ್ಯ ಸರ್ಕಾರ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಸಿಐಡಿ ತನಿಖೆಗೆ ಪ್ರಕರಣವನ್ನು ಒಪ್ಪಿಸಿತ್ತು. ಸಿಐಡಿ ತನಿಖೆ ನಡೆಸಿ ಮಧ್ಯಂತರ ವರದಿಯನ್ನೂ ನೀಡಿತ್ತು. ಆದರೆ, ವಿರೋಧ ಪಕ್ಷಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಮತ್ತು ರವಿ ಅವರ ಹೆತ್ತವರು ತಮಗೆ ಸಿಐಡಿ ತನಿಖೆ ಮೇಲೆ ಯಾವುದೇ ನಂಬಿಕೆ ಇಲ್ಲದಿರುವುದರಿಂದ ಪ್ರಕರಣವನ್ನು ಸಿಬಿಐಗೇ ವಹಿಸಬೇಕು ಎಂಬ ಹೋರಾಟ ಆರಂಭಿಸಿದರು.

ಪ್ರತಿಭಟನೆಗಳು, ಹೋರಾಟಗಳು ಮುಂದುವರಿದು ಅವುಗಳ ಒತ್ತಡಕ್ಕೆ ಮಣಿದ ರಾಜ್ಯಸರ್ಕಾರ ಕೊನೆಗೂ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತು. ಕೇಂದ್ರೀಯ ತನಿಖಾ ಸಂಸ್ಥೆಗೆ ಒಪ್ಪಿಸಿ ಸರ್ಕಾರ ಸುಮ್ಮನಿದ್ದಿದ್ದರೆ ಈ ವೇಳೆಗೆ ತನಿಖೆ ಆರಂಭವಾಗಿ ರವಿಯ ಆತ್ಮಕ್ಕೆ ಕೊಂಚ ಸಮಾಧಾನವಾದರೂ ಸಿಗುತ್ತಿತ್ತು. ಆದರೆ, ರಾಜ್ಯಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸುವಾಗ ಕೆಲವು ಷರತ್ತುಗಳನ್ನು ವಿಧಿಸಿತು. ಅದರಲ್ಲಿ ಮುಖ್ಯವಾಗಿ ಮೂರು ತಿಂಗಳೊಳಗೆ ವರದಿ ನೀಡಬೇಕು ಎಂಬುದು. ಇದರಿಂದ ಸಿಬಿಐ ತನಿಖೆ ಕೈಗೆತ್ತಿಕೊಳ್ಳದೆ ರಾಜ್ಯಸರ್ಕಾರಕ್ಕೆ ಷರತ್ತುಗಳನ್ನು ಸಡಿಲಗೊಳಿಸುವಂತೆ ಕೋರಿತ್ತು.

ಈ ನಡುವೆ ಘಟನೆಯ ದಿನದಿಂದಲೂ ಇಲ್ಲಿಯವರೆಗೆ ಅವರ ಬಗ್ಗೆ ಆರೋಪ-ಪ್ರತ್ಯಾರೋಪಗಳು, ಮಾಧ್ಯಮಗಳಲ್ಲಿ ಸಂವಾದಗಳು, ಸಾರ್ವಜನಿಕ ಪ್ರತಿಕ್ರಿಯೆಗಳು, ಪ್ರತಿಭಟನೆಗಳು, ಸಿಬಿಐ ತನಿಖೆಗೆ ಒತ್ತಾಯಗಳು, ರಾಜಕೀಯ ಪಕ್ಷಗಳ ಮೇಲಾಟಗಳು, ಆಡಳಿತ ಪಕ್ಷದ ಅಬ್ಬರಗಳು, ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆಯುತ್ತಲೇ ಬಂದವೇ ಹೊರತು ಅತ್ತ ಸಿಐಡಿ ವರದಿಯೂ ಇಲ್ಲ, ಇತ್ತ ಸಿಬಿಐ ತನಿಖೆಯೂ ಆರಂಭವಾಗಲಿಲ್ಲ. ಅವರ ಸಾವಿನ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಇಡೀ ರಾಜ್ಯವೇ ಒತ್ತಾಯಿಸಿತು. ವಿದ್ಯಾರ್ಥಿಗಳು, ನಾಗರಿಕರು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು, ಐಟಿ-ಬಿಟಿ ನೌಕರರು, ವಕೀಲರು, ಐಎಎಸ್ ಅಧಿಕಾರಿಗಳು ಸೇರಿದಂತೆ ಎಲ್ಲರೂ ಸಿಬಿಐ ತನಿಖೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಮಂಡಿಯೂರಿದ ರಾಜ್ಯಸರ್ಕಾರ ಮಾ.23ರಂದು ಸಿಬಿಐ ತನಿಖೆಗೆ ವಹಿಸಿತ್ತು.

ಸಿಬಿಐ ಕೋರಿಕೆಯ ಹಿನ್ನೆಲೆಯಲ್ಲಿ ಪ್ರಸ್ತುತ ರಾಜ್ಯಸರ್ಕಾರ ಷರತ್ತು ಸಡಿಲಗೊಳಿಸಿ ಮತ್ತೊಂದು ಅಧಿಸೂಚನೆ ಹೊರಡಿಸಿತು. ಈ ಎಲ್ಲ ಬೆಳವಣಿಗೆಗಳು ಮುಗಿಯಲು 24 ದಿನಗಳು ಕಳೆಯಿತು. ತನಿಖೆ ಪ್ರಾರಂಭವಾಗಲು ಇಷ್ಟು ದಿನಗಳು ಬೇಕೆ ಎಂಬುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಯಿತು.

ಇದು ಸರ್ಕಾರದ ತಪ್ಪೆ , ತಾಂತ್ರಿಕ ದೋಷವೇ, ಉದ್ದೇಶಪೂರ್ವಕ ಮಾಡಿದ ಎಡವಟ್ಟುಗಳೇ, ಸಾಕ್ಷ್ಯಾಧಾರ ನಾಶದ ಪ್ರಯತ್ನಗಳೇ… ಎಂಬ ಮಾತುಗಳು ಕೂಡ ಎಲ್ಲೆಡೆ ಕೇಳಿಬರತೊಡಗಿದವು. ಶಾಂತಿಯಿಂದ ಮಲಗಿರುವ ರವಿ ಅವರ ಆತ್ಮಕ್ಕೂ ಈ ಗೊಂದಲಗಳು ಅಶಾಂತಿಯನ್ನು ಮೂಡಿಸಿದ್ದರೆ ಅಚ್ಚರಿಯಿಲ್ಲ. ರವಿ ಅವರ ಸಾವಿನ ತನಿಖೆ ಪ್ರಾರಂಭವಾಗುವ ಬದಲು ಕಾನೂನು ಹೋರಾಟ, ಅನಗತ್ಯ ಚರ್ಚೆ, ಮಾಧ್ಯಮಗಳ ಸಂವಾದ, ಚಾರಿತ್ರ್ಯವಧೆ ಪ್ರಯತ್ನ ಮುಂತಾದ ಪ್ರಸಂಗಗಳು ನಡೆದವು. ಸಾವಿನ ಪ್ರಕರಣದ ಬಗ್ಗೆ ಪುಂಖಾನುಪುಂಖವಾಗಿ ಮಾಧ್ಯಮಗಳಲ್ಲಿ ಸುದ್ದಿಗಳು ಬಿತ್ತರವಾಗತೊಡಗಿದವು. ಪರವಾಗಿಯೋ, ವಿರೋಧವಾಗಿಯೋ ಒಟ್ಟಾರೆ ತನಿಖೆಗೆ ಅಡ್ಡಿಯಾಗುವಂತಹ ಸುದ್ದಿಗಳು ಇವಾದವು. ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಪ್ರಕರಣವನ್ನು ಬಳಸಿಕೊಂಡವು.

ಸಿಬಿಐ ತನಿಖೆಗೆ ವಹಿಸಿದ ಮೇಲೂ ಕೂಡ ರಾಜಕೀಯ ಪಕ್ಷಗಳ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಿಲ್ಲಲಿಲ್ಲ. ಸಾಮಾಜಿಕ ಕಾರ್ಯಕರ್ತರೊಬ್ಬರು ರವಿ ಅವರ ಸಾವಿನ ಹಿಂದೆ ಅವರ ಮಾವ ಮತ್ತು ಮಗಳ (ರವಿ ಪತ್ನಿ) ಕೈವಾಡವಿದೆ ಎಂದು ಆರೋಪಿಸಿ ನ್ಯಾಯಾಲಯದಲ್ಲಿ ದೂರನ್ನೂ ದಾಖಲಿಸಿದ್ದಾರೆ.

ರವಿ ಅವರ ಸಾವಿನ ಹಿಂದೆ ಹನಿಟ್ರ್ಯಾಪ್ ಇದೆ ಎಂದು ನಿನ್ನೆಯಷ್ಟೇ ಖ್ಯಾತ ವಕೀಲರೊಬ್ಬರು ಆರೋಪಿಸಿದ್ದಾರೆ. ಮಹಿಳಾ ಐಎಎಸ್ ಅಧಿಕಾರಿ ರವಿ ಅವರ ಬ್ಯಾಚ್‌ಮೇಟ್ ಅವರೊಂದಿಗಿನ ಫೋನ್ ಸಂಭಾಷಣೆ, ಇನ್ನಿತರ ವಿಷಯಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವ ಕುರಿತು ಅವರ ಪತಿ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಾಪಸ್ ಪಡೆಯಲಾಗಿದೆ. ಈ ಮಧ್ಯೆ ಸಿಐಡಿ ವರದಿ ಸೋರಿಕೆಯಾದ ಬಗ್ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯ ತೀರ್ಪನ್ನು ಹೈಕೋರ್ಟ್‌ನಲ್ಲಿ ಕಾಯ್ದಿರಿಸಲಾಗಿದೆ. ಒಟ್ಟಾರೆ ಪ್ರಾಮಾಣಿಕ ಅಧಿಕಾರಿ ರವಿ ಅವರ ನಿಗೂಢ ಸಾವಿನ ಪ್ರಕರಣದ ಬಗ್ಗೆ ನಿರ್ದಿಷ್ಟ ತನಿಖೆ ಇನ್ನಾದರೂ ಆರಂಭವಾಗಿ ಆದಷ್ಟು ಬೇಗ ವರದಿ ಬರಲಿ ಎಂಬುದು ಎಲ್ಲರ ನಿರೀಕ್ಷೆಯಾಗಿದೆ. ಆದರೆ, ಈಗ ಚೆಂಡು ಸಿಬಿಐ ಅಂಗಳದಲ್ಲಿರುವುದರಿಂದ ಸದ್ಯಕ್ಕೆ ಈ ಪ್ರಕರಣದ ಬಗ್ಗೆ ಹೆಚ್ಚು ವಿಶ್‌ಲೇಷಣೆ ಮಾಡುವಂತಿಲ್ಲ. ಆದರೆ, ರವಿಯ ಹೆತ್ತವರು ಮತ್ತು ಅವರ ಪತ್ನಿ ಹಾಗೂ ಸಹಸ್ರಾರು ಅಭಿಮಾನಿಗಳ ನಿರೀಕ್ಷೆಯಂತೆ ಸಿಬಿಐ ತನಿಖೆ ಬೇಗ ಮುಗಿದು ಯಾವುದಾದರೊಂದು ಇತ್ಯರ್ಥವಾಗಬೇಕಾಗಿದೆ.

Write A Comment