ಬೆಂಗಳೂರು, ಏ.1- ಮೂರ್ಖರ ದಿನಾಚರಣೆಯನ್ನು (ಏಪ್ರಿಲ್ ಫೂಲ್) ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಕತ್ತೆಗಳ ಮೆರವಣಿಗೆ ಮಾಡುವ ಮೂಲಕ ವಿನೂತನವಾಗಿ ಆಚರಿಸಿದರು. ಶಾಸನ ಸಭೆಯಲ್ಲಿ ಖಾಲಿ ಕುರ್ಚಿಗಳಿರುತ್ತವೆ. ಮೊಗಸಾಲೆಯಲ್ಲಿ ಕ್ರಿಕೆಟ್ ನೋಡುತ್ತಾ ಜನಪ್ರತಿನಿಧಿಗಳು ಕಾಲ ಹರಣ ಮಾಡುತ್ತಾರೆ. ಅದಕ್ಕಾಗಿ ಒಳಗೆ ಬರಲು ನಮಗೆ ಅವಕಾಶ ಕೊಡಿ ಎಂದು ಕತ್ತೆಗಳ ಕೊರಳಿಗೆ ಫಲಕ ಹಾಕಿ ಪ್ರತಿಭಟನೆ ಮಾಡುವ ಮೂಲಕ ವ್ಯವಸ್ಥೆ ವಿರುದ್ಧ ವ್ಯಂಗ್ಯವಾಡಿದರು.
ಕತ್ತೆಗಳ ಹಾಲು ಸರ್ವಶ್ರೇಷ್ಠವಾದದ್ದು. ಸಣ್ಣ ಮಕ್ಕಳಿಗೆ ಅದನ್ನು ಕುಡಿಸುತ್ತಾರೆ. ಕತ್ತೆಗಳು ಶ್ರಮ ವಹಿಸಿ ದುಡಿಯುತ್ತವೆ. ಅವುಗಳನ್ನು ಪ್ರತಿ ದಿನ ನೋಡಿದರೆ ಒಳ್ಳಯದಾಗುತ್ತದೆ. ಅಲ್ಲಗಳೆಯುವುದು ಬೇಡ. ಅವುಗಳ ಮುಂದೆ ನಾವು ಮೂರ್ಖರಾಗಿದ್ದೇವೆ ಎಂದು ಹೇಳುವ ಮೂಲಕ ಮೂರ್ಖರ ದಿನವನ್ನು (ಏಪ್ರಿಲ್ ಫೂಲ್) ಆಚರಿಸಿದರು. ವಿಧಾನ ಪರಿಷತ್, ವಿಧಾನಸಭೆಗಳು ಇತ್ತೀಚೆಗೆ ಅರ್ಥ ಕಳೆದುಕೊಳ್ಳುತ್ತಿವೆ. ಗೈರು ಹಾಜರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಲಹರಣ ಮಾಡುವವರೇ ಹೆಚ್ಚಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.