ಡಿಕೆ ರವಿ ಅವರ ಸಾವಿನ ಪ್ರಕರಣದಲ್ಲಿ ಅವರ ಮಾವ ಹನುಮಂತರಾಯಪ್ಪ ತನಿಖೆಯನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಎನ್ ಜಿಒ ಒಂದು ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ವಿಶ್ವ ಕನ್ನಡ ಸಮಾಜ ಸರ್ಕಾರೇತರ ಸಂಸ್ಥೆಯು ಈ ದೂರನ್ನು ದಾಖಲಿಸಿದ್ದು ರವಿ ಅವರ ಸಾವಿನ ಕುರಿತಾಗಿ ಇದ್ದ ಸಾಕ್ಷ್ಯಾಧಾರಗಳನ್ನು ಹನುಮಂತರಾಯಪ್ಪ ನಾಶ ಪಡೆಸಿರುವ ಸಾಧ್ಯತೆಗಳಿದ್ದು ಅವರನ್ನು ತಕ್ಷಣ ತನಿಖೆಗೊಳಪಡಿಸಿ ಎಂದು ತನ್ನ ದೂರಿನಲ್ಲಿ ಮನವಿ ಮಾಡಿದೆ.
ಸಿಐಡಿ ಪೊಲೀಸರು ಸಿಸಿಟಿವಿಯಲ್ಲಿರುವ ಕೆಲವು ದೃಶ್ಯಗಳನ್ನು ಡಿಲೀಟ್ ಮಾಡಿದ್ದಾರೆ ಎಂದು ಆರೋಪಿಸಿರುವ ಹನುಮಂತರಾಯಪ್ಪ ಅವರ ಈ ಹೇಳಿಕೆ ಅನೇಕ ಅನುಮಾನಗಳನ್ನು ಹುಟ್ಟಿಸಿದ್ದು ಅವರ ಹೇಳಿಕೆಯಲ್ಲಿ ಅನೇಕ ಗೊಂದಲಗಳಿವೆ. ಹಾಗಾಗಿ ಅವರು ಸಾಕ್ಷಿಗಳನ್ನು ನಾಶಪಡಿಸಲು ಪ್ರಯತ್ನಿಸಿರುವ ಸಾಧ್ಯತೆಗಳಿವೆ ಎಂದು ಎನ್ ಜಿಒ ವಿವರಿಸಿದ್ದು ಸಿಐಡಿ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತನಿಖಾ ಏಜೆನ್ಸಿಗೆ ಹೇಳದೇ ಹನುಮಂತರಾಯಪ್ಪ ಮುಚ್ಚಿಟ್ಟಿದ್ದೇಕೆ ಎಂದು ಪ್ರಶ್ನಿಸಿರುವ ಎನ್ ಜಿಒ ರವಿ ಮನೆಯ ಸಿಸಿಟಿವಿ ದೃಶ್ಯಗಳು ಡಿಲೀಟ್ ಆಗಿವೆ ಎಂದು ಹೇಳುವ ಹನುಮಂತರಾಯಪ್ಪ ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಏಕೆ ದಾಖಲಿಸಿಲ್ಲ ಎಂದು ಕೇಳಿದೆ.
ಅಲ್ಲದೇ ರಾಜ್ಯದ ಜನತೆ ರವಿ ಸಾವಿನ ಕುರಿತು ಮುಕ್ತ ತನಿಖೆಯಾಗಬೇಕು ಎಂದು ಹೇಳುತ್ತಿದ್ದರೆ, ಹನುಮಂತರಾಯಪ್ಪ ಈ ವಿಷಯವನ್ನು ಬಾಯ್ಬಿಬಿಡದೇ, ಸುಮ್ಮನಿದ್ದು, ಇದೀಗ ಪೊಲೀಸರ ಮೇಲೆ ಆಪಾದನೆ ಮಾಡುತ್ತಿರುವುದು ಅನುಮಾನ ಮೂಡಿಸಿದೆ ಎಂದು ಸಂಸ್ಥೆ ತನ್ನ ದೂರಿನಲ್ಲಿ ಆರೋಪ ಮಾಡಿದೆ.