ಯೆಮೆನ್, ಏ.1- ಮಿತಿಮೀರಿರುವ ಹಿಂಸಾಚಾರದ ನಡುವೆಯೇ ಭಾರತೀಯ ನೌಕಾಪಡೆ ಸಿಬ್ಬಂದಿ ಕಗ್ಗತ್ತಲ ರಾತ್ರಿಯಲ್ಲಿ ಯೆಮೆನ್‌ನ ಅಡೆನ್ ನಗರವನ್ನು ಪ್ರವೇಶಿಸಿ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ 349 ಮಂದಿ ಭಾರತೀಯರನ್ನು ಹೊರ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ರಾತ್ರಿ ಅಡೆನ್ ನಗರದ ಬಂದರು ಪ್ರವೇಶಿಸಿದ ಭಾರತೀಯ ನೌಕಾಪಡೆಯ (ಐಎನ್‌ಎಸ್) ಹಡಗು ಸುಮಿತ್ರಾ, 349 ಭಾರತೀಯರನ್ನು ಕರೆದುಕೊಂಡು ರಾತ್ರಿ ಸುಮಾರು 12 ಗಂಟೆ ವೇಳೆಗೆ ಅಲ್ಲಿಂದ ಹೊರಟಿತು. ಸುಮಿತ್ರಾ ಇಂದು ಮಧ್ಯಾಹ್ನದ ಸುಮಾರಿಗೆ ಡಿಜಿಬೌಟಿ ತಲುಪುವ ಸಾಧ್ಯತೆಯಿದ್ದು,
ಅಲ್ಲಿ ಸಿದ್ಧವಾಗಿರುವ ಭಾರತೀಯ ವಾಯುಪಡೆ ವಿಮಾನದಲ್ಲಿ ಭಾರತಕ್ಕೆ ತೆರಳಲಿದ್ದಾರೆ ಎಂದು ಐಎನ್‌ಎಸ್ ಸುಮಿತ್ರಾರ ವಕ್ತಾರರೊಬ್ಬರು ತಿಳಿಸಿದ್ದಾರೆ.
ಹಡಗು ಹತ್ತಿರುವ 345 ಜನರಲ್ಲಿ 220 ಮಂದಿ ಪುರುಷರು, 101 ಮಂದಿ ಮಹಿಳೆಯರು ಹಾಗೂ 28 ಮಕ್ಕಳು ಇದ್ದಾರೆ. ಈ ಕಾರ್ಯಾಚರಣೆಗೆ ‘ಆಪರೇಷನ್ ರಾಹತ್’ ಎಂದು ಹೆಸರಿಡಲಾಗಿದೆ. ಅಡೆನ್ ಬಂದರು ಪ್ರವೇಶಕ್ಕೆ ಅನುಮತಿ ದೊರೆತ ನಂತರ ರಾತ್ರಿ ಐಎನ್‌ಎಸ್ ಸುಮಿತ್ರಾ ಕಾರ್ಯಾಚರಣೆ ಆರಂಭಿಸಿದರು. ಯೆಮೆನ್‌ನಲ್ಲಿ ಒಟ್ಟು ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಭಾರತೀಯರಿದ್ದಾರೆ. ಯೆಮೆನ್‌ನಿಂದ ಬರುವ ಭಾರತೀಯರು ಭಾರತಕ್ಕೆ ಪ್ರಯಾಣಿಸಲು ಈಗಾಗಲೇ ಮಸ್ಕತ್‌ನಲ್ಲಿ ವಾಯುಪಡೆಯ 108 ಆಸನಗಳ ಎರಡು ಎ320 ವಿಮಾನಗಳು ಸಿದ್ಧವಾಗಿವೆ. ಈ ಎಲ್ಲ ವರದಿಗಳನ್ನೂ ಭಾರತ ವಿದೇಶಾಂಗ ಖಾತೆ ವಕ್ತಾರ ಸಯ್ಯದ್ ಅಕ್ಬರುದ್ದೀನ್ ಖಚಿತಪಡಿಸಿದ್ದಾರೆ.