ಕರ್ನಾಟಕ

ನಡೆದಾಡುವ ದೇವರಿಗೆ 108 ರ ಸಂಭ್ರಮ

Pinterest LinkedIn Tumblr

108-Years-Siddaganga

ತುಮಕೂರು, ಮಾ.31- ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಪದ್ಮವಿಭೂಷಣ ಡಾ. ಶ್ರೀ ಶಿವಕುಮಾರಸ್ವಾಮೀಜಿ 108ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರವೂ ಸೇರಿದಂತೆ ರಾಜ್ಯದ ಹಲವೆಡೆ  ಹಬ್ಬದ ವಾತಾವರಣ ಮನೆ ಮಾಡಿದೆ. ಶ್ರೀಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ  ಈ ಸಂಜೆ ಪತ್ರಿಕೆಯೊಂದಿಗೆ ಶ್ರೀ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮೀಜಿ  ಮಾತನಾಡಿ, ಕೇಂದ್ರ ಸರ್ಕಾರ ಶ್ರೀಗಳಿಗೆ ಪದ್ಮವಿಭೂಷಣ ನೀಡಿರುವುದು ನನಗೆ, ಭಕ್ತಾದಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೂ ಸಂತಸ ತಂದಿದೆ.

ಆದರೆ ಶ್ರೀಗಳಿಗೆ ಜೀವಿತಾವಧಿಯಲ್ಲಿ ಭಾರತರತ್ನ ಪ್ರಶಸ್ತಿ ನೀಡಬೇಕು. ಇದು ನನ್ನ ಆಶಯವಲ್ಲ. ರಾಜ್ಯ ಮತ್ತು ರಾಷ್ಟ್ರದ ಜನತೆಯ ಆಶಯವಾಗಿದೆ ಎಂದರು. ಮಠದಲ್ಲಿ ಪ್ರತಿನಿತ್ಯ ಸಾವಿರಾರು ಮಂದಿಗೆ ಅನ್ನದಾಸೋಹ ನಡೆಯುತ್ತಿದೆ, ಅಲ್ಲದೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಲಾಗುತ್ತಿದೆ.  ಇದು ಸುಲಭದ ಕೆಲಸವಲ್ಲ. ಇದಕ್ಕೆಲ್ಲಾ ಶ್ರೀಗಳ ದೈವಲೀಲೆಯೇ ಕಾರಣವಾಗಿದೆ ಎಂದರು.

ಶ್ರೀ ಮಠದಲ್ಲಿ ಓದಿದ ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವಿವಿಧ  ಹುದ್ದೆಗಳಲ್ಲಿದ್ದಾರೆ. ಅವರೆಲ್ಲರೂ ಮಠದ ಕೀರ್ತಿಯನ್ನು ಪಸರಿಸಿದ್ದಾರೆ. ಶ್ರೀಗಳ ಹುಟ್ಟುಹಬ್ಬವನ್ನು ಜಿಲ್ಲೆಯಾದ್ಯಂತ ಸಡಗರದಿಂದ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.
ನಗರದ ಹೊರಭಾಗದಲ್ಲಿರುವ ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ಸಾಂಕೇತಿಕವಾಗಿ ಶ್ರೀಗಳ ಹುಟ್ಟುಹಬ್ಬ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.  ಇಂದಿನಿಂದಲೇ ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಾಗರವೇ ಶ್ರೀ ಮಠಕ್ಕೆ ಹರಿದುಬರುತ್ತಿದ್ದು, ಇದಲ್ಲದೆ, ಮಠದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸುಮಾರು 10 ಸಾವಿರ ವಿದ್ಯಾರ್ಥಿಗಳ ಪೋಷಕರೂ ಸಹ ಮಠಕ್ಕೆ ಆಗಮಿಸುತ್ತಿದ್ದಾರೆ. ಇದಲ್ಲದೆ ರಾಜ್ಯದ ವಿವಿಧ ಮಠಗಳ ಮಠಾಧೀಶಕರು, ಸಾಹಿತಿಗಳು, ಲೇಖಕರು, ಚಿಂತಕರು ಮಠಕ್ಕೆ ಭೇಟಿ ನೀಡಿ ಶುಭಕೋರಲಿದ್ದಾರೆ.
ಇದಲ್ಲದೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಭಕ್ತಾದಿಗಳಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಕ್ಯಾತ್ಸಂದ್ರದಿಂದ ಹಿಡಿದು ಬಿ.ಎಸ್.ರಸ್ತೆ, ಬಟವಾಡಿ, ಟೌನ್‌ಹಾಲ್, ಸರ್ಕಾರಿ ಬಸ್ ನಿಲ್ದಾಣ, ಗುಬ್ಬಿ ಗೇಟ್ ಸೇರಿದಂತೆ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲೂ ಸ್ವಾಮೀಜಿಯವರಿಗೆ ಶುಭ ಕೋರುವ ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಹಾಗೂ ತಳಿರು-ತೋರಣಗಳಿಂದ ಕಂಗೊಳಿಸುತ್ತಿದೆ. ಇದರ ಜೊತೆಗೆ ಮಠದ ಆವರಣದಲ್ಲೂ ಸಹ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಮಠಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ದಾಸೋಹದ ವ್ಯವಸ್ಥೆಯನ್ನೂ ಮಾಡಲಾಗಿದೆ.

ಬಸವ ಜಯಂತಿ, ಅಂಬೇಡ್ಕರ್‌ಜಯಂಕಿ, ಕನಕ ಜಯಂತಿಗೆ ನೀಡಿರುವಂತೆ ತುಮಕೂರು ನಗರವನ್ನು ಇತಿಹಾಸ ಪುಟಕ್ಕೆ ಸೇರಿಸಿದ ಪದ್ಮವಿಭೂಷಣ ಡಾ.ಶ್ರೀ ಶಿವಕುಮಾರಸ್ವಾಮೀಜಿಗಳ ಜನ್ಮದಿನಕ್ಕೆ ಸರ್ಕಾರಿ ರಜೆ ಘೋಷಣೆ ಮಾಡಬೇಕು, ರಾಜ್ಯದ ಶಾಲಾ-ಕಾಲೇಜು, ಕಚೇರಿಗಳಲ್ಲಿ ಏಪ್ರಿಲ್ 1 ರಂದು ಶ್ರೀಗಳ ಕಾರ್ಯಕ್ರಮಗಳನ್ನು ನಡೆಸಬೇಕೆಂದು ಭಕ್ತಾದಿಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.  ಜೂನ್ 21ರಿಂದ 28ರೊಳಗೆ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಮಾಜಿ ಸಚಿವ ವಿ.ಸೋಮಣ್ಣ ಶ್ರೀಗಳಲ್ಲಿ ಮನವಿ ಮಾಡಿದ್ದು, ಅಂದಿನ ಕಾರ್ಯಕ್ರಮಕ್ಕೆ  ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಮತ್ತಿತರ ಗಣ್ಯರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ನಾಳೆ ನಡೆಯಲಿರುವ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಮತ್ತಿತರ ಗಣ್ಯರು ಆಗಮಿಸುವ ನಿರೀಕ್ಷೆಯಿದೆ.

Write A Comment