ಬೆಂಗಳೂರು: ವಿಧಾನಸಭೆಯಲ್ಲಿ ಕರ್ನಾಟಕ ವಿಧಾನಮಂಡಲಗಳ ವೇತನ, ಭತ್ಯೆಗಳ ತಿದ್ದುಪಡಿ ವಿಧೇಯಕ 2015 ಸೋಮವಾರ ಅಂಗೀಕಾರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಹಾಗೂ ಶಾಸಕರಿಗೆ ಭರ್ಜರಿ ಗಿಫ್ಚ್ ನೀಡಿದ್ದಾರೆ.
ಇದರಿಂದ ಶಾಸಕರ ವೇತನ 20 ಸಾವಿರದಿಂದ 25 ಸಾವಿರಕ್ಕೆ ಏರಿಕೆಯಾಗಿದ್ದು, ಕ್ಷೇತ್ರ ಪ್ರಯಾಣ ಭತ್ಯೆ 15 ಸಾವಿರದಿಂದ 40 ಸಾವಿರಕ್ಕೆ ಹಾಗೂ ದೂರವಾಣಿ ಭತ್ಯೆ 15 ಸಾವಿರದಿಂದ 20 ಸಾವಿರಕ್ಕೆ ಏರಿಕೆಯಾಗಿದೆ. ಈ ಮುಂಚೆ ಇತರೆ ಭತ್ಯೆಗಳು ಸೇರಿ 75 ಸಾವಿರ ರುಪಾಯಿ ಸಂಬಳ ಪಡೆಯುತ್ತಿದ್ದ ಶಾಸಕರು ಇನ್ನುಮುಂದೆ 1.25 ಲಕ್ಷ ವೇತನ ಪಡೆಯಲಿದ್ದಾರೆ.
ಶಾಸಕರ ಪ್ರಯಾಣ ಭತ್ಯೆ ಪ್ರತಿ.ಕಿ.ಮೀ.25 ರುಪಾಯಿ, ಪೆಟ್ರೋಲ್ ಮೀತಿಯನ್ನು 750ರಿಂದ 1000 ಲೀಟರ್ ಗೆ ಹೆಚ್ಚಿಸಲಾಗಿದೆ. ಇನ್ನು ಶಾಸಕರು ಭಾಗಿಯಾಗುವ ಪ್ರತಿ ಸಭೆಗೆ 1500 ರುಪಾಯಿ ಭತ್ಯೆ ಪಡೆಯಲಿದ್ದಾರೆ.
ಈ ವಿಧೇಯಕದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಳ ಸಹ ಏರಿಕೆಯಾಗಿದ್ದು, ಮುಖ್ಯಮಂತ್ರಿಗಳ ವೇತನವನ್ನು 30 ಸಾವಿರದಿಂದ 50 ಸಾವಿರಕ್ಕೆ ಏರಿಕೆ ಮಾಡಲಾಗಿದೆ.
ಸಚಿವರ ಮನೆ ಬಾಡಿಗೆ 40 ಸಾವಿರದಿಂದ 80 ಸಾವಿರಕ್ಕೆ ಹಾಗೂ, ಕ್ಯಾಬಿನೆಟ್ ಸಚಿವರ ವೇತನವನ್ನು 25 ಸಾವಿರದಿಂದ 40 ಸಾವಿರಕ್ಕೆ, ರಾಜ್ಯ ಸಚಿವರ ವೇತನ 15 ಸಾವಿರದಿಂದ 35 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೆ ಮನೆ ನಿರ್ವಹಣಾ ವೆಚ್ಚವನ್ನು 10 ಸಾವಿರದಿಂದ 20 ಸಾವಿರಕ್ಕೆ ಹೆಚ್ಚಿಸಲಾಗಿದೆ.