ಮೂಲ್ಕಿ:ಇಲ್ಲಿನ ಕಿಲ್ಪಾಡಿ ಗ್ರಾಮ ಪಂಚಾಯಿತಿಯ ಕೆರೆಕಾಡು ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಕುಡಿಯುವ ನೀರಿನ ಬವಣೆಯಿಂದ ಬಳಲುತ್ತಿದ್ದ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಲು ಸ್ವತಹ ಗ್ರಾಮ ಪಂಚಾಯಿತಿಯ ಅಧ್ಯಕ್ಷ, ಸದಸ್ಯರ ಸಹಿತ ಅಧಿಕಾರಿಗಳ ತಂಡವೇ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ ಘಟನೆ ಸೋಮವಾರ ನಡೆದಿದೆ. ಕೆರೆಕಾಡಿನ ಸಾರ್ವಜನಿಕ ಗಣೇಶನ ಕಟ್ಟೆ ಬಳಿ ಗ್ರಾಮಸ್ಥರ ಸಭೆಯನ್ನು ಆರಂಭದಲ್ಲಿ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ಸುವರ್ಣರಲ್ಲಿ ಗ್ರಾಮಸ್ಥರು ಎಳೆಎಳೆಯಾಗಿ ಸಮಸ್ಯೆಗಳನ್ನು ತೆರೆದಿಟ್ಟರು. ಕಳೆದ ಜನವರಿಯಿಂದ ನೀರಿನ ಬವಣೆ, ಮೂರು ಬೋರ್‌ವೆಲ್‌ಗಳಿಂದ ಸಾಕಷ್ಟು ನೀರಿದ್ದು ಲಭ್ಯವಿಲ್ಲ, ನೀರಿನ ವಿತರಣೆಯಲ್ಲಿ ಅವ್ಯವಸ್ಥೆ, ಪಂಪು ಚಾಲಕನ ನಿರ್ಲಕ್ಷ, ಸಮಸ್ಯೆಯ ಬಗ್ಗೆ ಪಂಚಾಯಿತಿ ಸದಸ್ಯರ ಗಮನಕ್ಕೆ ತಂದರು ಪ್ರಯೋಜನ ಇಲ್ಲ, ಕೆಸರು ಮಿಶ್ರಿತ ನೀರು, ತಿಂಗಳಿಗೆ ಸರಿಯಾಗಿ ಬಾರದ ಬಿಲ್ಲುಗಳು, ನಿರ್ವಹಣೆ ಇಲ್ಲದ ಪಂಪ್ ಶೆಡ್, ಈ ಬಗ್ಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಪಂಚಾಯಿತಿ ಅಧ್ಯಕ್ಷೆ ಶಾರದಾ ವಸಂತ್ ಪ್ರತಿಕ್ರಿಯಿಸಿ ಇಲ್ಲಿನ ಪೈಪ್‌ಲೈನ್ ಕಾಮಗಾರಿ ಸರಿಯಿಲ್ಲ ಹಾಗೂ ಮೀಟರ್ ಇಲ್ಲದೇ ಅಂಡರ್ ಗ್ರೌಂಡ್ ಟಾಂಕಿಗಳಿಂದ ಅಕ್ರಮ ಸಂಪರ್ಕ ಪಡೆದಿರುವುದನ್ನು ಸಕ್ರಮ ಮಾಡಬೇಕು, ಪಂಪು ಚಾಲಕನಿಗೆ ಎಚ್ಚರಿಕೆಯನ್ನು ನೀಡಲಾಗುವುದು ಎಂದು ಭರವಸೆ ನೀಡಿ ವಾರದ ಸಮಯವನ್ನು ಸಮಸ್ಯೆಗೆ ಪರಿಹಾರ ಕಾಣಲು ಕೇಳಿಕೊಂಡರು.
ಅಧ್ಯಕ್ಷರ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಜಟಾಪಟಿಯು ನಡೆಯಿತು. ನಂತರ ಅಂಡರ್ ಗ್ರೌಂಡ್ ಟಾಂಕಿಗಳನ್ನು ನಿರ್ಮಿಸಿದ ಮನೆಗಳಿಗೆ ಹಾಗೂ ಮೀಟರ್ ಅಳವಡಿಸದೇ ಇರುವ ಮನೆಗಳಿಗೆ ಗ್ರಾಮಸ್ಥರ ಸಹಿತ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡಲಾಯಿತು.
ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶೋಭಾ, ಉಪಾಧ್ಯಕ್ಷ ಮೋಹನ್ ಕುಬೆವೂರು, ಸದಸ್ಯರಾದ ಗೀತಾ ಆಚಾರ್ಯ, ಕೃಷ್ಣ ಶೆಟ್ಟಿಗಾರ್, ಗ್ರಾಮಸ್ಥರಾದ ಶ್ರೀಕಾಂತ್ ರಾವ್, ಮಾಧವ ಶೆಟ್ಟಿಗಾರ್, ಗಣೇಶ್ ಆಚಾರ್ಯ, ಹರೀಶ್ ಶೆಟ್ಟಿಗಾರ್, ವಸಂತ್ ಆಚಾರ್ಯ, ಗಣೇಶ್ ಕೋಟ್ಯಾನ್ ಇನ್ನಿತರರು ಇದ್ದರು.
ನರೇಂದ್ರ ಕೆರೆಕಾಡು_