ಕರ್ನಾಟಕ

ಹಸಿ ಕಸದ ಕಾಂಪೋಸ್ಟ್‌ ರೂಪಾಂತರ

Pinterest LinkedIn Tumblr

psmec30kasa2

-ದಯಾನಂದ
ಬೆಂಗಳೂರು ದಿನದಿಂದ ದಿನಕ್ಕೆ ‘ಅಪಾರ್ಟ್‌ಮೆಂಟ್‌ ನಗರಿ’ಯಾಗಿ ಬೆಳೆಯುತ್ತಿದೆ. ನಗರದಲ್ಲಿ ಅಪಾರ್ಟ್‌ಮೆಂಟ್‌ಗಳು ಗಗನಚುಂಬಿಸಲು ಪೈಪೋಟಿ ನಡೆಸುತ್ತಿವೆ. ಐದಾರು ಊರುಗಳನ್ನು ಒಂದು ದೊಡ್ಡ ಅಪಾರ್ಟ್‌ಮೆಂಟ್‌ ತನ್ನೊಳಗೆ ಹುದುಗಿಸಿಕೊಳ್ಳಬಲ್ಲುದು. ಹಾಗಾದರೆ ದಿನವೊಂದಕ್ಕೆ ಅಪಾರ್ಟ್‌ಮೆಂಟ್‌ಗಳಿಂದ ಎಷ್ಟೊಂದು ತ್ಯಾಜ್ಯ ಹೊರ ಬರಬಹುದಲ್ಲವೇ!

ನಗರ ಬೆಳೆಯುತ್ತಿರುವಂತೆ ತ್ಯಾಜ್ಯದ ಸಮಸ್ಯೆಯೂ ಬೃಹತ್ತಾಗುತ್ತಿದೆ. ಅಡ್ಡಡ್ಡ ಬೆಳೆಯುತ್ತಿದ್ದ ಊರು ಈಗ ಉದ್ದುದ್ದವಾಗಿಯೂ ಬೆಳೆಯುತ್ತಿರುವುದರಿಂದ ತ್ಯಾಜ್ಯದ ಉತ್ಪಾದನೆ ಕೂಡ ಹೆಚ್ಚಾಗುತ್ತಿದೆ. ಮೂಲದಲ್ಲೇ ಕಸ ಸಂಸ್ಕರಣೆಯಾದರೆ ಮಾತ್ರ ಕಸದ ಸಮಸ್ಯೆಗೆ ಪರಿಹಾರ ಸಾಧ್ಯ. ಈ ನಿಟ್ಟಿನಲ್ಲಿ ‘ರೆಡೊಂಟುರಾ’ ಕಂಪೆನಿಯು ಸಾವಯವ ತ್ಯಾಜ್ಯದ ಸಂಸ್ಕರಣೆಗೆಂದು ಹೊಸ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ.

ಅಪಾರ್ಟ್‌ಮೆಂಟ್‌, ಕಲ್ಯಾಣ ಮಂಟಪ, ಹೋಟೆಲ್‌ಗಳಲ್ಲಿ ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯದಲ್ಲಿ ಹಸಿಕಸವೇ ಹೆಚ್ಚು. ಹಸಿಕಸದ ಸಂಸ್ಕರಣೆಗಾಗಿಯೇ ಈ ಯಂತ್ರವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ‘ನಗರದಲ್ಲಿ ಕೆಲವೆಡೆ ಹಸಿಕಸದಿಂದ ಗೋಬರ್‌ಗ್ಯಾಸ್‌ ಉತ್ಪಾದನೆಯಲ್ಲಿ ತೊಡಗಿದ್ದರೂ ಅದರಿಂದ ಉಳಿಯುವ ಸ್ಲರಿಯ ನಿರ್ವಹಣೆ ಸಮರ್ಪಕವಾಗಿ ಆಗುವುದಿಲ್ಲ. ಹೀಗಾಗಿ ಹಸಿತ್ಯಾಜ್ಯದ ನಿರ್ವಹಣೆ ಕಷ್ಟವೆನಿಸಬಹುದು. ಅಂಥವರಿಗಾಗಿ ನಮ್ಮ ಹೊಸ ಯಂತ್ರ ಹೆಚ್ಚು ಅನುಕೂಲ’ ಎನ್ನುತ್ತಾರೆ ‘ರೆಡೊಂಟುರಾ’ ಕಂಪೆನಿಯ ಮುಖ್ಯಸ್ಥ ಅಭಿಷೇಕ್‌ ಗುಪ್ತಾ.

‘ಅಡುಗೆ ಮನೆಯ ಹಸಿಕಸದಿಂದ ಹಿಡಿದು ಎಲ್ಲ ರೀತಿಯ ಸಾವಯವ ತ್ಯಾಜ್ಯವನ್ನೂ ಈ ಯಂತ್ರ 24 ಗಂಟೆಯಲ್ಲಿ ಸಂಸ್ಕರಿಸುತ್ತದೆ. ಯಂತ್ರದ ಒಂದು ಭಾಗ ಸಾವಯವ ತ್ಯಾಜ್ಯದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಬಳಿಕ ಯಂತ್ರದ ಮಧ್ಯಭಾಗದಲ್ಲಿರುವ  ಘಟಕದಲ್ಲಿ ಕಸ ಸಂಸ್ಕರಣೆಗೊಂಡು 24 ಗಂಟೆಗಳಲ್ಲಿ ಕಾಂಪೋಸ್ಟ್‌ ಆಗಿ ರೂಪಾಂತರಗೊಳ್ಳುತ್ತದೆ’ ಎಂಬುದು ಯಂತ್ರದ ಬಗ್ಗೆ ಗುಪ್ತಾ ನೀಡುವ ವಿವರಣೆ.

‘ಯಂತ್ರಕ್ಕೆ ಹಾಕುವ ಒಟ್ಟು ತ್ಯಾಜ್ಯದ ಶೇ 10ರಷ್ಟು ಮಾತ್ರ ಕಾಂಪೋಸ್ಟ್‌ ಆಗಿ ಹೊರಕ್ಕೆ ಬರುತ್ತದೆ. ಇದರಿಂದ ಕಸ ಸಂಸ್ಕರಣೆಯ ನಂತರದ ಶೇಷ ಭಾಗ ಕಡಿಮೆಯಾಗುತ್ತದೆ. ಅಲ್ಲದೆ ಈ ಯಂತ್ರದಿಂದ ತ್ಯಾಜ್ಯ ಸಂಸ್ಕರಣೆಯ ಅವಧಿ, ಸಾಗಾಣಿಕೆ ವೆಚ್ಚ ತಗ್ಗುವುದಲ್ಲದೆ ನಿರ್ವಹಣೆಯೂ ಸುಲಭ’ ಎನ್ನುತ್ತಾರೆ ಅವರು.

‘ಸದ್ಯ 250ಕೆ.ಜಿ ಸಂಸ್ಕರಣ ಸಾಮರ್ಥ್ಯದ ಯಂತ್ರಕ್ಕೆ ಹೆಚ್ಚು ಬೇಡಿಕೆ ಇದೆ. ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ಸಾಮರ್ಥ್ಯದ ಯಂತ್ರಕ್ಕೆ ಬೇಡಿಕೆ ಸಲ್ಲಿಸಿದರೆ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಹೊಸ ಯಂತ್ರ ತಯಾರಿಸಿಕೊಡಲೂ ಸಿದ್ಧ’ ಎನ್ನುವ ಗುಪ್ತಾ, ಈ ಯಂತ್ರ ಪರಿಸರ ಸ್ನೇಹಿಯೂ ಹೌದು ಎನ್ನುತ್ತಾರೆ.

‘ಅಪಾರ್ಟ್‌ಮೆಂಟ್‌, ಹೋಟೆಲ್‌, ಖಾಸಗಿ ಕಂಪೆನಿಗಳು ಸೇರಿದಂತೆ ನಗರದಲ್ಲಿ ಈವರೆಗೆ ಸುಮಾರು ನೂರು ಕಡೆ ನಮ್ಮ ಈ ಯಂತ್ರವನ್ನು ಈಗಾಗಲೇ ಅಳವಡಿಸಿದ್ದೇವೆ. ಯಂತ್ರದ ಕಾರ್ಯಕ್ಷಮತೆ ಚೆನ್ನಾಗಿದೆ, ನಿರ್ವಹಣೆಯೂ ಸುಲಭ. ವಿದ್ಯುತ್‌ನಿಂದ ಕಾರ್ಯನಿರ್ವಹಿಸುವ ಈ ಯಂತ್ರಕ್ಕೆ ದಿನವೊಂದಕ್ಕೆ ಸುಮಾರು ಎರಡು ಯೂನಿಟ್‌ ವಿದ್ಯುತ್‌ ಸಾಕಾಗುತ್ತದೆ’ ಎಂಬುದು ಅವರ ಯಂತ್ರ ವ್ಯಾಖ್ಯೆ.

ಕಾಂಪೋಸ್ಟ್‌ಗೂ ಹಣ ಪಾವತಿ
‘ನಗರದಲ್ಲಿ ಹೆಚ್ಚುತ್ತಿರುವ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಮ್ಮ ಈ ಸಾವಯವ ತ್ಯಾಜ್ಯ ಸಂಸ್ಕರಣಾ ಯಂತ್ರ ಹೊಸ ಹೆಜ್ಜೆ. ಈ ಯಂತ್ರದಿಂದ ಉತ್ಪಾದನೆಯಾದ ಕಾಂಪೋಸ್ಟ್‌ ಅನ್ನು ನಮ್ಮ ಸಿಬ್ಬಂದಿಯೇ ಸ್ಥಳಕ್ಕೆ ಬಂದು ಸಂಗ್ರಹಿಸುತ್ತಾರೆ. ಇದನ್ನು ಪುಕ್ಕಟೆಯಾಗಿ ಕೊಡಬೇಕಿಲ್ಲ. ತಯಾರಾದ ಕಾಂಪೋಸ್ಟ್‌ಗೆ ಹಣವನ್ನೂ ನೀಡುತ್ತೇವೆ’.
ಅಭಿಷೇಕ್‌ ಗುಪ್ತಾ, ಮುಖ್ಯಸ್ಥ, ‘ರೆಡೊಂಟುರಾ’ ಕಂಪೆನಿ

ಅಂಕಿ ಅಂಶ
24 ಗಂಟೆಯಲ್ಲಿ ತ್ಯಾಜ್ಯ ಸಂಸ್ಕರಣೆ  ₹ 3 ಲಕ್ಷ ಘಟಕ ವೆಚ್ಚ

ಸಂಪರ್ಕ ಸಂಖ್ಯೆ:
080–25200189 / 32556008
ವೆಬ್‌ಸೈಟ್‌: www.reddonatura.com

Write A Comment