ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರಿಗೆ ಕಿರುಕುಳ ಹೆಚ್ಚಾಗುತ್ತಿದ್ದು, ಅಂಕಿ ಅಂಶವೊಂದರ ಪ್ರಕಾರ ಬೆಂಗಳೂರಿನಲ್ಲಿ ಶೇ.40ರಷ್ಟು ಹಿರಿಯರು ಒಂದಲ್ಲಾ ಒಂದು ಮಾನಸಿಕ, ದೈಹಿಕ ವೇದನೆ ಅನುಭವಿಸುತ್ತಿರುವುದು ಅತ್ಯಂತ ದುಃಖದ ಸಂಗತಿ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ನಗರ ಪೊಲೀಸ್, ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್ ಹಾಗೂ ಪ್ರಾದೇಶಿಕ ಸಂಪನ್ಮೂಲ ತರಬೇತಿ ಕೇಂದ್ರದ ಸಹಯೋಗದೊಂದಿಗೆ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯೋಜಿಸಿದ್ದ ಹಿರಿಯರ ನಿಂದನೆ ಮತ್ತು ಹಿರಿಯರ ಮೇಲಾಗುತ್ತಿರುವ ದೌರ್ಜನ್ಯಗಳ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ದೊಡ್ಡವರಿಗೆ ಗೌರವ ಕೊಡುವುದು ಪ್ರತೀತಿ. ಆದರೆ, ಇತ್ತೀಚಿನ ದಿನಗಳಲ್ಲಿ ಹಿರಿಯರಿಗೆ ಗೌರವ ಸಲ್ಲಿಸುವ ಪ್ರವೃತ್ತಿ ಕಡಿಮೆಯಾಗುತ್ತಿದ್ದು,ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು. ಹಿರಿಯರು ಶಾರೀರಿಕವಾಗಿ ಆರೋಗ್ಯವಾಗಿದ್ದರೂ ಸಹ ಮಾನಸಿಕವಾಗಿ ದುಃಖ ಅನುಭವಿಸುತ್ತಿದ್ದಾರೆ. ಹಣ-ಸಂಪತ್ತು ಇದ್ದರೂ ಸಹ ಮಕ್ಕಳೂ ಸೇರಿದಂತೆ ಎಲ್ಲರಿಂದಲೂ ದೌರ್ಜನ್ಯ ಸಹಿಸಿಕೊಳ್ಳಬೇಕಾದ ಪರಿಸ್ಥಿತಿ ನಮ್ಮಲ್ಲಿ ಉದ್ಬವವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹಿರಿಯ ನಾಗರಿಕರು ತಮ್ಮ ಸಮಸ್ಯೆಯನ್ನು ಹೇಳಲು ಠಾಣೆಗೆ ಬಂದಾಗ ಪೊಲೀಸರು ಅವರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು, ಯಾವ ರೀತಿಯ ಸಹಕಾರ ನೀಡಬೇಕು ಹಾಗೂ ಪೊಲೀಸರ ಪಾತ್ರ ಏನೆಂಬುದರ ಬಗ್ಗೆ ಈ ಕಾರ್ಯಕ್ರಮದಲ್ಲಿ ತಜ್ಞರಿಂದ ಅರಿವು ಮೂಡಿಸಲಾಗುತ್ತದೆ ಎಂದರು.
ಕರ್ತವ್ಯದಲ್ಲಿದ್ದಾಗಲೂ ಸಹ ಹಿರಿಯರೊಂದಿಗೆ ಸ್ನೇಹಿತರಂತೆ ವರ್ತಿಸಿ ಎಂದು ಅವರು ಪೊಲೀಸ್ ಸಿಬ್ಬಂದಿಗಳಿಗೆ ಸಲಹೆ ನೀಡಿದರು. ಯುವಜನತೆ ಹಿರಿಯರೊಂದಿಗೆ ಸೌಜನ್ಯ, ಆತ್ಮೀಯತೆಯಿಂದ ವರ್ತಿಸಬೇಕೆಂದು ಕಿವಿಮಾತು ಹೇಳಿದ ರೆಡ್ಡಿ, ಹಣವೊಂದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಡಿ, ನಯ, ನುಡಿ, ನಡತೆ ಜತೆ ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂದರು. ಹಿರಿಯರ ಸಹಾಯವಾಣಿಯು ಸಂಕಷ್ಟದಲ್ಲಿರುವ ಹಿರಿಯ ನಾಗರಿಕರಿಗೆ ಸಹಾಯ ಹಾಗೂ ಎಲ್ಲಾ ರೀತಿಯ ಸಹಕಾರ ಮಾಡಿಕೊಂಡು ಬರುತ್ತಿದೆ. ಈವೊಂದು ಕಾರ್ಯಕ್ರಮ ಪೊಲೀಸ್ ಹಾಗೂ ಹಿರಿಯರ ನಡುವಣ ಉತ್ತಮ ಬಾಂಧವ್ಯ ಎಂಬುದಾಗಿದೆ ಎಂದರು. ಈ ಅಭಿಯಾನ ಪೊಲೀಸರು ಹಾಗೂ ಹಿರಿಯ ನಾಗರಿಕರ ನಡುವೆ ಆರೋಗ್ಯಕರವಾದ ವಾತಾವರಣ ಸೃಷ್ಟಿಸುವುದಾಗಿದೆ ಎಂದು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ನೈಟೆಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಡಾ.ರಾಧಾ, ಹಿರಿಯ ವಕೀಲರಾದ ಶಿವಕುಮಾರ್, ಆಡಳಿತ ಯೋಜನಾ ಸಮನ್ವಯಾಧಿಕಾರಿ ಸಂಧ್ಯಾ, ಉಪ ಪೊಲೀಸ್ ಆಯುಕ್ತ ರಾಮ್‌ನಿವಾಸ್ ಸೆಪೆಟ್, ಅಪರಾಧ ವಿಭಾಗದ ಡಿಸಿಪಿ ರಮೇಶ್ ಉಪಸ್ಥಿತರಿದ್ದರು.
ಅಭಿಯಾನದಲ್ಲಿ ನಗರದಲ್ಲಿರುವ ಎಲ್ಲ ಪೊಲೀಸ್ ಠಾಣೆಗಳಿಂದಲೂ ಕಾನ್ಸ್‌ಸ್ಟೆಬಲ್‌ರೊಬ್ಬರು ಪಾಲ್ಗೊಂಡು ತಜ್ಞರಿಂದ ಸಲಹೆ, ಸೂಚನೆ ಪಡೆದರು.