ಕರ್ನಾಟಕ

ಮಹಿಳಾ ಐಎಎಸ್ ಅಧಿಕಾರಿಯ ಹೇಳಿಕೆ ಸೋರಿಕೆ ಹಿಂದಿದೆಯಾ ಪಿತೂರಿ ?

Pinterest LinkedIn Tumblr

823Karnataka-protests-l-pti

ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿಯವರು ಸಾವನ್ನಪ್ಪಿ ಹನ್ನೊಂದು ದಿನಗಳು ಕಳೆದಿವೆ. ಸರ್ಕಾರ ಈ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಿರುವ ಮಧ್ಯೆ ಮಹಿಳಾ ಐಎಎಸ್ ಅಧಿಕಾರಿ ಸಿಐಡಿ ಅಧಿಕಾರಿಗಳ ಮುಂದೆ ನೀಡಿದ್ದ ಹೇಳಿಕೆ ಬಹಿರಂಗವಾಗಿದೆ.

ಸಿಬಿಐ ಗೆ ವಹಿಸುವ ಮುನ್ನ ರಾಜ್ಯ ಸರ್ಕಾರವೇ ಸಿಐಡಿ ಮಧ್ಯಂತರ ವರದಿಯನ್ನು ಸದನದಲ್ಲಿ ಮುಂದಿಡಲು ಬಯಸಿತ್ತಾದರೂ ಮಹಿಳಾ ಐಎಎಸ್ ಅಧಿಕಾರಿ ಪತಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದ ಕಾರಣ ಇದು ಸಾಧ್ಯವಾಗಿರಲಿಲ್ಲ. ಆದರೂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖಾ ವರದಿಯ ಕೆಲ ಭಾಗಗಳು ಸೋರಿಕೆಯಾಗುತ್ತಲೇ ಸಾಗಿವೆ.

ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿರುವ ಸಂದರ್ಭದಲ್ಲೇ ಆಂಗ್ಲ ಮಾಧ್ಯಮವೊಂದು ಸಿಐಡಿ ಮೂಲಗಳನ್ನು ಉಲ್ಲೇಖಿಸಿ, ಸಾವಿಗೀಡಾಗುವ ದಿನ ಡಿ.ಕೆ. ರವಿಯವರು ಈ ಮಹಿಳಾ ಅಧಿಕಾರಿಗೆ ಕಳುಹಿಸಿದ್ದರೆನ್ನಲಾದ ವಾಟ್ಸಾಪ್ ಸಂದೇಶವನ್ನು ಪ್ರಕಟಿಸಿತ್ತು. ಅಲ್ಲದೇ ಡಿ.ಕೆ. ರವಿಯವರು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೈಸುಟ್ಟುಕೊಂಡಿದ್ದರೆಂದು ತಿಳಿಸಿತ್ತು.

ಈಗ ಮುಂದಿನ ಹಂತವಾಗಿ ಮಹಿಳಾ ಐಎಎಸ್ ಅಧಿಕಾರಿ, ಸಿಐಡಿ ಮುಂದೆ ನೀಡಿದ್ದ ಹೇಳಿಕೆ ಬಹಿರಂಗಗೊಂಡಿದ್ದು, ಆಂಗ್ಲ ಪತ್ರಿಕೆಯಲ್ಲಿ ಬಂದ ವರದಿಗೆ ಪೂರಕವಾಗಿವೆ. ಈ ರೀತಿ ವ್ಯವಸ್ಥಿತವಾಗಿ ತನಿಖೆಯ ಕೆಲ ಅಂಶಗಳನ್ನು ಬಹಿರಂಗಗೊಳಿಸುವ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆಯಾ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ತಮ್ಮ ಸಂಬಳದಿಂದಲೇ ಪ್ರಾಮಾಣಿಕ ಜೀವನ ಸಾಗಿಸುತ್ತಿದ್ದ ರವಿಯವರು ನೂರು ಎಕರೆ ಭೂಮಿ ಖರೀದಿಸುವ ಯೋಚನೆ ಮಾಡುವುದು ಸಾಧ್ಯವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Write A Comment