ಕರ್ನಾಟಕ

ಮುಂದಿನ ತಿಂಗಳು ಸಚಿವ ಸಂಪುಟ ವಿಸ್ತರಣೆ : ಐವರಿಗೆ ಕೊಕ್ ?

Pinterest LinkedIn Tumblr

siddu-in-tention

ಬೆಂಗಳೂರು: ಬಹು ನಿರೀಕ್ಷಿತ ಸಚಿವ ಸಂಪುಟ ಪುನರ್ ರಚನೆ ಕಾರ್ಯ ಮುಂದಿನ ತಿಂಗಳು ನಡೆಯಲಿದ್ದು, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಹಾಸನದ ಎ.ಮಂಜು, ಹಾವೇರಿಯ ಕೆ.ಬಿ.ಕೋಳಿವಾಡ ಮತ್ತಿತರರು ಸಂಪುಟ ಸೇರುವ ಸಾಧ್ಯತೆಗಳಿದ್ದು, ಐದು ಮಂದಿ ಸಚಿವರನ್ನು ಕೈ ಬಿಡುವ ಮುನ್ಸೂಚನೆ ಇದೆ. ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು, ಅನಂತರ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಿದ ಡಿ.ಕೆ.ರವಿ ಪ್ರಕರಣ ಸೇರಿದಂತೆ ಗೃಹ ಇಲಾಖೆಯನ್ನು ನಿರ್ವಹಿಸಲು ಪರದಾಡುತ್ತಿರುವ ಕೆ.ಜೆ.ಜಾರ್ಜ್ ಅವರ ಖಾತೆ

ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಗೃಹ ಸಚಿವರಾಗುವ ಲಕ್ಷಣಗಳಿವೆ.  ದಲಿತ ಮುಖ್ಯಮಂತ್ರಿ ಕೂಗು ಎದ್ದ ನಂತರ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ಕೆಲ ಕಾಲ ಮುಸುಕಿನ ಗುದ್ದಾಟ ನಡೆದಿತ್ತು. ಇತ್ತೀಚೆಗೆ ಇಬ್ಬರೂ ನಾಯಕರು ಪರಸ್ಪರ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ವಾತಾವರಣ ತಿಳಿಯಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಸಂಪುಟ ಸೇರುವ ನಿರೀಕ್ಷೆಗಳು ವ್ಯಕ್ತವಾಗಿವೆ.

ವಸತಿ ಸಚಿವ ಅಂಬರೀಶ್, ತೋಟಗಾರಿಕೆ ಸಚಿವ ಶ್ಯಾಮನೂರು ಶಿವಶಂಕರಪ್ಪ, ಕಂದಾಯ ಸಚಿವ ಶ್ರೀನಿವಾಸ್‌ಪ್ರಸಾದ್, ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್, ಅಲ್ಪಸಂಖ್ಯಾತರ ಸಚಿವ ಖಮರುಲ್ಲಾ ಇಸ್ಲಾಮ್ ಅವರು  ಸಂಪುಟದಿಂದ ಹೊರಗುಳಿಯಲಿದ್ದು, ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಕೋಲಾರ ಹಾಗೂ ಹಾಸನ ಜಿಲ್ಲೆಗಳಿಗೆ  ಸಂಪುಟದಲ್ಲಿ ಆದ್ಯತೆ ನೀಡಲು ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು, ಕೋಲಾರ ಜಿಲ್ಲೆಯ ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆ. ಜತೆಗೆ ಬಹುನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಕೆ.ಬಿ.ಕೋಳಿವಾಡ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆಯುವ ಸಾಧ್ಯತೆ ಇದ್ದು, ಪಿ.ಎಸ್.ನಾಡಗೌಡ, ಬಸವರಾಜರಾಯರೆಡ್ಡಿ, ಎ.ಬಿ.ಮಾಲಕರೆಡ್ಡಿ ಅವರುಗಳಲ್ಲಿ ಕೆಲವರಿಗೆ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆಗಳು ದಟ್ಟವಾಗಿವೆ.

ಸಚಿವ ಶ್ಯಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಸಂಪುಟ ಸೇರ್ಪಡೆಯಾಗಲಿದ್ದಾರೆ. ಖಾತೆ ಮರುಹಂಚಿಕೆಗೂ ಕೈ ಹಾಕಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಲಿ ಗೃಹ ಸಚಿವ ಕೆ.ಜೆ.ಜಾರ್ಜ್‌ಗೆ ಕಂದಾಯ ಖಾತೆ ನೀಡುವ ಮುನ್ಸೂಚನೆ ನೀಡಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಕ್ರೀಡಾ ಸಚಿವ ಅಭಯಚಂದ್ರಜೈನ್, ಆಹಾರ ಮತ್ತು ನಾಗರಿಕ ಪುರೈಕೆ ಸಚಿವ ದಿನೇಶ್‌ಗುಂಡೂರಾವ್ ಅವರ ಖಾತೆಗಳೂ ಬದಲಾಗಲಿವೆ. ವಿಧಾನಸಭೆಯಲ್ಲಿ ಸರ್ಕಾರದ ಹುಳುಕುಗಳನ್ನು ಮುಲಾಜಿಲ್ಲದೆ ಎತ್ತಿ ತೋರಿಸಿ  ಪ್ರತಿಪಕ್ಷದ ಮಾದರಿಯಲ್ಲಿ ಕೆಲಸ ಮಾಡುತ್ತಿರುವ ರಮೇಶ್‌ಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬ  ಒತ್ತಡ ಹೆಚ್ಚಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಪರಿಶೀಲನೆ ನಡೆಸುತ್ತಿದ್ದಾರೆ.

ಸಾಮಾಜಿಕ ನ್ಯಾಯದಂತೆ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಮೇಶ್‌ಕುಮಾರ್ ಅವರನ್ನು  ಸಂಪುಟಕ್ಕೆ ಸೇರಿಸಿಕೊಂಡರೆ  ಒಂದೇ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ ಎಂಬ ಆಕ್ಷೇಪಗಳು ಕೇಳಿ ಬರಲಿವೆ. ಹೀಗಾಗಿ ಆರ್.ವಿ.ದೇಶಪಾಂಡೆ ಅಥವಾ ದಿನೇಶ್‌ಗುಂಡೂರಾವ್ ಇಬ್ಬರಲ್ಲಿ ಒಬ್ಬರನ್ನು ಸಂಪುಟದಿಂದ ಕೈ ಬಿಟ್ಟು ಪಕ್ಷ ಸಂಘಟನೆಗೆ ತೊಡಗಿಕೊಳ್ಳುವ ಕುರಿತು ಸಮಾಲೋಚನೆಗಳು ನಡೆಯುತ್ತಿವೆ. ಒಟ್ಟಿನಲ್ಲಿ ಸರ್ಕಾರಕ್ಕೆ ಎಡರು ವರ್ಷ ಪೂರೈಸುವ ವೇಳೆಗೆ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಿ ಆಡಳಿತವನ್ನು ಚುರುಕುಗೊಳಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.

Write A Comment