ಕರ್ನಾಟಕ

ಮಗನ ಇಂಥ ಪ್ರಶ್ನೆಗಳಿಗೆಲ್ಲ ಉತ್ತರವಿದೆಯೇ?

Pinterest LinkedIn Tumblr

bhec21ankur2

ಗಂಡು ಮಕ್ಕಳ ತಾಯಂದಿರು ಅರಿಯಲೇಬೇಕಾದ ಕೆಲವು ವಿಷಯಗಳಿವೆ. ಸಾರ್ವಜನಿಕವಾಗಿ ಈ ವಿಷಯಗಳು ಚರ್ಚೆಯಾಗುವುದೇ ಇಲ್ಲ. ಕೌಟುಂಬಿಕ ವಾತಾವರಣದಲ್ಲಿಯೂ ಆಗುವುದಿಲ್ಲ. ಆದರೆ ಅಮ್ಮನಿಗೆ ಈ ವಿಷಯದ ಬಗ್ಗೆ ಪರಿಪೂರ್ಣ ಜ್ಞಾನವಿರಬೇಕು. ಅಮ್ಮ ಅಥವಾ ಅಪ್ಪನ ಮೂಲಕವೇ ಮಗನ ಸಂಶಯಗಳಿಗೆ ಪರಿಹಾರ ದೊರೆಯಬೇಕು.
ಎಲ್ಲ ಬೆಳೆಯುತ್ತಿರುವ ಗಂಡು ಮಕ್ಕಳಲ್ಲಿ ತಮ್ಮ ಜನನಾಂಗದ ಕುರಿತು ಪ್ರಶ್ನೆಗಳಿದ್ದೇ ಇರುತ್ತವೆ. ಅವುಗಳನ್ನು ಕೇಳದೇ ಇದ್ದರೂ ಅವು ಆತಂಕದ ರೂಪದಲ್ಲಿ ಮಕ್ಕಳನ್ನು ಕಾಡುತ್ತವೆ. ಅಂಥ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಸಹಜವಾಗಿ ಉತ್ತರಿಸುವ ಬಗೆಯನ್ನಿಲ್ಲಿ ಚರ್ಚಿಸುವ.

ಶಿಶ್ನ ಯಾವಾಗ ಬೆಳೆಯುತ್ತದೆ?
ಪ್ರೌಢಾವಸ್ಥೆಯನ್ನು ತಲುಪುವಾಗ ಮಗನ ಜನನಾಂಗದ ಉದ್ದಳತೆಯಲ್ಲಿ, ಗಾತ್ರದಲ್ಲಿ ಬದಲಾವಣೆ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಬಹುತೇಕ ದೈಹಿಕ ಬದಲಾವಣೆಗಳು ಕಂಡು ಬರುತ್ತವೆ. ಮಗುವಿನಂತೆ ಕಾಣದೆ ಪುರುಷನ ರೂಪಲಕ್ಷಣಗಳನ್ನು ಪಡೆಯುತ್ತೀರಿ. ಸಾಮಾನ್ಯವಾಗಿ 10ರಿಂದ 14ರ ವಯೋಮಾನದಲ್ಲಿ ಮಕ್ಕಳು ಪ್ರೌಢರಾಗುತ್ತಾರೆ.  ಆದರೆ ಇದು ಪ್ರತಿಯೊಬ್ಬ ಹುಡುಗನಿಗೂ ಬೇರೆ ಬೇರೆ ವಯಸ್ಸಿನಲ್ಲಾಗುತ್ತದೆ ಎನ್ನುವುದು ಗಮನಾರ್ಹ. ನಿಮ್ಮ ಜನನಾಂಗವು ಅತೀಬೇಗವೆಂದರೆ 13ರ ವಯಸ್ಸಿಗೆ ಅಥವಾ ವಿಳಂಬವಾಗಿ ಎಂದರೆ ನಿಮ್ಮ 18 ವಯಸ್ಸಿಗೆ ಪೂರ್ಣಮಟ್ಟದ ಬೆಳವಣಿಗೆ ಕಾಣಬಹುದು.

ಶಿಶ್ನದ ಬೆಳವಣಿಗೆ ನಿಲ್ಲುವುದು ಯಾವಾಗ?
ನಿಮ್ಮ ಪ್ರೌಡಾವಸ್ಥೆಗೆ ತಲುಪುವ ಹಂತದ ಅಂತ್ಯದಲ್ಲಿ ಜನನಾಂಗವು ಸಂಪೂರ್ಣವಾಗಿ ಬೆಳೆಯುತ್ತದೆ. ನಿರ್ದಿಷ್ಟವಾಗಿ ಯಾವಾಗ ಎಂದು ಹೇಳಲಾಗದು. ಆದರೆ ಪ್ರತಿಯೊಬ್ಬ ಹುಡುಗನಿಗೂ ಒಂದೊಂದು ವಯಸ್ಸಿನಲ್ಲಿ ಈ ಬದಲಾವಣೆಯಾಗಬಹುದು. ನಿಮ್ಮ ಸ್ನೇಹಿತರಿಗಿಂತ ಬಲುಬೇಗ ನಿಮ್ಮಲ್ಲಿ ಈ ಬದಲಾವಣೆ ಕಂಡು ಬರಬಹುದು. ಇಲ್ಲವೇ ನಿಮ್ಮ ಸ್ನೇಹಿತರೆಲ್ಲರ ನಂತರವೂ ಕಾಣಿಸಿಕೊಳ್ಳಬಹುದು. ಪ್ರತಿಯೊಬ್ಬರಿಗೂ ತಮ್ಮದೇ ಆದ ಬೆಳವಣಿಗೆಯ ಹಂತಗಳಿರುತ್ತವೆ ಎನ್ನುವುದು ಗಮನಾರ್ಹ. ಆದರೆ 16ರ ಅಂತ್ಯದೊಳಗೆ ಬಹುತೇಕ ನಿಮ್ಮ ದೈಹಿಕ ಬದಲಾವಣೆ ಹಾಗೂ ಬೆಳವಣಿಗೆಗೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುತ್ತವೆ.

ನನ್ನ ಜನನಾಂಗದ ಗಾತ್ರ ಸಹಜವಾಗಿದೆಯೇ?
ಶಿಶ್ನದ ಯಾವ ಗಾತ್ರ ‘ಸಹಜ’ ಎಂದು ಹೇಳಲಾಗದು. ಇದು ಸಂಪೂರ್ಣವಾಗಿ ನಿಮ್ಮ ವಂಶವಾಹಿಯನ್ನು ಅವಲಂಬಿಸಿರುತ್ತದೆ.  ನಿಮ್ಮ ಪಾದ, ಅಂಗೈ, ಕಣ್ಣಿನ ಬಣ್ಣ, ಮುಂತಾದವುಗಳಂತೆ ಶಿಶ್ನದ ಗಾತ್ರವೂ ವಂಶವಾಹಿಯೊಂದಿಗೆ ನಿರ್ಧಾರವಾಗುತ್ತದೆ. ಆದರೆ ನೆನಪಿರಲಿ: ಶಿಶ್ನದ ಗಾತ್ರದಿಂದ ಪೌರುಷತನ ಅಥವಾ ಲೈಂಗಿಕಕ್ರಿಯೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಇವೆರಡೂ ಅಂಶಗಳಿಗೆ ಶಿಶ್ನದ ಗಾತ್ರದೊಂದಿಗೆ ಯಾವುದೇ ಸಂಬಂಧವಿಲ್ಲ.

ಶಿಶ್ನದ ಗಾತ್ರವನ್ನು ಬದಲಿಸಬಹುದೆ?
ಇಲ್ಲ, ಸಾಧ್ಯವೇ ಇಲ್ಲ. ನಿಮ್ಮ ಶಿಶ್ನದ ಗಾತ್ರವನ್ನು ಬದಲಿಸುವುದು ಅಸಾಧ್ಯ. ಕೆಲವು ಕಸರತ್ತುಗಳಿಂದ, ವಿಟಾಮಿನ್‌ಗಳಿಂದ ನಿಮ್ಮ ಶಿಶ್ನದ ಗಾತ್ರ ಬದಲಾಗಬಹುದು ಎಂದು ಕೇಳಿರುತ್ತೀರಿ, ಅಥವಾ ಶೀಘ್ರವಾಗಿ ಬೆಳೆಯಲು ಸಹಕಾರಿ ಎಂದು ಹೇಳಲಾಗುತ್ತದೆ ಆದರೆ ಅದೆಲ್ಲವೂ ಬೊಗಳೆ ಮಾತ್ರ.

ಬೆಳಗಿನ ನಿಮಿರುವಿಕೆ ಎಂದರೇನು?
ನಿಮಿರುವಿಕೆ ಎಂದರೆ ನಿಮ್ಮ ಜನನಾಂಗಕ್ಕೆ ಹೆಚ್ಚುವರಿ ರಕ್ತ ಪೂರೈಕೆಯಾಗಿ ಅದು ಬಿರುಸುಗೊಳ್ಳುತ್ತದೆ. ಬೆಳಗಿನ ನಿಮಿರುವಿಕೆಯೆಂದರೆ ಈ ಬಿರುಸುಗೊಳ್ಳುವುದರಿಂದಲೇ ನಿಮಗೆ ಎಚ್ಚರವಾಗಬಹುದು. ಇದು ಅತಿ ಸಾಮಾನ್ಯವಾದ ಪ್ರಕ್ರಿಯೆಯಾಗಿದೆ. ಕೆಲವಷ್ಟು ಹುಡುಗರಿಗಂತೂ ಮಲಗಿದಾಗ ಮೂರರಿಂದ ಐದರಷ್ಟು ನಿಮಿರುಗಳ ಅನುಭವವಾಗಿರುತ್ತದೆ. ಆದರೆ ಅದು ಅವರ ಅರಿವಿಗೆ ಬಂದಿರುವುದಿಲ್ಲ ಅಷ್ಟೆ.

ಸ್ವಪ್ನ ಸ್ಖಲನವೆಂದರೇನು?
ನೀವು ನಿದ್ದೆಯಲ್ಲಿದ್ದಾಗ ಸ್ಖಲಿಸುವುದಕ್ಕೆ ಸ್ವಪ್ನ ಸ್ಖಲನವೆನ್ನಲಾಗುತ್ತದೆ. ನಿದ್ರಾವಸ್ಥೆಯಲ್ಲಿದ್ದಾಗ ಯಾವುದಾದರೂ ಲೈಂಗಿಕ ಕನಸುಗಳು ಬಿದ್ದಿದ್ದರೆ ವೀರ್ಯ ಸ್ರವಿಸಿ ಒದ್ದೆಯಾಗುವ ಸ್ಥಿತಿಗೆ ಸ್ವಪ್ನಸ್ಖಲನವೆನ್ನುತ್ತಾರೆ. ಆದರೆ ಕೆಲವೊಮ್ಮೆ ಯಾವುದೇ ಕನಸುಗಳಿರದೇ ಇದ್ದರೂ ಈ ಸ್ಥಿತಿ ಉಂಟಾಗುತ್ತದೆ. ಪ್ರೌಢಾವಸ್ಥೆಗೆ ತಲುಪಿದಾಗ ಇವೆಲ್ಲವೂ ಅತಿ ಸಹಜ ಮತ್ತು ಸಾಮಾನ್ಯ. ನೀವು ಬೆಳೆದಂತೆ ಇದು ಕಡಿಮೆಯಾಗುತ್ತದೆ.

ನಿಯಂತ್ರಣವಿಲ್ಲದ ನಿಮಿರುವಿಕೆ ತಡೆಯುವುದು ಹೇಗೆ?
ದುರದೃಷ್ಟಕರ ಸಂಗತಿಯೆಂದರೆ ಪ್ರೌಢಾವಸ್ಥೆಗೆ ತಲುಪುವಾಗ ಆಗಾಗ ವಿನಾಕಾರಣ ನಿಮಿರುವಿಕೆ ಕಾಣಿಸಿಕೊಳ್ಳುತ್ತದೆ. ಇದನ್ನು ತಡೆಯಲಾಗುವುದಿಲ್ಲ. ಅಥವಾ ತಡೆಯಲು ಏನೂ ಮಾಡಬೇಕಾಗಿಲ್ಲ. ಯಾವುದೇ ಲೈಂಗಿಕ ಯೋಚನೆಗಳಿರದೇ ಇದ್ದಲ್ಲಿಯೂ, ಲೈಂಗಿಕ ಕಲ್ಪನೆಗಳಿಂದ ದೂರವಿದ್ದರೂ ಆಗಾಗ ಇಂಥ ನಿಮಿರುಗಳು ನಿಮ್ಮ ಅರಿವಿಗೆ ಬಾರದೇ ಉಂಟಾಗುತ್ತವೆ. ಅದಕ್ಕಾಗಿ ಚಿಂತಿಸಬೇಕಾಗಿಲ್ಲ. ಆದರೆ ಕಾಲಕ್ರಮೇಣ ಮೇಲಿಂದ ಮೇಲೆ ಆಗುವುದು ಕಡಿಮೆಯಾಗುತ್ತದೆ. ಎರಡು ನಿಮಿರುಗಳ ನಡುವಿನ ಅಂತರ ಹೆಚ್ಚುತ್ತ ಹೋಗುತ್ತದೆ.

ಹಸ್ತಮೈಥುನವೆಂದರೇನು?
ಹಸ್ತಮೈಥುನದಿಂದ ಲೈಂಗಿಕ ವಾಂಛೆಗಳು ಕೆರಳುವುದಿಲ್ಲ. ಸ್ಖಲನದ ಅನುಭವವಾಗುತ್ತದೆ. ಸ್ಖಲನವೆಂದರೆ, ಸುಖಾನುಭವದ ಪರಾಕಾಷ್ಠೆಯನ್ನು ತಲುಪಿದಾಗ ಜನನಾಂಗದಿಂದ ವೀರ್ಯ ಹೊರಬರುತ್ತದೆ. ವೀರ್ಯ ಹಾಗೂ ವೀರ್ಯಾಣುವಿನಿಂದ ಕೂಡಿರುವ ಜೀವದ್ರವ ಅದು.

ಬಹುತೇಕ ಮಕ್ಕಳು ಹಸ್ತಮೈಥುನದಲ್ಲಿ ತೊಡಗಿಕೊಳ್ಳುತ್ತಾರೆ. 15ರಿಂದ 16 ವರ್ಷದ ಮಕ್ಕಳಲ್ಲಿ ಶೇ 75ರಷ್ಟು ಜನ ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳುತ್ತಾರೆ. ಹಸ್ತಮೈಥುನದ ಬಗ್ಗೆ ಹಲವಾರು ಮೌಢ್ಯಗಳು ಪ್ರಚಲಿತದಲ್ಲಿವೆ. ಅದರಲ್ಲಿ ಅತಿ ಮುಖ್ಯವಾದುದು ಎಂದರೆ ಹಸ್ತಮೈಥುನದಿಂದ ನಿಮ್ಮ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂಬುದು. ಆದರೆ ಇದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹಸ್ತಮೈಥುನ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಅದು ಗೀಳಾಗಿ ಪರಿಣಮಿಸಕೂಡದು ಎನ್ನುವುದು ನೆನಪಿನಲ್ಲಿರಬೇಕು.

ಎಸ್‌ಟಿಡಿ ಎಂದರೇನು?
ಲೈಂಗಿಕ ಸೋಂಕುರೋಗಗಳಿಗೆ ಎಸ್‌ಟಿಡಿ ಎಂದು ಕರೆಯಲಾಗುತ್ತದೆ. ಸೋಂಕಿರುವ ವ್ಯಕ್ತಿಯೊಡನೆ ಲೈಂಗಿಕ ಸಂಪರ್ಕಕ್ಕೆ ಬಂದಾಗ ಈ ರೋಗವು ನಿಮ್ಮನ್ನು  ಅಂಟಿಕೊಳ್ಳುತ್ತದೆ. ಕೇವಲ ಸಂಭೋಗದಿಂದ ಈ ರೋಗಗಳು ಅಂಟಿಕೊಳ್ಳಬಹುದು ಎನ್ನುವುದೊಂದು ನಂಬಿಕೆಯಾಗಿದೆ. ಆದರೆ ಮುಖ ಮೈಥುನ, ಗುದಮೈಥುನಗಳಿಂದ ಅಥವಾ ಬೆತ್ತಲಾಗಿದ್ದು ಅವರೊಂದಿಗೆ ಸಂಪರ್ಕಕ್ಕೆ ಬಂದಲ್ಲಿ ಈ ರೋಗಗಳು ಅಂಟಿಕೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಗಲೀಜಾದ ಶೌಚಾಲಯಗಳಿಂದ ಈ ರೋಗಗಳು ಅಂಟಿಕೊಳ್ಳುವುದಿಲ್ಲ ಎನ್ನುವುದು ಗಮನದಲ್ಲಿರಲಿ.

ಕೆಲವೊಂದು ಲೈಂಗಿಕ ರೋಗಗಳು ಪ್ರಾಣಾಂತಿಕವಾಗಬಹುದು. ಜೀವಾವಧಿಯವರೆಗೂ ಕಾಡಬಹುದು. ಸಕಾಲಿಕ ಚಿಕಿತ್ಸೆಯೇ ಇವುಗಳಿಗೆ ಮದ್ದು. ಎಚ್‌ಐವಿ, ಏಯ್‌್ಡ್ಸ ನಂಥ ರೋಗಗಳನ್ನು ಹೊರತು ಪಡಿಸಿದರೆ ಗನೋರಿಯಾ, ಕ್ಲಾಮಿಡಿಯಾ, ಜನನಾಂಗದ ಸರ್ಪಸುತ್ತು, ಎಚ್‌ಪಿವಿ, ಹೆಪಟೈಟಸ್‌ ಬಿ ಮತ್ತು ಸಿ,  ಕ್ರ್ಯಾಬ್ಸ್‌ ಹಾಗೂ ಟ್ರೈಕೊಮೊನಾಸಿಸ್‌ ಮುಂತಾದ ಲೈಂಗಿಕ ರೋಗಗಳನ್ನು ಗಂಭೀರಸ್ವರೂಪದ ಕಾಯಿಲೆಗಳೆಂದೇ ಗುರುತಿಸಲಾಗುತ್ತದೆ. ಒಂದು ವೇಳೆ ನಿಮಗೆ ಯಾವುದೇ ಬಗೆಯ ಲೈಂಗಿಕ ರೋಗಗಳು ಬಂದಲ್ಲಿ ಅವನ್ನು ಇನ್ನಿತರರಿಗೆ ಸೋಂಕು ಹರಡದಂತೆ ತಡೆಯುವ ಉಪಾಯಗಳನ್ನು ನಿಮ್ಮ ವೈದ್ಯರ ಬಳಿ ಚರ್ಚಿಸಬೇಕಿರುವುದು ಅತ್ಯಗತ್ಯ.

ಲೈಂಗಿಕ ರೋಗದ ಸೋಂಕು ಇದೆಯೆಂದು ಪತ್ತೆಯಾಗುವುದು ಹೇಗೆ?
ಯಾವ ಸೋಂಕು ಇದೆ ಎಂಬುದರ ಮೇಲೆ ಈ ಲಕ್ಷಣಗಳು ಬದಲಾಗುತ್ತವೆ. ಸಾಮಾನ್ಯವಾಗಿ ಮೂತ್ರ ವಿಸರ್ಜಿಸುವಾಗ ಉರಿಯುವುದು, ಜನನಾಂಗದಿಂದ ಬಿಳಿ ಅಥವಾ ಹಳದಿ ಇಲ್ಲವೇ ಹಸಿರು ಬಣ್ಣದ ಸ್ರಾವವಾಗುವುದು, ಜನನಾಂಗದ ಸುತ್ತ ಉರಿ ಅಥವಾ ಕೆರೆತ ಉಂಟಾಗುವುದು ಇವೆಲ್ಲವೂ ಸೋಂಕು ರೋಗಗಳ ಲಕ್ಷಣಗಳಾಗಿವೆ. ‌

ಇವಲ್ಲದೆ, ಶಿಶ್ನದ ಸುತ್ತ ಕೆರೆತ, ವೃಷಣಗಳಲ್ಲಿ ನೋವು, ಊತ, ಶಿಶ್ನದ ಮೇಲೆ ಅಥವಾ ಬಳಿಯಲ್ಲಿ ಊತ, ಗಾಯ, ತೊಡೆ, ತೊಡೆ ಸಂದಿ, ಗುದದ್ವಾರ, ಶಿಶ್ನ ಅಥವಾ ವೃಷಣಗಳ ಬಳಿ ಉರಿಯೂತ, ನೋವು ಕಾಡುವುದು… ಇಂಥ ಲಕ್ಷಣಗಳಿದ್ದಲ್ಲಿ ವೈದ್ಯರನ್ನು ಕೂಡಲೇ ಕಾಣಬೇಕು. ಚಿಕಿತ್ಸೆಗೆ ಒಳಪಡಬೇಕು. ಬಹುತೇಕ ಸೋಂಕು ರೋಗಗಳನ್ನು ರೋಗನಿರೋಧಕಗಳ ಮೂಲಕ ನಿಯಂತ್ರಿಸಬಹುದಾಗಿದೆ.
ಮುಂದಿನ ವಾರ ಇನ್ನಷ್ಟು ಮಾಹಿತಿ
ಮಾಹಿತಿಗೆ: (99450 48833)

Write A Comment