ಶಾಂತವಾಗಿಯೇ ಸದನಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ರವಿ ಪ್ರಕರಣದ ಕುರಿತು ಮಾತನಾಡುತ್ತಿದ್ದಂತೆ ತಮ್ಮ ಆಂತರಿಕ ನೋವನ್ನು ಪ್ರತಿಪಕ್ಷಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಹೊರಹಾಕಿದ್ದಾರೆ.
ನಾವು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರಿಸಿದ್ದು, ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದು, ಇದರಲ್ಲಿ ಯಾವುದೇ ರಾಜಕೀಯವಿಲ್ಲ . ಯಾವುದೇ ಕಾರಣಕ್ಕೂ ಸಚಿವರನ್ನು ರಕ್ಷಣೆ ಮಾಡುತ್ತಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದರು. ರವಿ ಅವರು ಸಾವನ್ನಪ್ಪಿದ ಮರುದಿನವೇ ಅವರ ತಂದೆ ತಾಯಿಯವರನ್ನು ಪ್ರತಿಭಟನೆಗೆ ಕರೆತಂದು ಹೇಳಿಕೆ ನೀಡಿಸುತ್ತೀರಿ. ಇದು ತುಂಬಾ ನೋವಾಗಿದೆ ಎಂದು ತಿಳಿಸಿದರು.
ಇದೇ ಸಮಯದಲ್ಲಿ ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ ನೀವು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಒಂದು ಪ್ರಕರಣವನ್ನಾದರೂ ಸಿಬಿಐ ಗೆ ವಹಿಸಿದ್ದೀರಾ ಎಂದು ಹರಿಹಾಯ್ದರಲ್ಲದೇ ಸಾವಿನ ಮನೆಯಲ್ಲಿ ರಾಜಕೀಯ ಮಾಡುತ್ತೀರಿ ಎಂದು ಪ್ರತಿಪಕ್ಷಗಳ ವಿರುದ್ದ ಕಿಡಿಕಾರಿದರು. ಈ ಸಮಯದಲ್ಲಿ ಪ್ರತಿಪಕ್ಷಗಳೂ ಮುಖ್ಯಮಂತ್ರಿಗಳ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ನಾನು ರವಿ ಅವರ ಮನೆಯವರ ಭಾವನೆಗೆ ಬೆಲೆ ಕೊಟ್ಟು , ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಈ ಪ್ರಕರಣವನ್ನು ಸಿಬಿಐ ಗೆ ನೀಡುತ್ತಿದ್ದೇನೆ ಎಂದು ಘೋಷಿಸಿದರು.
ಒಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಒತ್ತಡದಿಂದ ಸಿಬಿಐ ಗೆ ವಹಿಸಿದ್ದಾರೆ ಎಂಬುದು ಅವರ ಇಂದಿನ ವರ್ತನೆಯಿಂದ ಖಚಿತವಾಗಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸಲಿದ್ದು ಕೆಲವು ರಾಜಕೀಯ ಮುಖಂಡರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.