ಕರ್ನಾಟಕ

ಡಿ.ಕೆ.ರವಿ ಸಾವಿನ ಪ್ರಕರಣ : ಉಡಾಫೆ-ಉದಾಸೀನ ಧೋರಣೆಯಿಂದ ಇಕ್ಕಟ್ಟಿಗೆ ಸಿಲುಕಿದ ಸಿದ್ದರಾಮಯ್ಯ ಸರ್ಕಾರ

Pinterest LinkedIn Tumblr

Siddaramayya-Tention

ಬೆಂಗಳೂರು, ಮಾ.22-ದಕ್ಷ, ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ನಂತರದ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ದು ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಎಂದಿನಂತೆ ತನ್ನ ಉಡಾಫೆ ಮತ್ತು ಉದಾಸೀನ ಧೋರಣೆಯನ್ನು ಮುಂದುವರೆಸಿ ಪ್ರತಿಪಕ್ಷಗಳ ಕೈಗೆ ಹಗ್ಗ ಕೊಟ್ಟು ಕೈಕಟ್ಟಿಸಿಕೊಂಡಿದೆ. ರಾಜ್ಯಾದ್ಯಂತ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದರೆ ಇಂತಹ ಮಟ್ಟಕ್ಕೆ ಹೋಗುತ್ತಿರಲಿಲ್ಲ. ಆದರೆ ಈ ಸರ್ಕಾರ ಬಂದಾಗಿನಿಂದ ಉದಾಸೀನ ಧೋರಣೆ ಮುಂದುವರೆದೇ ಇದೆ.

ಅದು ರವಿ ಅವರ ಸಾವಿನ ಪ್ರಕರಣದಲ್ಲೂ ಕಂಡುಬಂತು. ಸರ್ಕಾರ ರವಿ ಅವರ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕರ್ತವ್ಯ ನಿರತ ಐಎಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಇಂತಹ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂದು ಯೋಚಿಸಲಿಲ್ಲ. ಸಾಮಾನ್ಯ ಸಾವಿನಂತೆ ಪರಿಗಣಿಸಿ ಗಂಭೀರ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿತು.

ಪ್ರಪ್ರಥಮವಾಗಿ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಆತ್ಮಹತ್ಯೆ ಎಂಬ ಹೇಳಿಕ ಇಷ್ಟೆಲ್ಲಾ ರದ್ಧಾಂತಗಳಿಗೆ ಕಾರಣವಾಯಿತು. ಜವಾಬ್ದಾರಿಯುತವಾಗಿ ಹೇಳಿಕೆ ನೀಡಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲವೇನೋ?  ಸಾವಿನ ಶೋಕದಲ್ಲಿದ್ದ ಅವರ ತಂದೆ-ತಾಯಿ, ಕುಟುಂಬದವರಿಗೆ ಸಾಂತ್ವನ ಹೇಳುವ ಮತ್ತು ಅವರನ್ನು ನಿಭಾಯಿಸುವಲ್ಲೂ ಸಂಪೂರ್ಣವಾಗಿ ಎಡವಿತು. ರಾಜ್ಯಾದ್ಯಂತ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲಾ ಸಂಘಟನೆಗಳವರಗೆ  ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂಬ ಒಕ್ಕೊರಲ ಒತ್ತಾಯ ಕೇಳಿಬಂದರೂ ಸಿಐಡಿ ತನಿಖೆಗೆ ಅಂಟಿಕೊಂಡು ಕುಳಿತ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಮುಂದುವರೆಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಕ್ತ ಸಲಹೆಗಾರರು ಇಲ್ಲವೇ..?ಅಥವಾ ಅವರ ಸಲಹೆಯನ್ನು ಅವರು ಸ್ವೀಕರಿಸುವುದಿಲ್ಲವೇ..? ಅಥವಾ ಅವರ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದರೆ ಎಂಬ ಅನುಮಾನ ಕಾಡತೊಡಗುತ್ತದೆ. ರವಿ ಅವರ ಅಂತಿಮ ದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಗೃಹ ಸಚಿವರಾದ ಆಪ್ತ ಸಲಹೆಗಾರರೊಂದಿಗೆ ಶವಾಗಾರಕ್ಕೆ ತೆರಳುತ್ತಾರೆಂದರೆ ಜನರಲ್ಲಿ ಅನುಮಾನ ಮೂಡುವುದಿಲ್ಲವೇ? ಇಂತಹ ಸಲಹೆಯನ್ನು ಅವರಿಗೆ ಕೊಟ್ಟವರ್ಯಾರರು? ಅಲ್ಲಿಗೆ ಅವರನ್ನು ಕರೆದುಕೊಂಡು ಹೋದವರ್ಯಾ ರು?  ವೈದ್ಯಕೀಯ ಶಿಕ್ಷಣ ಸಚಿವರ ಜೊತೆ ಅಲ್ಲಿಗೆ ಹೋದರೆ ನಾಗರಿಕರಲ್ಲಿ ಅನುಮಾನ ಮೂಡುವುದು ಸಹಜ. ಆದರೆ ಸಾಮಾನ್ಯವಾಗಿ ವೈದ್ಯರು ಸಚಿವರ ನಿಯಂತ್ರಣದಲ್ಲಿರುತ್ತಾರೆ. ಇಂತಹ ಕನಿಷ್ಠ ತಿಳುವಳಿಕೆ ಅವರಿಗೆ ಬರಲಿಲ್ಲವೇ?

ಉಭಯ ಸದನದಲ್ಲಿ ಈ ವಿಷಯ ಪ್ರತಿಧ್ವನಿಸಿ ಸಿಬಿಐಗೆ ಒತ್ತಾಯಿಸಲಾಯಿತು. ಗೃಹ ಸಚಿವರು ವೈಯಕ್ತಿಕ ಕಾರಣಗಳಿಗಾಗಿ ಸಾವು ಸಂಭವಿಸಿದೆ. ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಹೇಳಿಕೆ  ನೀಡಿದರು. ಈ ಲಿಖಿತ ಹೇಳಿಕೆಯಲ್ಲಿ ದಿನಾಂಕವೇ ಸರಿಯಿರಲಿಲ್ಲ. ಎರಡು ದಿನಗಳ ಹಿಂದಿನ ದಿನಾಂಕವನ್ನು ನಮೂದಿಸಲಾಗಿತ್ತು. ಬಾಯಿ ಮಾತಿನಲ್ಲಿ ಹೇಳೀದ್ದರೆ, ಅಚಾತುರ್ಯ ಎನ್ನಬಹುದಿತ್ತು. ಲಿಖಿತ ಹೇಳಿಕೆಯಲ್ಲಿ ಎರಡು ದಿನಗಳ ಹಿಂದಿನ ದಿನಾಂಕವನ್ನು ನಮೂದಿಸಿದ್ದಾರೆ ಎಂದರೆ ಇವರ ಉದಾಸೀನ ಧೋರಣೆ ಈ ಪ್ರಕರಣದ ಬಗ್ಗೆ ಎಷ್ಟು ನಿರ್ಲಕ್ಷ್ಯತನ ವಹಿಸಿದ್ದಾರೆ ಎಂಬುದು ಅರ್ಥವಾಗುತ್ತದೆ. ರವಿ ಅವರ ಅಂತಿಮ ಸಂಸ್ಕಾರದ ನಂತರದ ಘಟನಾವಳಿಗಳ ಬಗ್ಗೆ ಸಮರ್ಥ ವರದಿ ನೀಡುವಲ್ಲಿ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಎಲ್ಲಾ ಅಧ್ವಾನಗಳಿಗೆ ಕಾರಣ. ಇದೂ ಕೂಡ ಸರ್ಕಾರದ ಉದಾಸೀನ ಧೋರಣೆ.

ಸಿಐಡಿ ತನಿಖೆಗೆ ವಹಿಸಿದ ನಂತರ ಸರ್ಕಾರ ಸಿಐಡಿ ಮುಖ್ಯಸ್ಥ ಮೊಹಾಂತಿಯನ್ನು ಏಕಾಏಕಿ ವರ್ಗಾವಣೆ ಮಾಡುತ್ತದೆ. ಮುಖ್ಯಮಂತ್ರಿಗಳ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ನಿರ್ಧಾರವನ್ನು ಮೊದಲೇ ತೆಗೆದುಕೊಂಡಿತ್ತಾದರೂ ಇದು ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರಲಿಲ್ಲ. ಗಂಭೀರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ ಸಂದರ್ಭದಲ್ಲಿ ಆ ಸಂಸ್ಥೆಯ ಮುಖ್ಯಸ್ಥರನ್ನು ವರ್ಗಾವಣೆ ಮಾಡುತ್ತಾರೆಂದರ ಸರ್ಕಾರದ ಮೇಲೆ ಅನುಮಾನ ಮೂಡುವುದಿಲ್ಲವೇ? ಇದೂ ಕೂಡ ಉದಾಸೀನ ಧೋರಣೆಯ ಉದಾಹರಣೆ.
ಒಬ್ಬ ಐಎಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಅವರ ಕುಟುಂಬ ವರ್ಗದಲ್ಲಿ ಆಕ್ರೋಶ ಭುಗಿಲೇಳಬಹುದು. ರಾಜಕೀಯ ಪಕ್ಷಗಳು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳಬಹುದು. ಯಾವ ವರದಿಯನ್ನೂ  ಸರ್ಕಾರಕ್ಕೆ ನೀಡಿದಂತಿಲ್ಲ. ಅಂತಿಮ ಸಂಸ್ಕಾರ ನಡೆದ ಮರುದಿನವೇ ಅವರ ತಂದೆ-ತಾಯಿ, ಅಣ್ಣ, ಅಕ್ಕ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬಂದು ಧರಣಿ ನಿರತರಾದರೂ ಸರ್ಕಾರಕ್ಕೆ ಗೊತ್ತಾಗಿರಲಿಲ್ಲ ಎಂದರೆ ಈ ಪ್ರಕರಣವನ್ನು ಹೇಗೆ ನಿಭಾಯಿಸಿತು ಎಂಬುದು ಅರ್ಥವಾಗುತ್ತದೆ. ಅವರ ತಂದೆ-ತಾಯಿ, ಅಕ್ಕ-ಅಣ್ಣ ಧರಣಿ ನಿರತರಾಗಿದ್ದ ಜಾಗಕ್ಕೆ ಮಾತುಕತೆಗೆ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರನ್ನು ಕಳುಹಿಸುತ್ತಾರೆಂದರೆ, ಸಾವಿನ ಗಂಭೀರತೆಯನ್ನು ಸರ್ಕಾರ ಯಾವ ಮಟ್ಟಿಗೆ ಪರಿಗಣಿಸಿದೆ ಎಂಬುದನ್ನು ನೀವೇ ಊಹಿಸಿ.

ನಂತರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಅವರ ಮನವೊಲಿಕೆಗೆ ಸಮುದಾಯದ ಮುಖಂಡರಾದ ಅಂಬರೀಶ್, ಕೆ.ಮಂಜು, ಟಿ.ಬಿ.ಜಯಚಂದ್ರ, ಕೃಷ್ಣಭೈರೇಗೌಡ, ಕಿಮ್ಮನೆ ರತ್ನಾಕರ ಅವರನ್ನು ಕಳುಹಿಸಬಹುದಿತ್ತು. ಆದರೆ ಮುಖ್ಯ ಸಚೇತಕರಾದ ಪಿ.ಎಂ.ಅಶೋಕ್ ಮುಂತಾದವರನ್ನು ಕಳುಹಿಸಿ ಮತ್ತೆ ಎಡವಟ್ಟು ಮಾಡಿಕೊಂಡಿತು. ಅವರು ಮನವೊಲಿಸಲು ವಿಫಲರಾದರು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಡಿ.ಕೆ.ಶಿವಕುಮಾರ್‌ರವರೊಂದಿಗೆ ಸ್ಥಳಕ್ಕೆ ಬರಬೇಕಾಯಿತು. ಬಂದರೂ ಅಲ್ಲಿ ಮನವೊಲಿಸುವಲ್ಲಿ ಅವರು ವಿಫಲರಾದರು.  ಸಾವಿನ ದುಃಖವನ್ನು ಅರ್ಥ ಮಾಡಿಕೊಂಡಂತೆ ಕಾಣಲಿಲ್ಲ. ನಿಮ್ಮ ಮನದ ಇಂಗಿತದಂತೆ ಸಿಬಿಐ ತನಿಖೆಗೆ ವಹಿಸುತ್ತೇನೆ. ನಿಮ್ಮ ಮಗನ ಸಾವಿನ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ನೀವು ಹೆದರುವುದು ಬೇಡ ಎಂದು ಹೇಳಿ ಆ ಕುಟುಂಬದವರನ್ನೆಲ್ಲಾ ತನ್ನ ಕಚೇರಿಗೆ ಕರೆಸಿಕೊಂಡು ಸರ್ಕಾರಿ ವಾಹನದಲ್ಲಿ ಶಾಸಕರೊಂದಿಗೆ ಅವರ ಮನೆಗೆ ಕಳುಹಿಸಿ ಅವರ ಮರಣಾನಂತರದ ವಿಧಿ-ವಿಧಾನಗಳಿಗೆ ನೆರವಾಗಿದ್ದರೆ, ಅವರು ಹೀರೋ ಆಗುತ್ತಿದ್ದರು. ಸಿಬಿಐ ತನಿಖೆಗೆ ವಹಿಸುವುದು, ಬಿಡುವುದು ಆಮೇಲೆ. ಸಿಐಡಿ ತನಿಖೆ ವರದಿಯನ್ನಾಧರಿಸಿ  ಇನ್ನೆರಡು ದಿನಗಳೊಳಗಾಗಿ ಸಿಬಿಐಗೆ ವಹಿಸುತ್ತೇನೆ ಎಂದು ಅವರಿಗೆ ಅಭಯ ನೀಡಿ ತಮ್ಮ ಜೊತೆಗೆ ಕರೆದೊಯ್ದಿದ್ದರೆ ಪರಿಸ್ಥಿತಿ ನಿಭಾಯಿಸಬಹುದಿತ್ತು.

ಆದರೆ ಮಾತನಾಡಲು ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಡಿ.ಕೆ.ರವಿ ಅವರ ಅಕ್ಕ ಭಾರತಿ ಅವರನ್ನು ಬಾಯಿ ಮುಚ್ಚಿಸಲು ಡಿ.ಕೆ.ಶಿವಕುಮಾರ್ ಮುಂದಾಗಿ ಎಡವಟ್ಟು ಮಾಡಿಕೊಂಡರು. ಅವರು ಮನವೊಲಿಕೆಗೆ ಬಗ್ಗದಿದ್ದಾಗ ಅವರನ್ನು ಅಲ್ಲೇ ಬಿಟ್ಟು ಮುಖ್ಯಮಂತ್ರಿಗಳು ತೆರಳಿದ್ದು, ಪ್ರತಿಪಕ್ಷಗಳಿಗೆ ದಾಳವಾಯಿತು.
ನಂತರ ಬಂದ ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಅವರು ನೀವಿಲ್ಲಿರುವುದು ಬೇಡ, ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತೇವೆ. ನೀವು ಉತ್ತರಕ್ರಿಯಾದಿಗಳನ್ನು ಮಾಡಿ ಎಂದು ಅಭಯ ನೀಡಿದರು.

ಪ್ರತಿಪಕ್ಷಗಳ ಮೇಲೆ ಮೂಡಿದ ವಿಶ್ವಾಸ ರವಿ ಕುಟುಂಬದವರಿಗೆ ಆಡಳಿತ ಪಕ್ಷದ ಮೇಲೆ ಮೂಡಲಿಲ್ಲ. ಆ ರೀತಿ ಸರ್ಕಾರ ನಡೆದುಕೊಂಡಿತು. ಕಾರಣ ಉದಾಸೀನತೆ ಮತ್ತು ಉಡಾಫೆ ಧೋರಣೆ.

Write A Comment