ಕರ್ನಾಟಕ

ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಅಡ್ಡಗಾಲು

Pinterest LinkedIn Tumblr

ta

ಬೆಂಗಳೂರು, ಮಾ. 22 : ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಪ್ರಸ್ತಾವನೆಗೆ ತಮಿಳುನಾಡು ಮತ್ತೆ ಅಡ್ಡಗಾಲು ಹಾಕಿದೆ. ಯಾವುದೇ ಕಾರಣಕ್ಕೂ ಅಣೆಕಟ್ಟು ನಿರ್ಮಿಸಬಾರದು ಎಂದು ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಾಗಿದೆ. ತಮಿಳುನಾಡು ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಕರ್ನಾಟಕ ಮೇಕೆದಾಟುವಿನಲ್ಲಿ 2 ಅಣೆಕಟ್ಟು ನಿರ್ಮಿಸುವ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡಿದೆ. ಅಣೆಕಟ್ಟು ನಿರ್ಮಿಸಿದರೆ ಅದು ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕರ್ನಾಟಕ ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿದರೆ ತಮಿಳುನಾಡು ರಾಜ್ಯಕ್ಕೆ ಹರಿಯುವ ನೀರಿನ ಪ್ರಮಾಣಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ನ್ಯಾಯಾಧೀಕರಣದ ಅಂತಿಮ ತೀರ್ಪಿನಂತೆ ನೀರು ಹಂಚಿಕೆಯಾಗುವುದಿಲ್ಲ, ಇದರಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ತಮಿಳುನಾಡು 2014ರ ಡಿಸೆಂಬರ್‌ನಲ್ಲಿಯೇ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ ಕೇಂದ್ರ ನಮ್ಮ ಮನವಿಯನ್ನು ಪರಿಗಣಿಸಿಲ್ಲ. ಆದ್ದರಿಂದ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ ತಕ್ಷಣ ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ರೈತರು ಪ್ರತಿಭಟನೆ ಮಾಡಿದ್ದರು : ಮೇಕೆದಾಟು ಬಳಿ ಕರ್ನಾಟಕ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸಬಾರದು ಎಂದು ಒತ್ತಾಯಿಸಿ ತಮಿಳುನಾಡಿನ ರೈತರು ಮಾ.8ರಂದು ಬೃಹತ್ ಪ್ರತಿಭಟನೆ ನಡೆಸಿದ್ದರು. ಮೇಕೆದಾಟುಗೆ ಆಗಮಿಸಲು ಯತ್ನಿಸಿದ ರೈತರನ್ನು ಕರ್ನಾಟಕದ ಪೊಲೀಸರು ತಡೆದಿದ್ದರು. ಏನಿದು ಯೋಜನೆ : 2013ರ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ಸರ್ಕಾರ ಮೊದಲು ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿತು. ಮಳೆಗಾಲದ ಸಂದರ್ಭದಲ್ಲಿ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿ, ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳುವುದು ಯೋಜನೆ ಮುಖ್ಯ ಉದ್ದೇಶವಾಗಿತ್ತು.

Write A Comment