ಬೆಂಗಳೂರು: ನಿಗೂಢವಾಗಿ ಸಾವನ್ನಪ್ಪಿರುವ ಐಎಎಸ್ ಅಧಿಕಾರಿ ಡಿ.ಕೆ.ರವಿಯವರ ಪತ್ನಿ ಕುಸುಮಾ ತೀವ್ರ ಆಯಾಸ ಹಾಗೂ ಒತ್ತಡದಿಂದಾಗಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.
ಕುಸುಮಾ ತಂದೆ ಹನುಮಂತರಾಯಪ್ಪ ಈ ಬಗ್ಗೆ ಮಾಹಿತಿ ನೀಡಿದ್ದು, ಆಕೆಯ ಖಾಸಗಿ ಬದುಕಿನ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ಓದಿದ ನಂತರ ತೀವ್ರ ಆಘಾತಕ್ಕೊಳಗಾಗಿರುವುದಾಗಿ ತಿಳಿಸಿದ್ದಾರೆ.
ಕಲ್ಪಿತ ವರದಿ ಪ್ರಕಟಿಸಿದ ಮಾಧ್ಯಮದ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಕುಸುಮಾ ತಂದೆ ಈ ಸಂದರ್ಭದಲ್ಲಿ ಹೇಳಿದ್ದಾರೆ. 2009ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ಕರ್ನಾಟಕದ ಮರಳು ಮಾಫಿಯಾದ ವಿರುದ್ಧ ಹೋರಾಟ ನಡೆಸಿದ್ದರು. ಅವರು ಕೆಲ ದಿನಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬ ಹೋರಾಟ ರಾಜ್ಯಾದ್ಯಂತ ತೀವ್ರಗೊಂಡಿದೆ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದು ಬಹುತೇಕ ಖಚಿತವಾಗಿದೆ.
ಏತನ್ಮಧ್ಯೆ ರವಿಯವರ ಸಾವು ಕೊಲೆಯೋ, ಆತ್ಮಹತ್ಯೆಯೋ ಎಂಬ ಜಿಜ್ಞಾಸೆಯೂ ಮುಂದುವರಿದಿದ್ದು, ಮಾಧ್ಯಮಗಳಲ್ಲಿ ರವಿಯವರ ಖಾಸಗಿ ಬದುಕಿನ ವಿವರಗಳು ಹೊರಬೀಳತೊಡಗಿದೆ.