ಅಮೆರಿಕಾ: ತನ್ನ ತಾಯಿ ಐ ಫೋನ್ ಕಸಿದುಕೊಂಡಿದ್ದಳೆಂಬ ಕಾರಣಕ್ಕೆ ಕೋಪಗೊಂಡಿದ್ದ 12 ವರ್ಷದ ಬಾಲಕಿಯೊಬ್ಬಳು ಆಕೆಯನ್ನು ಹತ್ಯೆ ಮಾಡಲು ಎರಡು ಬಾರಿ ವಿಫಲ ಯತ್ನ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಮೆರಿಕಾದ ಕೊಲೆರಾಡೊದಲ್ಲಿ ಈ ಘಟನೆ ನಡೆದಿದ್ದು, ಐ ಫೋನ್ ಉಪಯೋಗಿಸುತ್ತಿದ್ದ ಬಾಲಕಿಗೆ ಗದರಿಸಿದ್ದ ತಾಯಿ, ಅದನ್ನು ಆಕೆಯಿಂದ ಕಿತ್ತುಕೊಂಡಿದ್ದಳು. ಇದರಿಂದ ಒಳಗೊಳಗೆ ಕುದಿಯುತ್ತಿದ್ದ ಬಾಲಕಿ ಒಮ್ಮೆ ತನ್ನ ತಾಯಿಯ ಆಹಾರದಲ್ಲಿ ವಿಷ ಬೆರೆಸಿ ಕೊಲ್ಲಲು ಯತ್ನ ನಡೆಸಿದ್ದಳು. ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಆಹಾರ ಸೇವಿಸದ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಳು.
ಆದಾದ ಒಂದು ವಾರದೊಳಗೆ ಮತ್ತೊಮ್ಮೆ ತಾಯಿಯನ್ನು ಕೊಲ್ಲಲು ಪ್ಲಾನ್ ರೂಪಿಸಿದ ಬಾಲಕಿ, ತಾಯಿಯ ರೂಮಿನಲ್ಲಿದ್ದ ನೀರಿನ ಬಾಟಲ್ ಗೆ ವಿಷ ಬೆರೆಸಿದ್ದಳು. ನೀರು ಕುಡಿಯುವ ವೇಳೆ ಅದರ ವಾಸನೆ ನೋಡಿ ಅನುಮಾನಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಾರಣೆ ವೇಳೆ ಬಾಲಕಿ ತನ್ನ ತಪ್ಪೊಪ್ಪಿಕೊಂಡಿದ್ದು ಇದೀಗ ಬಾಲಕಿಯನ್ನು ಬಾಲಾಪರಾಧಿಗಳ ಕಾರಾಗೃಹಕ್ಕೆ ಕಳುಹಿಸಲಾಗಿದೆ.