ಬೆಂಗಳೂರು: ದಕ್ಷ ಹಾಗೂ ಪ್ರಾಮಾಣಿಕ ಐಎಎಸ್ ಅಧಿಕಾರಿ ಡಿ.ಕೆ. ರವಿಯವರು ನಿಗೂಢವಾಗಿ ಸಾವನ್ನಪ್ಪುವ ಮೊದಲು ಶನಿವಾರದಿಂದ ಸೋಮವಾರದವರೆಗೆ ಅವರ ದಿನಚರಿ ಹೇಗಿತ್ತು. ಇಲ್ಲಿದೆ ಅದರ ವಿವರ…
ಶನಿವಾರ: ರವಿಯವರು ಅಂದು ತಮ್ಮ ತಂಡದೊಂದಿಗೆ ದಾಳಿ ನಡೆಸಿ ಕೆಲ ಖಾಸಗಿ ಬಸ್ ಗಳನ್ನು ಸೀಜ್ ಮಾಡಿರುತ್ತಾರೆ. ಇದು ಮಾಧ್ಯಮಗಳಲ್ಲೂ ವರದಿಯಾಗುತ್ತದೆ. ಶನಿವಾರವಾದ ಕಾರಣ ರವಿಯವರು ನಾಗರಬಾವಿಯಲ್ಲಿರುವ ತಮ್ಮ ಮಾವ ಹನುಮಂತರಾಯಪ್ಪನವರ ಮನೆಯಲ್ಲೇ ವಾಸ್ತವ್ಯ ಹೂಡಿರುತ್ತಾರೆ.
ಅಂದು ರಾತ್ರಿ ಅವರ ಮೊಬೈಲಿಗೆ ಬೆಂಗಳೂರಿನ ಶಾಸಕರೊಬ್ಬರು ಕರೆ ಮಾಡಿದ್ದರೆಂದು ಹೇಳಲಾಗುತ್ತಿದ್ದು, ಖಾಸಗಿ ಬಸ್ ಗಳನ್ನು ಸೀಜ್ ಮಾಡಿರುವ ವಿಷಯ ಪ್ರಸ್ತಾಪಿಸುತ್ತಾರೆ. ಅದಕ್ಕೆ ರವಿಯವರು ಕಾನೂನಿನಂತೆ ಕ್ರಮ ಕೈಗೊಂಡಿರುವುದಾಗಿ ಹೇಳಿ ದಂಡ ಕಟ್ಟಿದರೆ ಬಸ್ ಗಳನ್ನು ಬಿಟ್ಟು ಕಳುಹಿಸುವುದಾಗಿ ಹೇಳುತ್ತಾರೆ.
ಬಳಿಕ ರಾತ್ರಿ ಪ್ರಭಾವಿ ವ್ಯಕ್ತಿಯೊಬ್ಬರ ಕಾಲ್ ಬರುತ್ತದೆ. ಈ ವೇಳೆ ಅವರು ಏರು ಧ್ವನಿಯಲ್ಲಿ ರವಿಯವರೊಂದಿಗೆ ಮಾತನಾಡಿದ್ದು, ರವಿಯವರು ಅದಕ್ಕೆ ತಕ್ಕ ರೀತಿಯಲ್ಲೇ ಜವಾಬು ಕೊಡುತ್ತಾರೆ. ಪತ್ನಿ ಈ ಕುರಿತು ಕೇಳಿದಾಗ ನಮ್ಮ ಕೆಲಸದಲ್ಲಿ ಇದೆಲ್ಲಾ ಮಾಮೂಲು ಎನ್ನುವ ರೀತಿ ಉತ್ತರ ಕೊಟ್ಟು ಸುಮ್ಮನಾಗುತ್ತಾರೆ.
ಭಾನುವಾರ: ಬೆಳಿಗ್ಗೆ ಮಾವ ಹನುಮಂತರಾಯಪ್ಪನವರೊಂದಿಗೆ ಕುಳಿತು ರವಿ ಉಪಹಾರ ಸೇವಿಸುತ್ತಾರೆ. ಆಗ ಖಾಸಗಿ ಬಸ್ ಮಾಲೀಕರೊಬ್ಬರ ಕರೆ ಬರುತ್ತದೆ. ಸೋಮವಾರ ಕಛೇರಿಗೆ ಬಂದು ದಂಡ ಕಟ್ಟಿ ಬಸ್ ಬಿಡಿಸಿಕೊಳ್ಳುವಂತೆ ರವಿ ಹೇಳುತ್ತಾರೆ. ಬಳಿಕ ಸ್ನೇಹಿತರಾದ ಹರಿ ಹಾಗೂ ಬಾಬು ಅವರೊಂದಿಗೆ ಹರಿ ಪತ್ನಿ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಾರೆ. ಮೂವರು ಸ್ನೇಹಿತರು ಹೋಟೆಲ್ ಒಂದರಲ್ಲಿ ಊಟ ಪೂರೈಸಿಕೊಂಡು ಹೊರಡುತ್ತಾರೆ.
ಕಾರಿನಲ್ಲಿದ್ದ ವೇಳೆಯೇ ರವಿಯವರ ಮೊಬೈಲಿಗೆ ನಾಲ್ಕು ಕರೆಗಳು ಬಂದಿದ್ದು, ಮೂರು ಕರೆಗಳಿಗೆ ಕಾರಿನಲ್ಲಿಯೇ ಕುಳಿತು ಉತ್ತರಿಸುವ ರವಿಯವರು ಒಂದು ಕರೆ ಬಂದ ವೇಳೆ ಮಾತ್ರ ಕಾರಿನಿಂದಿಳಿದು ಸ್ವಲ್ಪ ದೂರ ಹೋಗಿ ಮಾತನಾಡುತ್ತಾರೆ. ಮಾತನಾಡಿ ಬಂದ ಕುಳಿತ ವೇಳೆ ಅವರ ಮುಖದಲ್ಲಿ ಆಸಹನೆಯ ಲಕ್ಷಣ ಕಾಣುತ್ತದೆ.
ಈ ಕುರಿತು ಹರಿ ಕೇಳಿದಾಗ ಕಛೇರಿಯ ವಿಚಾರ ಎಂದಷ್ಟೇ ಹೇಳುತ್ತಾರೆ. ಸ್ವಲ್ಪ ಹೊತ್ತಿನಲ್ಲೇ ರವಿಯವರು ಎಂದಿನಂತೆ ಸ್ನೇಹಿತರೊಂದಿಗೆ ಮಾತಿಗಿಳಿಯುತ್ತಾರೆ. ಹರಿಯವರನ್ನು ಮನೆಗೆ ತಲುಪಿಸಿದ ನಂತರ ರವಿ ಮತ್ತೆ ಮಾವನ ಮನೆಗೆ ತೆರಳಿ ಅಲ್ಲಿಯೇ ತಂಗುತ್ತಾರೆ.
ಸೋಮವಾರ: ಸೋಮವಾರ ರವಿಯವರು ಎಂದಿನಂತೆ ಸರ್ಕಾರಿ ಕಾರಿನಲ್ಲಿ ಕೋರಮಂಗಲದಲ್ಲಿರುವ ತಮ್ಮ ಕಛೇರಿಗೆ ತೆರಳುತ್ತಾರೆ. ಆಪ್ತ ಸಹಾಯಕನ ಮೂಲಕ ಇತರೆ ಅಧಿಕಾರಿಗಳನ್ನು ಕರೆಸಿಕೊಂಡು ತಮ್ಮ ಕೊಠಡಿಯಲ್ಲಿ ಸಭೆ ನಡೆಸುತ್ತಾರೆ. ಈ ವೇಳೆ ಶನಿವಾರ ವಶಪಡಿಸಿಕೊಂಡಿದ್ದ ಖಾಸಗಿ ಬಸ್ ಗಳನ್ನು ಕಾನೂನಿನಂತೆ ದಂಡ ಕಟ್ಟಿಸಿಕೊಂಡು ಬಿಡುವಂತೆ ಸೂಚಿಸುತ್ತಾರೆ.
ಅಲ್ಲದೇ ಬೆಂಗಳೂರಿನ ಮೂರು ಪ್ರಮುಖ ಬಿಲ್ಡರ್ ಗಳು ತೆರಿಗೆ ವಂಚಿಸಿರುವ ಕುರಿತು ಅವರುಗಳ ಕಛೇರಿ ಮೇಲೆ ದಾಳಿ ನಡೆಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಾರೆ. ಲಭ್ಯ ಮಾಹಿತಿ ಪ್ರಕಾರ ರವಿಯವರು ಬದುಕಿದ್ದರೆ ಶುಕ್ರವಾರವಾದ ಇಂದು ದೊಡ್ಡ ದಾಳಿಯನ್ನು ನಡೆಸಲು ಯೋಚಿಸಿದ್ದರೆಂದು ಹೇಳಲಾಗುತ್ತಿದ್ದು, ದೊಡ್ಡವರ ಬಣ್ಣ ಬಯಲಾಗುತ್ತಿತ್ತೆಂಬ ಮಾತುಗಳು ಕೇಳಿ ಬರುತ್ತಿವೆ.
ಸಭೆಯಲ್ಲಿದ್ದಾಗಲೇ ರವಿಯವರ ಮೊಬೈಲಿಗೆ ಸಂದೇಶವೊಂದು ಬರುತ್ತದೆ. ಅದನ್ನು ನೋಡಿ ಕೆಲ ಕಾಲ ನಿರ್ಲಿಪ್ತರಾಗಿ ಕೂರುವ ರವಿಯವರು ಇತರೆ ಅಧಿಕಾರಿಗಳನ್ನು ಕಳುಹಿಸಿ ತಮ್ಮ ಕಾರಿನ ಚಾಲಕನಿಗೆ ಕೋರಮಂಗಲದಲ್ಲಿರುವ ಸೇಂಟ್ ಜಾನ್ ವುಡ್ ಅಪಾರ್ಟ್ಮೆಂಟಿಗೆ ತೆರಳಲು ಸೂಚಿಸುತ್ತಾರೆ. ಕಾರಿನಲ್ಲಿದ್ದಾಗಲೇ ರವಿಯವರಿಗೆ ಕರೆಯೊಂದು ಬರುತ್ತದೆ. ರವಿ ಸಹಜವಾಗಿಯೇ ಅವರೊಂದಿಗೆ ಮಾತನಾಡುತ್ತಾರೆ.
ತಮ್ಮ ಅಪಾರ್ಟ್ಮೆಂಟಿಗೆ ತೆರಳಿದ ರವಿಯವರು ಆಪ್ತ ಅಧಿಕಾರಿಯೊಬ್ಬರಿಗೆ ಮೆಸೇಜ್ ಕಳುಹಿಸಿದ್ದರೆಂದು ಹೇಳಲಾಗುತ್ತಿದ್ದು, ಬಳಿಕ ಅವರು ಪತ್ನಿ ಸೇರಿದಂತೆ ಯಾರೊಬ್ಬರ ಕರೆಯನ್ನು ಸ್ವೀಕರಿಸಿಲ್ಲ. ಹೀಗಾಗಿ ತಮ್ಮ ತಂದೆಯವರೊಂದಿಗೆ ಅಪಾರ್ಟ್ಮೆಂಟಿಗೆ ಬಂದ ರವಿಯವರ ಪತ್ನಿ ಕುಸುಮಾ ತಮ್ಮ ಬಳಿಯಿದ್ದ ಮತ್ತೊಂದು ಕೀ ಯಿಂದ ಬಾಗಿಲು ತೆರೆದ ವೇಳೆ ರವಿಯವರ ದೇಹ ಫ್ಯಾನಿಗೆ ತೂಗಾಡುತ್ತಿರುವುದು ಕಂಡು ಬರುತ್ತದೆ.