ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿಯವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಅಧಿಕಾರಿಯೊಬ್ಬರೊಂದಿಗೆ ಡಿ.ಕೆ. ರವಿಯವರು ಸಂಬಂಧ ಹೊಂದಿದ್ದರೆಂಬ ಸುದ್ದಿಗಳನ್ನು ಹರಿಬಿಡುತ್ತಾ ಸರ್ಕಾರ ಅವರ ತೇಜೋವಧೆ ಮಾಡುತ್ತಿದೆ. ಮಹಿಳಾ ಅಧಿಕಾರಿಯನ್ನು ನಡು ರಾತ್ರಿಯಲ್ಲಿ ವಿಚಾರಣೆ ನಡೆಸಲು ಯಾವ ಕಾನೂನು ಹೇಳುತ್ತದೆ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಮಾತನಾಡುವ ವೇಳೆ, ರವಿಯವರ ವಿಚಾರವನ್ನು ಬಯಲಿಗಿಟ್ಟರೆ ರಾಜ್ಯದ ಜನರ ಮುಂದೆ ಅವರ ಬಣ್ಣ ಬಯಲಾಗುತ್ತದೆ ಎಂಬ ಮಾತುಗಳನ್ನಾಡಿದ್ದಾರೆಂಬ ಮಾಹಿತಿ ತಮಗೆ ಬಂದಿದ್ದು, ಮುಖ್ಯಮಂತ್ರಿಗಳು ಈ ರೀತಿ ಮಾತನಾಡಿರುವುದು ಅವರ ಹುದ್ದೆಗೆ ಗೌರವ ತರುವಂತದ್ದಲ್ಲವೆಂದು ಹೇಳಿದ್ದಾರೆ.