ಕರ್ನಾಟಕ

ಕಲಾಪ: ತನುವಿನೊಡಗೂಡಿ ಮೂಡಿದ ಶಶಿ ಕಲೆ

Pinterest LinkedIn Tumblr

psmec20Shashi1

ಅಂತರಂಗದ ಅರಿವಿನ ಭಾವಾರ್ಥಕ್ಕೆ ತನ್ನದೇ ಆದ ವ್ಯಾಪ್ತಿಯೊಳಗೆ ಸಾರ್ಥಕ್ಯದ ನೆಲೆ ದೊರಕಿಸಿ ಕೊಡುವಲ್ಲಿ ಕಲಾವಿದ ಸಾರ್ಥಕತೆ ಕಾಣುತ್ತಾನೆ. ಕಲಾ ಬದುಕು, ಕಲಾ ಪ್ರಪಂಚಕ್ಕೆ ಅನೂಹ್ಯವಾದ ತನ್ನ ಕಲಾಭಾಷೆಯ ಮುಖಾಂತರ ತನ್ನೊಡಲ ಭಾವಾಭಿವ್ಯಕ್ತಿಯನ್ನು ತೋರ್ಪಡಿಸುವ ಸಂದರ್ಭದಲ್ಲಿ ಅವನ ಕಲಾ ಪಯಣ ಅನೇಕ ತಿರುವುಗಳಲ್ಲಿ ಭಿನ್ನ ರೂಪ ತಾಳುತ್ತದೆ ಎಂಬುದಕ್ಕೆ ಕಲಾವಿದೆ ಶಶಿಯ ಪಯಣವೇ ಉದಾಹರಣೆ ಯಾಗಬಲ್ಲದು.

ತುಮಕೂರಿನ ಕೊಳೆಗೇರಿಯೊಂದರ ಗುಡಿಸಲಿನಲ್ಲಿ ಜನಿಸಿದ ಶಶಿ ಇಂದು ಕಲಾಲೋಕಕ್ಕೆ ತೆರೆದುಕೊಂಡಿದ್ದು, ಅಸ್ತಿತ್ವ ಕಂಡುಕೊಂಡಿದ್ದು ಆಕಸ್ಮಿಕವಾಗಿಯೇ. ಸುಂದರ ಕನಸುಗಳ ಮೂಲಕ ಕಟ್ಟಿಕೊಳ್ಳುತ್ತಿದ್ದ ಬದುಕು, ಕೊಳೆಗೇರಿ ಗುಡಿಸಲುಗಳು ಮತ್ತು ನೆರೆಹೊರೆಯವರ ನಡುವೆಯೇ ತನ್ನರಿವಿಗೆ ಬಾರದೇ ಹೋದ ಬದುಕಿನ ಅನೇಕ ಭಾವನಾತ್ಮಕ ತಲ್ಲಣಗಳ ಮಧ್ಯೆ ತನ್ನದೊಂದು ಬದುಕಿಗೆ ದೃಶ್ಯಾತ್ಮಕ ದಿಶೆ ಕಲ್ಪಿಸಿಕೊಂಡವಳು ಶಶಿ.

ಈಗ ಏಕವ್ಯಕ್ತಿ ಚಿತ್ರಕಲಾಕೃತಿ  ಪ್ರದರ್ಶನ ನಡೆಸಲು ಮುಂದಾಗಿರುವ ಶಶಿ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿಯು ₹10 ಸಾವಿರ ಸಹಾಯಧನವನ್ನು ನೀಡಿದೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ರಂಗೋಲಿ-ಮೆಟ್ರೋ ಆರ್ಟ್ ಸೆಂಟರ್‌ನ ‘ಛಾಯಾ ಗ್ಯಾಲರಿ’ಯಲ್ಲಿ ಇದೇ ಮಾರ್ಚ್ 20ರಿಂದ 23ರವರೆಗೆ ಶಶಿ ಅವರ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ.

ಭಗವಂತನ ಅಗೋಚರ ರೂಪಗಳೊಂದಿಗೆ ತನ್ನ ಕೊಳೆಗೇರಿಯ ಗುಡಿಸಲುಗಳು, ಅವುಗಳ ಒಳಗೆ ನಡೆಯುವ ಬಡವಾದ-ಜಡವಾದ ಬದುಕಿನ ಯಾತನೆಗಳೊಂದಿಗೆ ಎಂದೋ ಒಂದು ದಿನ ಬಂದು ಹೋಗುವ ಸಂಭ್ರಮದ ಕ್ಷಣಗಳು ಶಶಿ ಅವರ ಕುಂಚದಲ್ಲಿ ದಟ್ಟವಾಗಿ ಮೂಡಿವೆ. ಇವರ ಕಲಾಕೃತಿಗಳು ನಮ್ಮ ಸಮಾಜದ ಬದುಕಿನ ವಾಸ್ತವದ ಕುರಿತು ಸೂಕ್ಷ್ಮ ಒಳನೋಟಗಳನ್ನು ಪ್ರಕಟಿಸುತ್ತವೆ.

ಈ ಹಿನ್ನೆಲೆಯಲ್ಲಿ ಅವಳ ಕೃತಿಗಳಲ್ಲಿನ ರೂಪಗಳು ತಾತ್ವಿಕ ಬದುಕಿನ ಸಂಘರ್ಷದ ಪ್ರತಿಮೆಗಳಂತೆ ಕಾಣಿಸಿಕೊಳ್ಳುವ ಬಗೆ ಅನನ್ಯವಾದದ್ದು. ತನ್ನ ಗುಡಿಸಲಿನ ಮುಂದಿನ ಮಣ್ಣಿನ ಹಾದಿಯೇ ಶಶಿಯ ಬಯಲು ಸ್ಟುಡಿಯೋ, ಹುಣ್ಣಿಮೆ ಚಂದಿರನೇ ಲೈಟು! ಜೊತೆಗೊಂದಿಷ್ಟು ಸ್ಟ್ರೀಟ್ ಲೈಟುಗಳ ಬೆಳಕಿನಲ್ಲಿ ತೆರೆದುಕೊಳ್ಳುವ ಅವರೆದುರಿನ ಲೋಕ ಕ್ಯಾನ್‌ವಾಸ್‌ ಮೇಲೂ ಬೆಳಗುತ್ತವೆ.

ಹವಾನಿಯಂತ್ರಿತ ಸ್ಟುಡಿಯೊಗಳಲ್ಲಿ ಹುಟ್ಟು ಪಡೆಯುವ ಕಲಾಕೃತಿಗಳಿಗೂ, ನೀಲಾಂಗಳದಲ್ಲಿ ಹುಟ್ಟು ಪಡೆಯುವ ಶಶಿಯ ಚಿತ್ರಗಳಿಗೂ ಅಜಗಜಾಂತರ ವ್ಯತ್ಯಾಸವುಂಟು. ಏಕೆಂದರೆ ವ್ಯಕ್ತಿ ಕೇಂದ್ರಿತ, ವಸ್ತು ಕೇಂದ್ರಿತ ಕಲಾಕೃತಿಗಳಲ್ಲಿನ ಸೀಮಾವಲಯವು ಒಬ್ಬ ಕಲಾವಿಮರ್ಶಕನಿಗಷ್ಟೇ ಗೋಚರವಾಗುವುದು.

‘ನನ್ನ ಮನಸ್ಸು ನನ್ನ ಪರಿಸರ’ ಎಂಬ ಶೀರ್ಷಿಕೆಯ ಕೃತಿಯಲ್ಲಿ ತನ್ನ ಸುತ್ತಲಿನ ಕೊಳಗೇರಿಯ ಬದುಕನ್ನೇ ಅತ್ಯಂತ ತಂತ್ರಗಾರಿಕೆಯ ವರ್ಣಮೇಳದೊಂದಿಗೆ ಪರಿಣಾಮಕಾರಿಯಾಗಿ ತೆರೆದಿಡುತ್ತಾರೆ ಈ ಕಲಾವಿದೆ.  ಹಾಗೆಯೇ, ತನ್ನ ಅಭಿವ್ಯಕ್ತಿಯಲ್ಲಿ ಶ್ರೀ ಕೃಷ್ಣ ಪರಮಾತ್ಮನಿಗೆ ತಲೆಬಾಗುವುದರೊಂದಿಗೆ, ಬುದ್ಧನ ಸೌಮ್ಯತೆಯ ಅಂಶಗಳನ್ನೂ ಇಲ್ಲಿನ ಕಲಾಕೃತಿಗಳಲ್ಲಿ ಕಾಣಬಹುದಾಗಿದೆ. ಮೌನಯುಕ್ತ, ಮೌಲ್ಯಯುಕ್ತ ಬದುಕಿನ ಈ ಅಭಿವ್ಯಕ್ತಿಗೆ ಭವಿಷ್ಯದ ದಿನಗಳಲ್ಲಿ ನ್ಯಾಯ ಒದಗಿಸುವ ಭರವಸೆಯನ್ನು ಪ್ರದರ್ಶಿತ ಕಲಾಕೃತಿಗಳು ನೀಡುತ್ತವೆ.

Write A Comment