ಕರ್ನಾಟಕ

ಯುಗಾದಿ 3 ಮುಖಗಳು

Pinterest LinkedIn Tumblr

yu

ಬೆಂಗಳೂರಿನಂತಹ ಮಹಾನಗರಗಳಲ್ಲಿ ಹಬ್ಬಗಳನ್ನು ನೋಡುವ– ಆಚರಿಸುವ ಕ್ರಮ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಅವರ ಹಿನ್ನೆಲೆ– ಆರ್ಥಿಕ ಪರಿಸ್ಥಿತಿ ಮತ್ತು ಅವರ ಜೀವನೋಪಾಕ್ಕಾಗಿ ಆಯ್ದುಕೊಂಡ ಕಾಯಕ ಇವೆಲ್ಲವೂ ಅವರು ಹಬ್ಬವನ್ನು ನೋಡುವ ಕ್ರಮವನ್ನು ನಿರ್ಣಯಿಸುವ ಮುಖ್ಯ ಅಂಶಗಳು. ಯುಗಾದಿ ಹಬ್ಬವೂ ಇದಕ್ಕೆ ಹೊರತಲ್ಲ.

ಕೆಲವರಿಗೆ ಯುಗಾದಿ ಹೊಸ ವರ್ಷದ ಸಂಭ್ರಮದ ಆಚರಣೆಯಾದರೆ, ಇನ್ನು ಕೆಲವರಿಗೆ ಅದು ತಮ್ಮ ಕಾಯಕತಾನದಲ್ಲಿ ಸೇರಿಹೋಗುವ ಇನ್ನೊಂದು ದಿನವಷ್ಟೇ. ಹಬ್ಬದ ಆಚರಣೆಯಲ್ಲಿ ಉತ್ಸಾಹವಿದ್ದರೂ ಅನಿವಾರ್ಯ ಕಾರಣಗಳಿಂದ ಅದರಲ್ಲಿ ತೊಡಗಿಕೊಳ್ಳಲಾದವರ ವರ್ಗವೂ ನಗರದಲ್ಲಿದೆ.

ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವುದಿಲ್ಲವೇ? ಎಂದು ಕೇಳಿದರೆ, ‘ಯಾವ ಯುಗಾದಿ? ಯಾವಾಗ ಯುಗಾದಿ?’ ಎಂದು ಮರುಪ್ರಶ್ನೆ ಎಸೆದು ಕುತೂಹಲದಿಂದ ಮುಖ ಮುಖ ನೋಡುತ್ತಾನೆ ಪಾನಿಪೂರಿ ಹುಡುಗ ನೀರಜ್‌. ಹದಿನಾಲ್ಕು ವರ್ಷದ ನೀರಜ್‌  ಉತ್ತರ ಪ್ರದೇಶದ ಹುಡುಗ. ಕೆಲವು ತಿಂಗಳಿಂದ ಬೆಂಗಳೂರಿಗೆ ಬಂದು ಅಣ್ಣನೊಟ್ಟಿಗೆ ರಾಜಾಜಿನಗರದಲ್ಲಿ ಪಾನಿಪೂರಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾನೆ. ಪೂರಿಯನ್ನು ಮುರಿದು ಪಾನಿ ತುಂಬಿ ತುಂಬಿ ತಟ್ಟೆಗಿಡುತ್ತಿದ್ದ ನೀರಜ್‌  ಯುಗಾದಿ ಎಂದ ತಕ್ಷಣ ತನ್ನ ಜಗತ್ತಿಗೆ ಸಂಬಂಧವಿಲ್ಲದ ಯಾವುದೋ ಶಬ್ದವನ್ನು ಕೇಳಿಸಿಕೊಂಡವನಂತೆ ಅಚ್ಚರಿಯಿಂದ ನೋಡಿದ.

ಅನುದಿನದ ಕಾಯಕದ ನಡುವೆ ನೀರಜ್‌ಗೆ ಯುಗಾದಿಯ ಪರಿವೆಯೇ ಇಲ್ಲ. ‘ನಾನು ಇಲ್ಲಿಯೇ ದೇವಸ್ಥಾದ ಪಕ್ಕದಲ್ಲಿ ಅಣ್ಣ ಅತ್ತಿಗೆಯೊಟ್ಟಿಗೆ ರೂಮು ಮಾಡಿಕೊಂಡಿದ್ದೇನೆ. ಬೆಳಗಿನ ಹೊತ್ತು ಪೂರಿಗಳನ್ನು ಮಾಡುವುದರಲ್ಲಿ ಕಳೆಯುತ್ತೇವೆ. ಸಾಯಂಕಾಲ ರಸ್ತೆ ಬದಿಯಲ್ಲಿ ನಿಂತು ಪಾನಿಪೂರಿ ಮಾರುತ್ತೇನೆ. ನಾನೊಂದು ಕಡೆ, ಅಣ್ಣ ಒಂದು ಕಡೆ ಗಾಡಿಯನ್ನಿಟ್ಟುಕೊಂಡು ಪಾನಿಪೂರಿ ಮಾರುತ್ತೇವೆ.

ಒಂದಷ್ಟು ಹಣ ಮಾಡಿಕೊಂಡು ಊರಿಗೆ ಹೋಗೋಣ ಎಂದು ಅಣ್ಣ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಅಪ್ಪ– ಅಮ್ಮ ಇಬ್ಬರೇ ಊರಿನಲ್ಲಿದ್ದಾರೆ’ ಎಂದು ತಮ್ಮ ಕಾಯಕವೃತ್ತಾಂತವನ್ನು ಪಟಪಟನೆ ಹಿಂದಿಯಲ್ಲಿ ಅರುಹುತ್ತಾನೆ ನೀರಜ್‌. ಊರಿನಲ್ಲಿಯೂ ಯುಗಾದಿ ಆಚರಿಸುವುದಿಲ್ಲವೇ? ಎಂದು ಕೇಳಿದರೆ, ‘ಗೊತ್ತಿಲ್ಲ. ನಾವಂತೂ ಇಲ್ಲಿ ಯಾವ ಹಬ್ಬವನ್ನೂ ಮಾಡುವುದಿಲ್ಲ. ಬರೀ ಪಾನಿಪೂರಿ ಮಾರುತ್ತೇವಷ್ಟೇ’ ಎಂದು ನೀರಜ್‌ ಮತ್ತೆ ಪಾನಿಪೂರಿ ಮುರಿಯುವಲ್ಲಿ ತಲ್ಲೀನನಾದ.

ಕೆ.ಆರ್‌. ರಸ್ತೆಯಲ್ಲಿ ಬುಟ್ಟಿ ನೇಯುವ ಕೆಲಸದಲ್ಲಿ ತೊಡಗಿಕೊಂಡಿರುವ ಸಿದ್ಧರಾಜು ಅವರೂ ಮೂಲತಃ ಮೈಸೂರಿನವರು.
ಕಳೆದ 70 ವರ್ಷಗಳಿಂದ ಇದೇ ಸ್ಥಳದಲ್ಲಿ ಬುಟ್ಟಿ ನೇಯ್ದು ಮಾರಾಟ ಮಾಡುತ್ತಿರುವ ಕುಟುಂಬ ಅವರದು. ಅವರಿಗೆ ಯುಗಾದಿಯೇ ದೊಡ್ಡ ಹಬ್ಬ. ‘ನಮಗೆ ಯುಗಾದಿ ಅಂದರೆ ದೊಡ್ಡಹಬ್ಬ. ಹಬ್ಬದ ಸಂದರ್ಭದ ಮೂರ್‍್ನಾಲ್ಕು ದಿನ ನಾವು ಕೆಲಸ ಮಾಡಲ್ಲ. ಹಿಂದಿನ ದಿನ ಸಂಜೆಯವರೆಗೆ ಕೆಲಸ ಮಾಡಿ ನಂತರ ಹಬ್ಬದ ಸಿದ್ಧತೆಯಲ್ಲಿ ತೊಡಗಿಕೊಳ್ಳುತ್ತೇವೆ.

ವರ್ಷದಲ್ಲಿ ಗೌರಿ ಹಬ್ಬ, ತುಳಸಿಹಬ್ಬ ಇನ್ನೂ ಯಾವ್ಯಾವುದೋ ಹಬ್ಬ ಬರ್ತದೆ. ಆದರೆ ಅದ್ಯಾವುದನ್ನೂ ನಾವು ಆಚರಿಸುವುದಿಲ್ಲ. ಯುಗಾದಿ ಮತ್ತು ಆಯುಧ‍ಪೂಜೆಯನ್ನು ಮಾತ್ರ ದೊಡ್ಡದಾಗಿ ಆಚರಿಸ್ತೀವಿ’ ಎಂದು ಹಬ್ಬದ ಸಂಭ್ರಮದ ಬಗ್ಗೆ ಹೇಳುತ್ತಾರೆ ಸಿದ್ಧರಾಜು.
ಹಬ್ಬದ ಮರುದಿನ ವರ್ಷದ ತೊಡಕು ಎಂಬ ಆಚರಣೆಯೂ ಅವರಲ್ಲಿದೆ.

‘ಆ ದಿನ ಮಾಂಸದ ಅಡುಗೆ ಮಾಡಿ ಉಣ್ತೀವಿ. ವರ್ಷದ ತೊಡಕು ನಮ್ಮ ತಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಯುಗಾದಿ ಯಾವ ವಾರ ಬರ್ತದೋ ಅದರ ಮರುದಿನ ವರ್ಷದ ತೊಡಕು ಮಾಡ್ತೀವಿ. ವರ್ಷದ ತೊಡಕು ಸೋಮವಾರ ಬಂದರೆ ಮಾತ್ರ ನಮ್ಮಲ್ಲಿ ಕೆಲವು ಜನ ಮಾಂಸ ತಿನ್ನಲ್ಲ. ಯಾಕೆಂದರೆ ನಾವು ಶಿವನ ಭಕ್ತರು…’ ಹೀಗೆ ಕುತೂಹಲಕಾರಿ ನಂಬಿಕೆಗಳನ್ನು ಹೊರಗೆಡಹುವ ಸಿದ್ಧರಾಜು, ಹಬ್ಬದ ಸಂದರ್ಭದಲ್ಲಿ ತಮ್ಮೂರು ಮೈಸೂರಿಗೆ ಹೋಗುವುದಿಲ್ಲ.

‘ಏನಾದ್ರೂ ಮದುವೆ, ಸಾವು ಆಯ್ತ ಅಂದಾಗ ಊರಿಗೆ ಹೋಗ್ತೇವೆ ಹೊರತು ಹಬ್ಬಕ್ಕೆಲ್ಲ ಊರಿಗೆ ಹೋಗಲ್ಲ. ಹಬ್ಬವನ್ನು ನಾವು ನಾವೇ ಸೇರಿಕೊಂಡು ಇಲ್ಲಿಯೇ ಆಚರಿಸ್ತೀವಿ. ಒಬ್ಬಟ್ಟು ಎಲ್ಲಾ ಮಾಡ್ತೀವಿ.  ನಂತರ ಅದಕ್ಕೆ ಹೂವಿನ ಅಲಂಕಾರ ಮಾಡ್ತೀವಿ. ಎಣ್ಣೆ ದೀಪ ಹಚ್ಚಿ, ತಲೆಮೇಲೆ ಹೊತ್ತುಕೊಂಡು ದೇವಸ್ಥಾನಕ್ಕೆ ಹೋಗಿ ದೇವರಿಗೆ ತೋರಿಸಿಬಿಟ್ಟರೆ ಹಬ್ಬ ಮುಗೀತು. ಅದಕ್ಕೆ ತಂಪು ಮಾಡುವುದು ಎನ್ನುತ್ತೇವೆ’ ಎಂದು ಹಬ್ಬದ ವಿಧಿ ವಿಧಾನಗಳ ಬಗ್ಗೆ ವಿವರಿಸುತ್ತಾರೆ ಸಿದ್ಧರಾಜು.

ಹಬ್ಬವೂ ಕರ್ತವ್ಯವೂ
ಯುಗಾದಿ ಆಚರಿಸುವ ಉಮೇದು  ಇದ್ದರೂ ಸರಿಯಾಗಿ ಆಚರಿಸಲಾಗುವುದಿಲ್ಲ. ವೃತ್ತಿಯ ಕಾರಣದಿಂದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಲಾಗದ ಪರಿಸ್ಥಿತಿ ನನ್ನದು. ಹಬ್ಬದ ದಿನವೇ ನಮಗೆ ಹೆಚ್ಚು ಕೆಲಸವಿರುತ್ತದೆ. ಜನ ಹೂವು ಹಣ್ಣು , ಸಿಹಿ ತಿನಿಸುಗಳನ್ನು ಕೊಳ್ಳಲೆಂದು ಮಾರುಕಟ್ಟೆಗೆ ಬರುತ್ತಾರೆ. ಆದ್ದರಿಂದ ಸಹಜವಾಗಿ ಟ್ರಾಫಿಕ್‌ ಜಾಮ್‌ ಆಗುತ್ತದೆ. ಅಲ್ಲದೇ ಅಂಗಡಿಯಿಂದ ದೂರದಲ್ಲಿ ವಾಹನ ನಿಲ್ಲಿಸಿ ನಡೆಯಲು ಜನ ಮನಸ್ಸು ಮಾಡುವುದಿಲ್ಲ.  ಅದರಿಂದ ಟ್ರಾಫಿಕ್‌ ಹೆಚ್ಚುತ್ತದೆ. ಅದರ ನಿರ್ವಹಣೆಯ ಗಡಿಬಿಡಿಯಲ್ಲಿ ನಮಗೆ ಬಿಡುವಿಲ್ಲದ ಕೆಲಸ.

ಹಬ್ಬದ ದಿನ ಬೆಳಿಗ್ಗೆ ಎಂಟು ಗಂಟೆಗೆಲ್ಲಾ ಕರ್ತವ್ಯದ ಮೇಲೆ ಹಾಜರಿರಬೇಕು. ಅವತ್ತು ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡಬೇಕು. ನಂತರ ಸಮಯವಿದ್ದರೆ ದೇವಸ್ಥಾನಕ್ಕೆ ಹೋಗುವುದು. ಆದರೆ ಬಹಳ ಸಮಯ ತಿಂಡಿ ತಿನ್ನಲಿಕ್ಕೂ ಸಮಯವಿರದೇ ಕರ್ತವ್ಯಕ್ಕೆ ಹಾಜರಾಗಬೇಕಾಗುತ್ತದೆ. ಮಧ್ಯಾಹ್ನ ಜನಸಂದಣಿ ಸ್ವಲ್ಪ ಕಡಿಮೆಯಾಗುತ್ತದೆ. ಆ ಸಮಯದಲ್ಲಿ ಮನೆಗೆ ಹೋಗಿ ಹಬ್ಬ ಆಚರಿಸಬೇಕು. ಅದೂ ಟ್ರಾಫಿಕ್‌ ಎಷ್ಟಿದೆ ಅನ್ನುವುದರ ಮೇಲೆ ನಿರ್ಧರಿತವಾಗುತ್ತದೆ.

ನಮ್ಮ ಮನೆಯ ಸದಸ್ಯರೆಲ್ಲ ಯುಗಾದಿಯನ್ನು ಚೆನ್ನಾಗಿ ಆಚರಿಸುತ್ತಾರೆ. ಒಬ್ಬಟ್ಟು, ಸಿಹಿತಿನಿಸುಗಳನ್ನು ಮಾಡುತ್ತಾರೆ. ಅವರೆಲ್ಲ ಹಬ್ಬ ಆಚರಿಸುವಾಗ ನಾನು ಮಾತ್ರ ರಸ್ತೆಯಲ್ಲಿ ಟ್ರಾಫಿಕ್‌  ನಿರ್ವಹಿಸುವಲ್ಲಿ ನಿರತನಾಗಿರುತ್ತೇನೆ. ಯುಗಾದಿಯ ಆಚರಣೆಯಲ್ಲಿ ತೊಡಗಿಕೊಳ್ಳುವುದು ನನಗೂ ಇಷ್ಟ. ಆದರೆ ಕೆಲಸಕ್ಕೆ ಬದ್ಧರಾಗಿದ್ದಾಗ ಅದೇ ಮುಖ್ಯವೆನಿಸುತ್ತದೆ.

ಒಂದು ಕಾರ್ಯಕ್ಕೆ ಬದ್ಧರಾದಾಗ ಇನ್ನೊಂದೇನಾದ್ರೂ ತ್ಯಾಗ ಮಾಡಲೇಬೇಕಾಗುತ್ತದೆ. ಕೆಲವೊಮ್ಮೆ ತ್ಯಾಗಮಾಡಬೇಕಾದ ವಿಷಯಗಳ ಪಟ್ಟಿಯೇ ದೊಡ್ಡದಾಗುತ್ತದೆ. ಅದಕ್ಕೆ ಚಿಂತಿಸಿ ಪ್ರಯೋಜನವಿಲ್ಲ. ಯಾಕೆಂದರೆ ನಾನು ಆಯ್ದುಕೊಂಡ ವೃತ್ತಿಯೇ ಅಂಥದ್ದು.  ವೃತ್ತಿ ಮತ್ತು ಕುಟುಂಬವನ್ನು ಬ್ಯಾಲೆನ್ಸ್‌ ಮಾಡುವುದು ತುಂಬ ಕಷ್ಟ.
–ಶ್ರೀನಿವಾಸ್‌
ಜಯನಗರ ಟ್ರಾಫಿಕ್‌ ಪೊಲೀಸ್‌ ಸಬ್‌  ಇನ್‌ಸ್ಪೆಕ್ಟರ್‌

Write A Comment