ಕರ್ನಾಟಕ

ಬಿಬಿಎಂಪಿ ವಿಭಜನೆ: ಮೂರು ಪಾಲಿಕೆ ರಚನೆ; ರಾಜ್ಯ ಸಂಪುಟದ ನಿರ್ಧಾರ

Pinterest LinkedIn Tumblr

4445

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಬೆಂಗಳೂರು ಕೇಂದ್ರ, ಪೂರ್ವ ಮತ್ತು ಪಶ್ಚಿಮ ಎಂದು ಮೂರು ಪಾಲಿಕೆಗಳಾಗಿ ವಿಭಜಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿ, ಆಕ್ಷೇಪಗಳು ಇದ್ದಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲು ನಿರ್ಧರಿಸಲಾಗಿದೆ. ಬಿಬಿಎಂಪಿ ಪ್ರಧಾನ ಕಚೇರಿಯನ್ನು ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಗೆ ನೀಡಲು ತೀರ್ಮಾನಿಸಲಾಗಿದೆ. ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ ಕಚೇರಿ ಎಂ.ಜಿ.ರಸ್ತೆಯ ಮೇಯೊಹಾಲ್‌ನ ಹಳೇ ಪಾಲಿಕೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ.

ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆಯ ಕಚೇರಿಯನ್ನು ವಿಜಯನಗರ ಅಥವಾ ಬ್ಯಾಟರಾಯನಪುರದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಸಂಪುಟದ ಈ ತೀರ್ಮಾನವನ್ನು ಶೀಘ್ರವೇ ಗೆಜೆಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಬಳಿಕ ವಾರ್ಡ್‌ಗಳ ಪುನರ್ವಿಂಗಡಣೆ ಸಂಬಂಧ ನಿರ್ಧಾರ ಮಾಡಲಾಗುತ್ತದೆ. ಬಿಬಿಎಂಪಿ ವಿಭಜನೆ ಪ್ರಕ್ರಿಯೆ ಮುಗಿಸಲು ಕಾಲಾವಕಾಶ ಬೇಕು. ಚುನಾವಣೆಯನ್ನು ಕನಿಷ್ಠ ನಾಲ್ಕು ತಿಂಗಳು ಮುಂದಕ್ಕೆ ಹಾಕುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿ.ಎಸ್‌. ಪಾಟೀಲ್‌ ನೇತೃತ್ವದ ತಜ್ಞರ ಸಮಿತಿ ತನ್ನ ಎರಡನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಬಿಬಿಎಂಪಿಯನ್ನು ಮೂರು ವಿಭಾಗ ಮಾಡಲು ಸಮಿತಿಯೇನೂ ಶಿಫಾರಸು ಮಾಡಿಲ್ಲ. ಲಂಡನ್ನಿನಂತೆ ಬರೋಗಳ ರಚನೆಗೆ ಆ ಸಮಿತಿ ಒಲವು  ತೋರಿದೆ ಎಂದು ಅವರು ಸ್ಪಷ್ಟಪಡಿಸಿದರು. ಬಿಬಿಎಂಪಿ ವಿಭಜನೆ ಪ್ರಕ್ರಿಯೆ ನಡೆಸುವಾಗ ಮತ್ತೆ ಯಾವುದೇ ಹೊಸ ಪ್ರದೇಶವನ್ನು ಸೇರ್ಪಡೆ ಮಾಡುವುದಿಲ್ಲ. 3 ಪಾಲಿಕೆಗಳ ಸರಹದ್ದನ್ನು ನಗರಾಭಿವೃದ್ಧಿ ಇಲಾಖೆ ಶೀಘ್ರವೇ ಸ್ಪಷ್ಟವಾಗಿ ಗುರುತಿಸಲಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ಚುನಾವಣೆಯನ್ನು ಯಾವಾಗ ನಡೆಸಲಾಗುವುದು ಎಂಬ ಮಾಹಿತಿಯನ್ನು ಹೈಕೋರ್ಟ್‌ಗೆ ಸಲ್ಲಿಸುವ ಒತ್ತಡದಲ್ಲಿರುವ ಸರ್ಕಾರ ಅದೇ ಆತುರದಲ್ಲಿ ನಿರ್ಣಯ ಕೈಗೊಂಡಿದೆ. ಬಿಬಿಎಂಪಿ ಪ್ರಸಕ್ತ ಕೌನ್ಸಿಲ್‌ನ ಆಡಳಿತಾವಧಿ ಏ. 22ರಂದು ಕೊನೆಗೊಳ್ಳಲಿದೆ.

‘ಚುನಾವಣೆಯನ್ನು ಮುಂದೂಡಲು ಈ ವಿಭಜನೆ ತಂತ್ರವೇ’ ಎಂದು ರಾಮಲಿಂಗಾರೆಡ್ಡಿ ಅವರನ್ನು ಪ್ರಶ್ನಿಸಿದಾಗ, ‘ಹಾಗೇನಿಲ್ಲ, ವಿಭಜನೆ ಪ್ರಕ್ರಿಯೆ ಮುಗಿಸಿ ಚುನಾವಣೆ ನಡೆಸಲು 3–4 ತಿಂಗಳ ಕಾಲಾವಕಾಶವಷ್ಟೇ ಸಾಕು. ಅಲ್ಲಿಯವರೆಗೆ ಬಿಬಿಎಂಪಿಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗುವುದು’ ಎಂದರು.

ಯಾವ ಪಾಲಿಕೆಗೆ ಯಾವ ವಿಧಾನಸಭಾ ಕ್ಷೇತ್ರ?
ಬೆಂಗಳೂರು ಕೇಂದ್ರ: ಪದ್ಮನಾಭನಗರ, ಹೆಬ್ಬಾಳ, ಪುಲಕೇಶಿನಗರ, ಚಿಕ್ಕಪೇಟೆ, ಸರ್ವಜ್ಞನಗರ, ಬಸವನಗುಡಿ, ಜಯನಗರ, ಶಿವಾಜಿನಗರ, ಗಾಂಧಿನಗರ, ಮಲ್ಲೇಶ್ವರ, ಚಾಮರಾಜಪೇಟೆ, ಬೆಂಗಳೂರು ದಕ್ಷಿಣ, ಮಹಾಲಕ್ಷ್ಮಿ ಲೇಔಟ್‌

ಬೆಂಗಳೂರು ಪೂರ್ವ : ಬೊಮ್ಮನಹಳ್ಳಿ, ಸಿ.ವಿ.ರಾಮನ್‌ ನಗರ, ಶಾಂತಿನಗರ, ಬಿ.ಟಿ.ಎಂ ಲೇಔಟ್‌, ಕೆ.ಆರ್‌.ಪುರ, ಮಹದೇವಪುರ.

ಬೆಂಗಳೂರು ಪಶ್ಚಿಮ : ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ದಾಸರಹಳ್ಳಿ, ಯಲಹಂಕ

ಆದಾಯ ಹಂಚಿಕೆ
ಪಾಲಿಕೆ ಹೆಸರು          ರೂ ಕೋಟಿಗಳಲ್ಲಿ
ಬೆಂಗಳೂರು ಕೇಂದ್ರ    586
ಬೆಂಗಳೂರು ಪೂರ್ವ    530
ಬೆಂಗಳೂರು ಪಶ್ಚಿಮ    520

Write A Comment