ನವದೆಹಲಿ: ಕರ್ನಾಟಕದ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಅಸಹಜ ಸಾವಿನ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಸುವಂತೆ ರಾಜ್ಯ ಸರ್ಕಾರದಿಂದ ಶಿಫಾರಸು ಬಂದ ಕೂಡಲೇ ಆದೇಶ ಹೊರಡಿಸುವುದಾಗಿ ಕೇಂದ್ರ ಸರ್ಕಾರ ಗುರುವಾರ ಲೋಕಸಭೆಗೆ ತಿಳಿಸಿತು.
ರವಿ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಿಸಿ ರಾಜ್ಯ ಬಿಜೆಪಿ ಸದಸ್ಯರು ಸದನದೊಳಗೆ, ಹೊರಗೆ ಒತ್ತಾಯಿಸಿದರು. ಗಾಂಧಿ ಪ್ರತಿಮೆ ಬಳಿ ಬೆಳಿಗ್ಗೆ ಕೆಲ ಹೊತ್ತು ಪ್ರದರ್ಶನ ನಡೆಸಿದ ಬಳಿಕ ಲೋಕಸಭೆಯಲ್ಲೂ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಗದ್ದಲವೆಬ್ಬಿಸಿದರು.
ಪ್ರಕರಣ ಕುರಿತು ರಾಜ್ಯ ಸರ್ಕಾರದಿಂದ ವರದಿ ಕೇಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ ಮಾತನಾಡಲಾಗಿದೆ. ಸಮಗ್ರ ಮಾಹಿತಿ ಬಂದ ತಕ್ಷಣ ವರದಿ ಕಳುಹಿಸುವುದಾಗಿ ಅವರು ತಿಳಿಸಿದ್ದಾರೆ ಎಂದು ಗೃಹ ಸಚಿವ ರಾಜನಾಥ್‌ಸಿಂಗ್ ಹೇಳಿದರು.
ಬಿಜೆಪಿ ಸದಸ್ಯ ಪ್ರಹ್ಲಾದ್ ಜೋಶಿ ಅವರು ರವಿ ಸಾವಿನ ಪ್ರಕರಣ ಕುರಿತು ಪ್ರಸ್ತಾಪಿಸಿದರು. ಕರ್ನಾಟಕದಲ್ಲಿ ಕಾನೂನು– ಸುವ್ಯವಸ್ಥೆ ಹದಗೆಟ್ಟಿದೆ. ಐಎಎಸ್ ಅಧಿಕಾರಿ ರವಿ ತಾಯಿ, ತಂದೆ ಸಿಬಿಐ ತನಿಖೆಗೆ ಬೇಡಿಕೆ ಇಟ್ಟರೂ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು. ಜೋಶಿ ಅವರ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕೆಲಕಾಲ ಗದ್ದಲ ಉಂಟಾಯಿತು.
ಕಾಂಗ್ರೆಸ್ ಸಂಸದರ ತಿರುಗೇಟು
ರವಿ ಸಾವಿನ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಸರ್ಕಾರ ಮುಂದಾಗಿದೆ. ಈ ಪ್ರಕರಣದ ಬಗ್ಗೆ ಸರ್ಕಾರ ನಿರಾಸಕ್ತಿ ತಳೆದಿಲ್ಲ ಎಂದು ಕಾಂಗ್ರೆಸ್ ಸದಸ್ಯರು ತಿರುಗೇಟು ನೀಡಿದರು. ಪಶ್ಚಿಮ ಬಂಗಾಳದಲ್ಲಿ ನಡೆದಿದೆ ಎನ್ನಲಾದ ಮತ್ತೊಂದು ಅತ್ಯಾಚಾರ, ತಮಿಳುನಾಡಿನಲ್ಲಿ ದಲಿತ ಸಮಾಜದ ವ್ಯಕ್ತಿ ಮೇಲಿನ ಹಲ್ಲೆ ಪ್ರಕರಣ ಇದೇ ಸಂದರ್ಭದಲ್ಲಿ ಪ್ರಸ್ತಾಪವಾದ್ದರಿಂದ ಕೋಲಾಹಲ ಉಂಟಾಗಿ ಸದನವನ್ನು 15 ನಿಮಿಷ ಮುಂದೂಡಲಾಯಿತು.
ಸಿಬಿಐ ತನಿಖೆ ಇಲ್ಲ: ಸಿ.ಎಂ
ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಕುರಿತ ತನಿಖೆಯನ್ನು ಸಿಬಿಐಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ಪುನರುಚ್ಚರಿಸಿದರು.
***
ಕರ್ನಾಟಕದಲ್ಲಿ ಕಾನೂನು– ಸುವ್ಯವಸ್ಥೆ ಹದಗೆಟ್ಟಿದೆ. ಐಎಎಸ್ ಅಧಿಕಾರಿ ರವಿ ತಾಯಿ, ತಂದೆ ಸಿಬಿಐ ತನಿಖೆಗೆ ಬೇಡಿಕೆ ಇಟ್ಟರೂ ಸರ್ಕಾರ ಹಿಂದೇಟು ಹಾಕುತ್ತಿದೆ.
ಪ್ರಹ್ಲಾದ ಜೋಶಿ, ಬಿಜೆಪಿ ಸಂಸದ
ಮುಖ್ಯಾಂಶಗಳು
* ಪ್ರಹ್ಲಾದ್ ಜೋಶಿ ಹೇಳಿಕೆಗೆ ಕಾಂಗ್ರೆಸ್ ಸದಸ್ಯರ ವಿರೋಧ
* ಸಿಐಡಿಯಿಂದ ನಿಷ್ಪಕ್ಷಪಾತವಾದ ತನಿಖೆ ನಿರೀಕ್ಷೆ ಸಾಧ್ಯವಿಲ್ಲ: ಬಿಜೆಪಿ