ಹುಬ್ಬಳ್ಳಿ: ‘ಮೈಂಡ್ ಟ್ರೀ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದ ನನ್ನ ಮಗಳು ಏಳು ತಿಂಗಳ ಹಿಂದೆ ಏಕಾಏಕಿ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ’ ಎಂದು ಇಲ್ಲಿನ ವಿದ್ಯಾನಗರ ನಿವಾಸಿ ಸಿದ್ಧಲಿಂಗೇಶ ಶೆಲಣ್ಣವರ ಸಂದೇಹ ವ್ಯಕ್ತಪಡಿಸಿದ್ದಾರೆ.
‘ಕಂಪೆನಿಯಲ್ಲಿ ಹಿರಿಯ ಟೆಸ್ಟರ್ (ಸಾಫ್ಟ್‌ವೇರ್ ಎಂಜಿನಿಯರ್) ಆಗಿ 2011ರಿಂದ ಕೆಲಸ ಮಾಡುತ್ತಿದ್ದ ಮಗಳು ಪೂಜಾ (24), ಪಾಪಯ್ಯನ ಬಡಾವಣೆಯಲ್ಲಿರುವ ತಾನು ಉಳಿದುಕೊಂಡಿದ್ದ ಕೊಠಡಿಯಲ್ಲಿ 2014ರ ಆಗಸ್ಟ್ 13ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಘಟನೆ ನಡೆದ ದಿನ ನಮಗೆ ಮಾಹಿತಿ ಬಂದಿತ್ತು. ಆದರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ದುರ್ಬಲ ಮನಸ್ಥಿತಿಯವಳಲ್ಲ. ಮಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಸಿಬ್ಬಂದಿ ಕೂಡಾ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ’ ಎಂದರು.
‘ಮಗಳನ್ನು ಕಳೆದುಕೊಂಡ ಆಘಾತದಿಂದ ಆ ಸಂದರ್ಭದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಬಳಿಕ ಆಕೆಯ ಮೊಬೈಲ್ ಪರಿಶೀಲಿಸಿದಾಗ, ‘ಸರ್’ ಎಂದು ಹೆಸರು ದಾಖಲು ಮಾಡಿಕೊಂಡ ಸಂಖ್ಯೆಗೆ, ‘ನೀವು ಹೇಳಿದ್ದನ್ನು ನಾನು ಮಾಡಲು ಸಿದ್ಧ ಸರ್’ ಎನ್ನುವ ಸಂದೇಶವೊಂದು ರವಾನೆಯಾಗಿರುವುದು ಪತ್ತೆಯಾಗಿದೆ. ಆಕೆ ಬಳಸುತ್ತಿದ್ದ ಮೊಬೈಲ್‌ನಲ್ಲಿ ಇರುವ ಈ ಸಂದೇಶ ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಅವರು ತಿಳಿಸಿದರು.
‘ಸಾವಿಗೀಡಾದ ದಿನ ಕೆಲಸಕ್ಕೆ ಹೋಗಿದ್ದ ಮಗಳು, ಲಿಫ್ಟ್‌ನಲ್ಲಿದ್ದೇನೆ ಎಂದು ಕರೆ ಮಾಡಿ ತಿಳಿಸಿದ್ದಳು. ತಾನಿದ್ದ ಕೊಠಡಿಯ ಮಾಲೀಕರ ಮನೆಯಲ್ಲಿ ಪೂಜೆ ಇದೆ ಎಂದು ಮಧ್ಯಾಹ್ನ ಊಟಕ್ಕೆಂದು ಹೊರಗೆ ಬಂದಿದ್ದಾಳೆ. ಮರಳಿ ಹೋಗದೆ ಈ ರೀತಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ಕೆಲಸ ಮಾಡುವ ಸ್ಥಳದಲ್ಲೇ ಇತ್ತು. ಆಕೆಯ ಜೊತೆ ನೆಲೆಸಿದ್ದ ಅದೇ ಕಂಪೆನಿಯ ಇತರ ಉದ್ಯೋಗಿಗಳು ಪೂಜಾ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಮಾತನಾಡಲು ಸಿದ್ಧರಿಲ್ಲ. ಸುದ್ದಿ ತಿಳಿದು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೋಗುವಷ್ಟರಲ್ಲಿ ಮಗಳ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾದ ಕೊಠಡಿಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಯಾವುದೇ ಸಾಕ್ಷ್ಯಗಳು ಇರಲಿಲ್ಲ. ಮರಣೋತ್ತರ ಪರೀಕ್ಷೆ ವರದಿ ನೀಡುವಂತೆ ಕೇಳಿದಾಗ, ಅದು ಸಿದ್ಧವಾಗಲು ಒಂದು ತಿಂಗಳ ಕಾಲಾವಕಾಶ ಬೇಕು ಎಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದರು. ಇವೆಲ್ಲವೂ ಅನುಮಾನಗಳಿಗೆ ಕಾರಣವಾಗಿವೆ’ ಎಂದರು.
‘ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಇತ್ತೀಚೆಗೆ ನಿಗೂಢವಾಗಿ ಹತ್ಯೆಯಾಗಿರುವ ಪ್ರಭಾ ಶೆಟ್ಟಿ ಕೂಡ ಮೈಂಡ್ ಟ್ರೀ ಕಂಪೆನಿಯಲ್ಲಿಯೇ ಕೆಲಸ ಮಾಡುತ್ತಿದ್ದರು’ ಎಂದು ಸಿದ್ಧಲಿಂಗೇಶ ಶೆಲಣ್ಣವರ ನೆನಪಿಸಿಕೊಂಡರು.
***
ಮಗಳ ಸಾವಿಗೆ ಕಂಪೆನಿ ಆಡಳಿತ ಮಂಡಳಿ ಅಥವಾ ಮೇಲಧಿಕಾರಿಗಳೇ ಕಾರಣ ಆಗಿರಬಹುದು. ಈ ಕುರಿತು ಮರು ತನಿಖೆ ನಡೆಸಬೇಕು
ಸಿದ್ಧಲಿಂಗೇಶ ಶೆಲಣ್ಣವರ, ಯುವತಿ ತಂದೆ