ಬೆಂಗಳೂರು: ‘ಯಾವುದೇ ರೋಗದಿಂದ ಮೃತಪಟ್ಟರೂ ಅದಕ್ಕೆ ಎಚ್1ಎನ್1 ಕಾರಣ ಎಂದು ರಂಪಾಟ ಮಾಡಲಾಗುತ್ತಿದೆ. ಇದು ನನ್ನ ಗ್ರಹಚಾರ. ಅಲ್ಲಗಳೆಯಲಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಮೇಲ್ಮನೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಬಿಜೆಪಿಯ ರಾಮಚಂದ್ರಗೌಡರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 2051 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 65 ಮಂದಿ ಸಾವನ್ನಪ್ಪಿದ್ದಾರೆ. ಎಚ್1ಎನ್1 ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಸದಸ್ಯರಾದ ವಿಮಲಾಗೌಡ, ಬಿ.ರಾಮಕೃಷ್ಣ, ರಘುನಾಥ್ ಮಲ್ಕಾಪುರೆ ಹಾಗೂ ಟಿ.ಎ.ಶರವಣ ಕೂಡ ಎಚ್1ಎನ್1 ಬಗ್ಗೆ ಪ್ರಶ್ನೆಂ ಎತ್ತಿದರು. ಎಚ್1ಎನ್1 ಸೋಂಕು ಹೆಚ್ಚುತ್ತಿರುವುದರಿಂದ ಮತ್ತೆ 5ಪ್ರಯೋಗಾಲಯತೆರೆಯಲು ನಿರ್ಧರಿಸಲಾಗಿದೆ. ಆದರೆ, ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರಿಗೆ ಇಲಾಖೆಯಿಂದ ಪರಿಹಾರ ನೀಡಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.