ಕರ್ನಾಟಕ

ಬೆಂಗಳೂರಿನ ಹೋಟೆಲ್ ದರ್ಶನ

Pinterest LinkedIn Tumblr

Hotel Windsor Manor Bangalore_25-6-1982

ಬೆಂಗಳೂರಿನಲ್ಲಿ ಹೋಟೆಲ್‌ ಉದ್ಯಮ ಬೆಳೆದು ಬಂದ ದಾರಿ ಬಹಳ ಆಸಕ್ತಿಕರವಾಗಿದೆ. ಒಂದೆಡೆ ಸ್ಟಾರ್ ಹೋಟೆಲ್‌ಗಳೂ, ಮತ್ತೊಂದೆಡೆ ಚಿಕ್ಕ–ಪುಟ್ಟ ಹೋಟೆಲ್‌ಗಳು, ಕಾಫಿ ಹೌಸ್‌ಗಳು, ನಂತರದ ದಿನಗಳಲ್ಲಿ ದರ್ಶಿನಿಗಳು ಬೆಳೆದು ಬಂದ ಪರಿ ಇಲ್ಲಿದೆ.

ಬೆಂಗಳೂರಿನಲ್ಲಿ ಆರಂಭವಾದ ಪ್ರಥಮ ಸ್ಟಾರ್ ಹೋಟೆಲ್‌ ‘ಕಬ್ಬನ್ ಹೋಟೆಲ್‍’. 1863ರಲ್ಲಿ ಯುರೋಪಿಯನ್ ಶೈಲಿಯಲ್ಲಿ, ಎಲ್ಲ ಆಧುನಿಕ ಸೌಲಭ್ಯಗಳೊಡನೆ, ಬಹಳ ವಿಶಾಲ ಕಟ್ಟಡದಲ್ಲಿ ಸಿ.ಜಿ. ಬ್ರೌನ್ ಇದನ್ನು ಆರಂಭಿಸಿದರು. ಆನಂತರ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ‘ಬೌರಿಂಗ್ ಹೋಟೆಲ್‌್’, ಬ್ರಿಗೇಡ್ ರಸ್ತೆಯಲ್ಲಿನ ‘ಮೆಯೋ ಹೋಟೆಲ್‌’ ಕಾರ್ಯಾರಂಭ ಮಾಡಿದವು. ಆದಾಗ್ಯೂ ಆಗ ಹೋಟೆಲ್‌ಗಳ ಸಂಖ್ಯೆ ತೀರಾ ಕಡಿಮೆಯೇ.

ಧರ್ಮಛತ್ರಗಳ ಅವಲಂಬನೆ
1880ರವರೆಗೂ ಹೆಚ್ಚಿನ ಜನರು, ಯಾತ್ರಾರ್ಥಿಗಳು ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವ ಧರ್ಮ ಛತ್ರಗಳನ್ನೇ ನಂಬಿಕೊಂಡಿದ್ದರು. ಅನ್ನ ಸಂತರ್ಪಣೆ, ದಾಸೋಹಗಳು ನಡೆಯುತ್ತಿದ್ದವು.  ಸತಿಗಾಗಿಯೂ ಇಂಥದ್ದೇ ದೇವಾಲಯಗಳು, ಛತ್ರಗಳನ್ನು ಅವಲಂಭಿಸಿದ್ದರು. 1885ರ ನಂತರ ಬ್ರಾಹ್ಮಣರ ಸಣ್ಣ–ಪುಟ್ಟ ಹೋಟೆಲ್‌ಗಳು ಹೆಚ್ಚಿದವು. ಅವುಗಳಲ್ಲಿ ಮೊದಲನೆಯದಾಗಿ ಗುರುತಿಸಿಕೊಳ್ಳುವುದೆಂದರೆ ಮುಳಬಾಗಿಲು ಊರಿನಿಂದ ಬಂದ ಆವನಿ  ನರಸಿಂಗರಾಯರ  ಹೋಟೆಲ್‌.

ಬ್ರಾನ್‌ಸನ್ಸ್ –ತಾಜ್ ವೆಸ್ಟ್ ಎಂಡ್
1887ರಲ್ಲಿ ಬ್ರಾನ್‌ಸನ್ ಎಂಬ ಮಹಿಳೆ ‘ಬ್ರಾನ್‌ಸನ್ಸ್ ವೆಸ್ಟ್ ಎಂಡ್’ ಎನ್ನುವ ಹೋಟೆಲ್‌ನ್ನು ಆರಂಭಿಸಿದರು. ಆಗ ಯುರೋಪಿಯನ್ ಪ್ರಜೆಗಳಿಗೆ ಈ ಹೋಟೆಲ್‌ ಅಚ್ಚುಮೆಚ್ಚಿನ ತಾಣವಾಗಿತ್ತು.  ಸುಮಾರು 125 ವರ್ಷಗಳಷ್ಟು ಸುದೀರ್ಘ ಇತಿಹಾಸ ಹೊಂದಿರುವ ಅತ್ಯಂತ ಪುರಾತನ ಕಾಲದ ಏಕೈಕ ಹೋಟೆಲ್‌ ಆಗಿ ಇಂದಿಗೂ ಇದು ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ.

ಅಲ್ಲದೇ, ಹಿಂದಿನ ಮುಖ್ಯ ಕಟ್ಟಡದ ಆಕರ್ಷಣೆಯನ್ನು ಹಾಗೇ ಉಳಿಸಿಕೊಂಡು ಬಂದಿರುವ, 22 ಎಕರೆ ವಿಶಾಲವಾದ ಪ್ರದೇಶದಲ್ಲಿರುವ ಈ ಹೋಟೆಲ್‌ ‘ದಿ ತಾಜ್ ವೆಸ್ಟ್ ಎಂಡ್’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಲೂ ವಿಶ್ವದ ಎಲ್ಲಾ ಭಾಗದ (ಯುರೋಪಿಯನ್ ಸಹಿತ) ಜನರನ್ನು ಆಕರ್ಷಿಸುತ್ತದೆ.

ಕಾಫಿ ಹೌಸ್
ನಗರದಲ್ಲಿ ಮೊದಲ ಕಾಫಿ ಹೌಸ್ ಆರಂಭವಾಗಿದ್ದು 1958ರ ಜನವರಿಯಲ್ಲಿ, ಅವೆನ್ಯೂ ರಸ್ತೆಯಲ್ಲಿ. ನಂತರ ಅಕ್ಟೋಬರ್ ತಿಂಗಳಲ್ಲಿ ಎಂ.ಜಿ. ರಸ್ತೆಯಲ್ಲಿ ಮತ್ತೊಂದು ಕಾಫಿ ಹೌಸ್ ಶುರುವಾಯಿತು. ‘ಪ್ರಜಾವಾಣಿ’ ಪತ್ರಿಕೆಯ ಅಂದಿನ ಸಂಪಾದಕರಾಗಿದ್ದ ಟಿ.ಎಸ್.ರಾಮಚಂದ್ರರಾಯರು ಅದನ್ನು ಉದ್ಘಾಟಿಸಿದ್ದರು.

1904–05ರ ವೇಳೆಗೆ ದಂಡು ಪ್ರದೇಶದ ಭಾಗದಲ್ಲಿ ಹಲವಾರು ಹೋಟೆಲ್‌ಗಳು ಊಟ–ವಸತಿಯ ಸೇವೆಗೆ ಅಣಿಯಾದವು. ಬ್ರಿಗೇಡ್ ರಸ್ತೆಯ ಆಲ್ಬರ್ಟ್ ವಿಕ್ಟರ್, ಇನ್‌ಫೆಂಟ್ರಿ ರಸ್ತೆಯ ಸೆಂಟ್ರಲ್ ಹೋಟೆಲ್‌, ರೆಸಿಡೆನ್ಸಿ ರಸ್ತೆಯ ಬೋರ್ಡಿಂಗ್ ಹೌಸ್, ಸೇಂಟ್ ಮಾರ್ಕ್ಸ್ ಹೋಟೆಲ್‌ ಮುಂತಾದವು ಪಾಶ್ಚಿಮಾತ್ಯ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು.  ಅಲ್ಲದೇ ಅಲ್ಲಿ ಮಾಂಸಾಹಾರ ಮುಖ್ಯವಾದ ಆಹಾರವಾಗಿತ್ತು.

ಶುದ್ಧ ಸಸ್ಯಾಹಾರ ಬಯಸುವವರು ಮಾತ್ರ 1905–06ರಲ್ಲಿ ಆರಂಭವಾದ ಬಳೇಪೇಟೆ ಸರ್ಕಲ್ ಬಳಿಯ ವೆಂಕಣ್ಣನವರ ಹೋಟೆಲ್‌ನತ್ತ ಪಾದ ಬೆಳೆಸಬೇಕಿತ್ತು. 1913–14ರ ವೇಳೆಗೆ ಚಿಕ್ಕಪೇಟೆಯಲ್ಲಿ ಸುಮಾರು 75ಕ್ಕೂ ಅಧಿಕ ಹೋಟೆಲ್‌ಗಳು ಇದ್ದವು. 1916ರಲ್ಲಿ ಆನಂದರಾವ್ ವೃತ್ತದಲ್ಲಿ ಕೆ.ಟಿ.ಅಪ್ಪಣ್ಣ ಅವರು ‘ಮಾಡರ್ನ್ ಹಿಂದೂ ಹೋಟೆಲ್‌’ ಅನ್ನು ಆರಂಭಿಸಿದರು. ಬಾಹ್ಮಣರಲ್ಲದವರು ಹೋಟೆಲ್‌ ಉದ್ಯಮಕ್ಕೆ ಧುಮುಕಿದ್ದು 1920ರಲ್ಲಿ. ಒಕ್ಕಲಿಗರಾಗಿದ್ದ ಬಿ.ಟಿ.ರಾಮಯ್ಯ ಅವರು ಮೈಸೂರು ಬ್ಯಾಂಕ್ ವೃತ್ತದ ಬಳಿ ‘ಯೂನಿಯನ್ ರೆಸ್ಟೋರೆಂಟ್’ ಆರಂಭಿಸಿದರು.

ಹೋಟೆಲ್‌ಗಳ ಒಕ್ಕೂಟ:
ಎಲ್ಲಾ ಹೋಟೆಲ್‌ಗಳು ಸೇರಿ ಒಂದು ಒಕ್ಕೂಟ ಸ್ಥಾಪಿಸಬೇಕೆಂಬ ಬಗ್ಗೆ ಚರ್ಚೆ ನಡೆದದ್ದೂ ಇದೇ ಅವಧಿಯಲ್ಲಿ. ಅಷ್ಟು ಹೊತ್ತಿಗೆ ನಗರದಲ್ಲಿ ನೂರಕ್ಕೂ ಹೆಚ್ಚು ಹೋಟೆಲ್‌ಗಳು ಇದ್ದವು. ಎಲ್ಲರೂ ಸೇರಿ ಕೆ.ಟಿ. ಅಪ್ಪಣ್ಣ, ಬಿ.ಟಿ.ರಾಮಯ್ಯ ಅವರ ನೇತೃತ್ವದಲ್ಲಿ ‘ದಿ ಹಿಂದೂ ಹೋಟೆಲ್‌ ಅಸೋಸಿಯೇಷನ್’ ಆರಂಭಿಸಿದರು.

1934ರಲ್ಲಿ ಡಾ.ಚಿಂತಾಮಣಿ  ಶಾಸ್ತ್ರಿಗಳು ‘ಶಾಸ್ತ್ರೀಸ್ ಹೋಟೆಲ್‌ ಅಂಡ್ ರೆಸ್ಟೋರೆಂಟ್’ ತೆಗೆದರು. ಮುಂದೆ ಅನೇಕ ಹೋಟೆಲ್‌ಗಳ ಒಡೆಯರಾದ ಶಾಸ್ತ್ರಿ ಅವರು 1959ರಲ್ಲಿ ‘ರಾಜ್‌ಮಹಲ್ ಹೋಟೆಲ್‌’ ಅನ್ನು ತೆರೆದರು. ಅಂದಿನ ಕಾಲಕ್ಕೆ ಅದು ಸಾಕಷ್ಟು ಜನಪ್ರಿಯತೆ ಗಳಿಸಿತ್ತು.

ವಿದ್ಯಾರ್ಥಿ ಭವನ:
1940ರಲ್ಲಿ ಗಾಂಧಿಬಜಾರಿನಲ್ಲಿ ಆರಂಭವಾದ ‘ವಿದ್ಯಾರ್ಥಿ ಭವನ’ ಅಂದಿಗೂ ಮಸಾಲೆ ದೋಸೆಗೆ ಪ್ರಸಿದ್ಧಿಯಾಗಿತ್ತು. ಈಗಲೂ ಇದು ಮಸಾಲೆ ದೋಸೆಗೆ ಪ್ರಸಿದ್ಧ.

ಹೋಟೆಲ್‌ ಅಶೋಕ
1971ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ವಿ.ವಿ ಗಿರಿ ಅವರು ಅಶೋಕ  ಹೋಟೆಲ್‌ ಅನ್ನು ಉದ್ಘಾಟನೆ ಮಾಡಿದರು. ವಿದೇಶಿ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಪ್ರಥಮ ತಾರಾ ಹೊಟೇಲ್ ಇದು.

1975ರ ವೇಳೆಗೆ ನಗರದಲ್ಲಿ ಸಾಕಷ್ಟು ಕಾಫಿಬಾರ್, ಟೀ ಸ್ಟಾಲ್, ಕ್ಯಾಂಟಿನ್‌ಗಳು ಇದ್ದವು. ಒಟ್ಟು ಸುಮಾರು 3,500ರಷ್ಟು ಹೋಟೆಲ್‌ಗಳು ಸೇವೆಗೆ ನಿಂತಿದ್ದವು. 40 ಸಾವಿರಕ್ಕೂ ಹೆಚ್ಚು ಹೋಟೆಲ್‌ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು.  ಆದರೆ ದರ್ಶಿನಿ ಪರಿಕಲ್ಪನೆ ಮೊಳಕೆ ಒಡೆದದ್ದು 80ರ ದಶಕದ ನಂತರವೇ.

Write A Comment