ಅಂತರಾಷ್ಟ್ರೀಯ

ಮುರುಗಲು ಅಥವಾ ಪುನರ್ಪುಳಿ ಹಣ್ಣು: ಅಚ್ಚರಿಯ ಅಚಾಚಾ ಫಲ

Pinterest LinkedIn Tumblr

kdec17-padre1_0

ಮುರುಗಲು ಅಥವಾ ಪುನರ್ಪುಳಿ ಹಣ್ಣು ಹೆಚ್ಚಿನವರಿಗೆ ಗೊತ್ತು. ಆದರೆ ಇದೇ ಗಾರ್ಸೀನಿಯಾ ಕುಟುಂಬದಲ್ಲಿ ನಮಗೆ ಪರಿಚಯವಿಲ್ಲದ ಇನ್ನೊಂದು ಅದ್ಭುತ ಹಣ್ಣಿದೆ. ಅದೇ ಅಚಾಚಾಯ್ರು. ಪೂರ್ವ ಬೊಲಿವಿಯಾದ ಕಾಡುಗಳಲ್ಲಿ ಅಚಾಚಾಯ್ರು ನೈಸರ್ಗಿಕವಾಗಿ ಬೆಳೆಯುತ್ತದೆ. ಇದರ ಶಾಸ್ತ್ರೀಯ ಹೆಸರು ಗಾರ್ಸೀನಿಯಾ ಹ್ಯುಮಿಲಿಸ್. ಕೆಲವರು ‘ಬೊಲಿವಿಯನ್ ಮ್ಯಾಂಗೋಸ್ಟೀನ್’ ಎನ್ನುತ್ತಾರೆ.  ನಿಜ ಹೆಸರು ಅಚಾಚಾಯ್ರು. ಉಚ್ಚರಿಸಲು ಕಷ್ಟ ಎಂದು ಇದನ್ನು ಚುಟುಕಾಗಿಸಿದ್ದು ಆಸ್ಟ್ರೇಲಿಯನ್ನರು. ಹಣ್ಣನ್ನು ಜನಪ್ರಿಯಗೊಳಿಸಿದ್ದೂ ಅವರೇ. ಅಲ್ಲಿರುವ ‘ಅಚಾಚಾ’ ಕಂಪೆನಿ ಆನ್‌ಲೈನ್ ಸೇಲ್ ಮೂಲಕ ಈ ಹಣ್ಣುಗಳನ್ನು ಗ್ರಾಹಕರ  ಮನೆಗೇ ತಲುಪಿಸುತ್ತಿದೆ.

ಅಚಾಚಾ ಹೀಗಿದೆ
ಬೊಲಿವಿಯಾದ ಗುವರಾನಿ ಭಾಷೆಯಲ್ಲಿ ಅಚಾಚಾಯ್ರು ಎಂದರೆ ‘ಜೇನಿನಂಥ ಮುತ್ತು’. ಹಳದಿಯಿಂದ ಕೇಸರಿ ಬಣ್ಣ. ತತ್ತಿಯಾಕಾರ. ಎರಡೂವರೆ ಸೆಂಟಿಮೀಟರ್ ಸುತ್ತಳತೆ. ಚೂರಿ ಅಥವಾ ಉಗುರಿನಲ್ಲಿ ಗೀರು ಹಾಕಿ ಬೆರಳುಗಳ ನಡುವೆ ಒತ್ತಿದರೆ ಸಾಕು, ಸಿಪ್ಪೆ ಒಡೆಯುತ್ತದೆ. ಈ ದಪ್ಪ ಸಿಪ್ಪೆ ಶರಬತ್ತಿಗೆ ಹೇಳಿ ಮಾಡಿಸಿದ್ದು. ಆದರೆ, ತಾಜಾ ಹಣ್ಣಾಗಿಯೇ ಬಳಕೆ ಜಾಸ್ತಿ. ಸಿಪ್ಪೆ ಬಿಡಿಸಿ ಕಚ್ಚಿ ತಿರುಳು ಮೆಲ್ಲುವುದು ಸುಲಭ. ಒಳಗೆ ಬೆಳ್ಳಗಿನ ತಿರುಳು. ಇದು ಸಿಪ್ಪೆಗೆ ಅಂಟಿಕೊಂಡಿರುವುದಿಲ್ಲ.

ಸಿಹಿ-ಹುಳಿಗಳ ಮಿಶ್ರರುಚಿ. ಆಕರ್ಷಕ ಪರಿಮಳ. ತಿರುಳನ್ನು ಫ್ರೂಟ್ ಸಲಾಡ್, ಸಾಸ್, ಜೆಲ್ಲಿ ಮಾರ್ಮಲೇಡ್ ಮತ್ತು ಕಾಕ್‌ಟೇಲ್‌ಗಳ ತಯಾರಿಗೆ ಬಳಸಬಹುದು. ಒಳಗೆ ಒಂದೆರಡು ಬೀಜ. ದಪ್ಪಗಿನ ಸಿಪ್ಪೆಯಿಂದಾಗಿ ಹೇಳಿಕೊಳ್ಳುವ ಕೀಟಬಾಧೆಯಿಲ್ಲ. ಉಷ್ಣಪ್ರದೇಶದ ಬೆಳೆ. ಚಳಿ ಹೆಚ್ಚಾದರೆ ಸೋಲು. ಸ್ವಲ್ಪ ಹುಳಿಮಿಶ್ರಿತ ತೇವಾಂಶವಿರುವ, ನೀರು ಚೆನ್ನಾಗಿ ಬಸಿದುಹೋಗುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಒಳ್ಳೆ ನೀರಾವರಿ ಮತ್ತು ಸೂಕ್ಷ್ಮಪೋಷಕಾಂಶಗಳು ಬೇಕು.

ಇದು ಮುರುಗಲು ಬೆಳೆಯುವಲ್ಲಿ, ಈಶಾನ್ಯ ಭಾರತದಲ್ಲೂ ಯಶಸ್ವಿಯಾಗುವ ಸಾಧ್ಯತೆಯಿದೆ. ಕೊಯ್ದ ನಂತರ ಕಾಯಿ ಪಕ್ವವಾಗುವುದಿಲ್ಲ. ಮಾಗಿದವುಗಳನ್ನೇ ಆಯ್ದು ಕೊಯ್ಯಬೇಕು. ಕೊಯ್ದು ವಾರಗಳ ಕಳೆದು ಸಿಪ್ಪೆಯಲ್ಲಿ ನೆರಿಗೆ ಬಿದ್ದರೂ ರುಚಿ ಕೆಡುವುದಿಲ್ಲ. ಬೀಜದಿಂದ ಇದರ ಪ್ರತ್ಯುತ್ಪಾದನೆ. ಬೀಜ ಬಿತ್ತಿದ ಪಾಲಿ ಬ್ಯಾಗನ್ನು ಪೂರ್ತಿ ಬಿಸಿಲಿಗೆ ಇಡಬಾರದು. ತೇವಾಂಶ ಇರಬೇಕು. ಇಪ್ಪತ್ತರಿಂದ ಮೂವತ್ತು ದಿನಗಳಲ್ಲಿ ಮೊಳಕೆ ಬರುತ್ತದೆ. ಮರ ಎಂಟರಿಂದ ಹತ್ತು ಮೀಟರ್ ಎತ್ತರಕ್ಕೆ ಬೆಳೆಯಬಲ್ಲದು.

ಬೃಹತ್‌ ತೋಟ
ಆಸ್ಟ್ರೇಲಿಯಾದ ಅಚಾಚಾ ಪ್ಲಾಂಟೇಶನ್ ಕ್ವೀನ್ಸ್‌ಲ್ಯಾಂಡಿನಲ್ಲಿದೆ.120 ಹೆಕ್ಟೇರಿನ ಈ ತೋಟ ಜಗತ್ತಿನಲ್ಲೇ ದೊಡ್ಡದು. ಬ್ರೂಸ್ ಹಿಲ್, ಮೇರಿ ಹಿಲ್ ದಂಪತಿ ಇದರ ಮಾಲೀಕರು. ಇವರ ಹಣ್ಣುಗಳು 35 ರಿಂದ 90 ಗ್ರಾಂ ತೂಗುತ್ತವೆ. ಸರಾಸರಿ ತೂಕ 45 ರಿಂದ 50 ಗ್ರಾಂ. ಹಣ್ಣಿನಲ್ಲಿ ಧಾರಾಳ ಆ್ಯಂಟಿಯಾಕ್ಸಿಡೆಂಟುಗಳು, ಅದರಲ್ಲೂ ‘ಸಿ’ ವಿಟಮಿನ್, ಫೋಲೇಟ್, ರೈಬೋಫ್ಲೇವಿನ್ ಮತ್ತು ಪೊಟ್ಯಾಸಿಯಂ ಅಂಶಗಳಿವೆ. 10 ರಿಂದ 20 ಡಿಗ್ರಿ ಸೆಂಟಿಗ್ರೇಡ್ ನಡುವೆ ಮುಚ್ಚಿದ ಪಾತ್ರೆಯಲ್ಲಿಟ್ಟರೆ ಇದು ಹಲವು ವಾರಗಳವರೆಗೆ ಕೆಡದೇ ಉಳಿಯುತ್ತವೆ. ಡಿಸೆಂಬರ್‌ನಿಂದ ಮಾರ್ಚ್ ಮಧ್ಯದ ಅವಧಿಯಲ್ಲಿ ಇದನ್ನು ಬೆಳೆಯಲಾಗುವುದು.

ಮಾರುಕಟ್ಟೆ ರಾಣಿ
ಇದು ನವೆಂಬರಿನಿಂದ ಫೆಬ್ರುವರಿವರೆಗೆ ಬೊಲಿವಿಯಾದ ಮಾರುಕಟ್ಟೆಯ ರಾಣಿ! ಪ್ರತಿವರ್ಷ ಜನವರಿಯಲ್ಲಿ ಪೊರೊಂಗೋ ಪಟ್ಟಣದಲ್ಲಿ ಎರಡು ದಿನ ‘ಅಚಾಚಾಯ್ರು ಉತ್ಸವ’ ನಡೆಯುತ್ತದೆ. ಕೃಷಿಕರು, ಪೊರೊಂಗೊ ನಗರ, ಸರ್ಕಾರದ ಜಂಟಿ ಕಾರ್ಯಕ್ರಮವಿದು. ಹಣ್ಣನ್ನು ಜನಪ್ರಿಯಗೊಳಿಸುವುದು, ಅಭಿವೃದ್ಧಿ ಮತ್ತು ಪ್ರವಾಸೋದ್ಯಮ – ಅಚಾಚಾಯ್ರು ಉತ್ಸವದ ಉದ್ದೇಶಗಳು. ಉತ್ಸವಕ್ಕೆ ನೂರಕ್ಕಿಂತಲೂ ಹೆಚ್ಚು ರೈತರು ಹಣ್ಣು ತರುತ್ತಾರೆ. ಎಂಬತ್ತು ಸಾವಿರದಿಂದ ಲಕ್ಷದಷ್ಟು ಹಣ್ಣುಗಳು ಮಾರಾಟವಾಗುತ್ತವೆ.

ಗುಣಮಟ್ಟ, ಗಾತ್ರ ಹೊಂದಿದ ನೂರು ಅಚಾಚಾಯ್ರು ಹಣ್ಣುಗಳಿಗೆ 10 ರಿಂದ 25 ಬೊಲಿವಿಯಾನೋ ಬೆಲೆಯಿದೆ. ಹಣ್ಣೊಂದಕ್ಕೆ ಒಂದರಿಂದ ಎರಡೂವರೆ ರೂಪಾಯಿ. ಉತ್ಸವದಲ್ಲಿ ಅಚಾಚಾಯ್ರು ಹಣ್ಣಿನ ಮೌಲ್ಯ ವರ್ಧಿತ ಉತ್ಪನ್ನಗಳೂ ಮಾರಾಟಕ್ಕಿರುತ್ತವೆ. ಅಚಾಚಾಯ್ರು ಯೋಗರ್ಟ್, ಅಚಾಚಾಯ್ರು ಲಿಕ್ಕೆರ್, ಅಚಾಚಾಯ್ರು ಪಿಕೋಲ್ (ಐಸ್‌ಕ್ಯಾಂಡಿಯಂತಹ ಉತ್ಪನ್ನ) , ಅಚಾಚಾಯ್ರು ಐಸ್‌ಕ್ರೀಮ್, ಸೋಡಾ, ಚಿಕನ್ ಅಚಾಚಾಯ್ರು… ಹೀಗೆ ಹಲವು ಸಿಹಿತಿಂಡಿಗಳು ಇಲ್ಲಿ ಗಮನಾರ್ಹ.

ಗಿಡ ಬೆಳೆಯುವ ಪರಿ
ಸರಿಯಾಗಿ ಬೆಳೆದ ಮರ ಹತ್ತುಸಾವಿರ ಹಣ್ಣುಗಳವರೆಗೂ ಬೆಳೆ ಕೊಡುವುದಿದೆ. ಆದರೆ ಈ ಘಟ್ಟ ತಲುಪಲು ಇಪ್ಪತ್ತು ವರ್ಷ ಆಗಬೇಕು. ನೆಟ್ಟು ಬೆಳೆ ಕೊಡಲು ಈ ಗಿಡ 8 ರಿಂದ10 ವರ್ಷಗಳೇ ತೆಗೆದು ಕೊಳ್ಳುತ್ತವೆ. ಬರೇ ಕಾಡುಬೆಳೆ ಯಾಗಿದ್ದ ಈ ಹಣ್ಣಿನ ಕೃಷಿಯಲ್ಲಿ ಇಲ್ಲಿನ ಕೃಷಿಕರು ಆಸಕ್ತಿವಹಿಸಿ ಅರ್ಧ ಶತಮಾನವೂ ಆಗಿರಲಾರದು.

ಇಷ್ಟರಲ್ಲೇ ಬೊಲಿವಿಯಾ ದಲ್ಲಿ ಈಗ ಅಚಾಚಾಯ್ರು ಜ್ಯೂಸ್, ಪ್ರಿಸರ್ವ್, ಐಸ್‌ಕ್ರೀಮ್ ಮತ್ತು ಇತರ ಉತ್ಪನ್ನಗಳು ವಾಣಿಜ್ಯ ಮಟ್ಟದಲ್ಲಿ ತಯಾ ರಾಗಿ ಜನಪ್ರಿಯತೆ ಪಡೆಯುತ್ತಿವೆ. ಜಗತ್ತಿನ ಗಮನ ಸೆಳೆದಿದೆ. ಬೊಲಿವಿಯಾದಿಂದ ಈ ಹಣ್ಣು ನೆರೆಯ ಬ್ರೆಜಿಲ್ಲಿಗೆ ರಫ್ತಾಗುತ್ತಿದೆ. ಇನ್ನಷ್ಟು ದೇಶಗಳಿಗೆ ರಫ್ತು ಮಾಡುವ ಪ್ರಯತ್ನಗಳು ಆರಂಭವಾಗಿವೆ. ಒಂದು ಮೂಲದ ಪ್ರಕಾರ 2010ರಲ್ಲಿ ಇಲ್ಲಿ 55 ದಶಲಕ್ಷ ಹಣ್ಣು ಉತ್ಪಾದನೆ ಆಗಿತ್ತು. ಇದರಿಂದ ಬಂದ ವರಮಾನ 4.50 ಲಕ್ಷ ಅಮೆರಿಕನ್ ಡಾಲರ್‌!

ನೆನಪಾಗುವ ಮುರುಗಲು
ಅಚಾಚಾ ಬಗ್ಗೆ ಹೆಚ್ಚುಹೆಚ್ಚು ತಿಳಿದುಕೊಂಡಂತೆ ನಮ್ಮ ಪಶ್ಚಿಮ ಘಟ್ಟಗಳ ಮುರುಗಲು (ಪುನರ್ಪುಳಿ, ಕೋಕಮ್) ನೆನಪಾಗುತ್ತದೆ. ಪುನರ್ಪುಳಿ ಈಗಲೂ ಹುಟ್ಟೂರು ಬಿಟ್ಟರೆ ಉಳಿದೆಡೆ ಬಹುತೇಕ ಅಪರಿಚಿತ. ಪುನರ್ಪುಳಿಯಲ್ಲಿರುವ ಹೈಡ್ರೋಕ್ಸಿ ಸಿಟ್ರಿಕ್ ಆಮ್ಲ ಬೊಜ್ಜು ವಿರೋಧಿ. ಕೊಲೆಸ್ಟ್ರಾಲ್‌ ಬರದಂತೆ ತಡೆಯುವ ಗುಣ ಹೊಂದಿದೆ. ಹಸಿವನ್ನು ಹದ್ದುಬಸ್ತಿನಲ್ಲಿಡುತ್ತದೆ.

ಇದರ ಬೀಜದ ಬೆಣ್ಣೆ ಕಾಲು ಒಡಕಿಗೆ, ಸುಟ್ಟ ಗಾಯಕ್ಕೆ, ಚರ್ಮ ರಕ್ಷಣೆಗೆ ಒಳ್ಳೆ ಮದ್ದು.  ಮಾವಿನಹಣ್ಣಿನ ಜ್ಯೂಸ್ ಬಿಟ್ಟರೆ ನಂತರ ಅತಿ ಹೆಚ್ಚು ಗ್ರಾಹಕ ಸ್ವೀಕೃತಿ ಪಡೆಯುವ ಶರಬತ್ತು ಇದರದು. ಬೇರೆಬೇರೆ ಸಮಸ್ಯೆಗಳಿಂದಾಗಿ ಬೆಳೆದದ್ದರಲ್ಲಿ ಕೇವಲ ಮೂವತ್ತು ಶೇಕಡವನ್ನಷ್ಟೇ ನಮಗೆ ಸದ್ಬಳಕೆ ಮಾಡಲು ಆಗುತ್ತಿದೆ! ಉಳಿದದ್ದೆಲ್ಲಾ ಮಣ್ಣಾಗಿ ಹೋಗುತ್ತಿದೆ.

ಅಚಾಚಾ ಕಂಪೆನಿ ಅನುಸರಿಸಿದ ಸಾರ್ವಜನಿಕ ಸಂಪರ್ಕ, ಸಂವಹನಾ ಜಾಣ್ಮೆಯಂಥ ಕಾರ್ಯಕ್ರಮಗಳನ್ನು ನಾವೂ ಮಾಡಿದ್ದರೆ ಕೋಕಮ್ ಅನ್ನೂ ದೇಶದಾದ್ಯಂತ ಮನೆಮಾತಾಗಿಸಬಹುದಿತ್ತು! ಬೆಳೆದವರ ಬಾಳೂ ಬೆಳಗಬಹುದಿತ್ತು. ‌ ಕರ್ನಾಟಕ- ಕೇರಳಗಳ ಒಬ್ಬಿಬ್ಬರು ಕೃಷಿಕರ ಅಂಗಳದಲ್ಲಿ ಇಷ್ಟರಲ್ಲೇ ಅಚಾಚಾ ಗಿಡ ಮೇಲೇಳುತ್ತಿವೆ. ಆಸಕ್ತರು ಮುಗಿಬೀಳಬಹುದೆಂಬ ಭಯದಿಂದ ಅವರು ಇದನ್ನು ಬಹಿರಂಗವಾಗಿ ಹೇಳುತ್ತಿಲ್ಲ.

ನಾವೂ ಬೆಳೆಸಬಹುದೇ?
ಬೀಜ ತರಿಸಿ ಅಚಾಚಾಯ್ರು ನಾವೂ ಬೆಳೆಸಬಹುದಾಗಿದೆ. ಪೋರ್ಟೋ ರಿಕೋ ಅಮೆರಿಕದ ದ್ವೀಪ. ಅಲ್ಲಿ ಅಪೂರ್ವ ಹಣ್ಣಿನ ತಳಿ ಸಂಗ್ರಹಿಸಿರುವ ‘ಗೋವರ್ಧನ್ ಗಾರ್ಡನ್ಸ್’ ಇದೆ. ಇದರ ಮಾಲೀಕ, ಸಂಶೋಧಕ – ಸಾಧು ಗೋವರ್ಧನ್ ಬಳಿ ಒಂದಕ್ಕೊಂದು ಅಲ್ಪಸ್ವಲ್ಪ ವ್ಯತ್ಯಾಸ ಇರುವ ಸುಮಾರು 25 ಪ್ರಭೇದಗಳ ಅಚಾಚಾಯ್ರು ಹಣ್ಣಿನ ಮರಗಳಿವೆ. ಅಲ್ಲಿ ಅಚಾಚಾಯ್ರು ಹಣ್ಣಾಗುವುದು ಜೂನ್‌ನಿಂದ ಅಕ್ಟೋಬರ್ ನಡುವೆ. ಆಗ ಬೀಜ ತರಿಸಿಕೊಳ್ಳಬಹುದು.

ಎರಡು ಥರದ ಪ್ಯಾಕೇಜ್ ಇದೆ. ನೂರು ಬೀಜಗಳದು ಮತ್ತು ಹತ್ತು ಡಾಲರಿನ ಪ್ಯಾಕೆಟ್‌. ಅಂಚೆ ದರ ದುಬಾರಿಯಾದ ಕಾರಣ ವೈಯಕ್ತಿಕವಾಗಿ  ಸಣ್ಣ ಪ್ಯಾಕೆಟ್ ತರಿಸಿಕೊಳ್ಳುವುದರ ಬದಲು ಒಂದಷ್ಟು ಮಂದಿ ಒಟ್ಟಾಗಿ ನೂರರ ಲೆಕ್ಕದಲ್ಲಿ ತರಿಸುವುದು ಅನುಕೂಲ ಎನ್ನುತ್ತಾರೆ ಸಾಧು. ಅತ್ಯುತ್ತಮ ಪ್ರಭೇದದ ನೂರು ಬೀಜಗಳಿಗೆ 135 ಅಮೆರಿಕನ್ ಡಾಲರ್, ಅಂಚೆಗೆ 25 ಡಾಲರ್ ಅಸಲು ಬೀಳಬಹುದು. 12 ರಿಂದ 18 ದಿನಗಳಲ್ಲಿ ಬೀಜ ಕೈಸೇರಬಹುದು. ಇದರ ಬಗ್ಗೆ ಮಾಹಿತಿಗೆ www.organicfarm.net ಅಥವಾ www.organicfarm.net/seeds.html ನೋಡಿ.

ಈ ಹಣ್ಣಿನ ಬೀಜ ಪಡೆಯಲು ಇನ್ನೊಂದು ಮೂಲ ಪಶ್ಚಿಮ ಇಕ್ವೆಡೋರಿನ ಗ್ವಾಯ್ಕುಯಾಕು ಡಾಟ್ ನೆಟ್. ಇವರ ಬಳಿಯೂ ನೂರು ಬೀಜದ ಮತ್ತು ಚಿಕ್ಕ ಪ್ಯಾಕೆಟಿನ ಆಫರ್ ಇದೆ. ಅಲ್ಲಿ ವರ್ಷದ ಬಹುತೇಕ ಕಾಲದಲ್ಲೂ ಬೀಜ ಸಿಗುತ್ತಿರುವ ಬಗ್ಗೆ ಮಾಹಿತಿ ಇದೆ. (ವೆಬ್‌ಸೈಟ್‌ wwww.guaycuyacu.net/ seed_sell.html).

ಈ ಹಣ್ಣಿನ ಬಗ್ಗೆ ಇನ್ನಷ್ಟು ಮಾಹಿತಿಗೆ ಅಚಾಚಾ ಕಂಪೆನಿಯ ವೆಬ್‌ಸೈಟ್‌ www.achacha.com.au) ಇದರಲ್ಲಿ ಅಸ್ಟ್ರೇಲಿಯಾದಲ್ಲಿ ಈ ಬೆಳೆಯನ್ನು ಹೇಗೆ ಬೆಳೆಯುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇದ್ದು,  300 ಎಕರೆ ಪ್ಲಾಂಟೇಶನನ್ನು ಹೆಲಿಕಾಪ್ಟರ್ ಮೂಲಕ ಚಿತ್ರೀಕರಿಸಿದ ವಿಡಿಯೊ ಇದೆ.

Write A Comment