ಬೆಂಗಳೂರು: ಹಣದಾಸೆಗೆ ವಿಷ ಬೆರೆಸಿದ ತಂಪು ಪಾನೀಯ ಕುಡಿಸಿ ಗೆಳತಿಯನ್ನು ಕೊಲೆ ಮಾಡಿದ್ದ ವಿಜಯಲಕ್ಷ್ಮಿ (50) ಎಂಬಾಕೆ ಈಗ ಪೊಲೀಸರ ಅತಿಥಿಯಾಗಿದ್ದಾಳೆ.
ಘಟನೆ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ತನಿಖಾಧಿಕಾರಿಗಳು, ‘ಅಗ್ರಹಾರ ಲೇಔಟ್ ನಿವಾಸಿಯಾದ ವಿಜಯಲಕ್ಷ್ಮಿ, ಶುಕ್ರವಾರ ಬೆಳಿಗ್ಗೆ ಚೋಳರಪಾಳ್ಯದ ಗೆಳತಿ ಮಣಿ ಮೇಲಗೈ (45) ಅವರ ಮನೆಗೆ ಹೋಗಿದ್ದಳು. ಫ್ರಿಡ್ಜ್‌ನಿಂದ ತಾನೇ ತಂಪು ಪಾನೀಯದ ಬಾಟಲಿ ತೆಗೆದುಕೊಂಡ ಆರೋಪಿ, ಎರಡು ಲೋಟಗಳಿಗೆ ಪಾನೀಯ ಹಾಕಿದ್ದಳು. ಈ ಹಂತದಲ್ಲಿ ಮಣಿ ಅವರಿಗೆ ತಿಳಿಯದಂತೆ ಒಂದರಲ್ಲಿ ವಿಷ ಹಾಕಿ, ಕುಡಿಯಲು ಕೊಟ್ಟಿದ್ದಳು’ ಎಂದರು.
ಸ್ಥಳೀಯರಿಂದ ಸುಳಿವು…
‘ಮಹಿಳೆ ಮೇಲೆ ಬಲವಾದ ಹಲ್ಲೆ ನಡೆದಿಲ್ಲ. ವಿಷವುಣಿಸಿ ಅಥವಾ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ’ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು ವರದಿ ಕೊಟ್ಟರು. ಅಲ್ಲದೆ, ಹಂತಕರು ಬಲವಂತವಾಗಿ ಮನೆ ಪ್ರವೇಶಿಸಿರದ ಕಾರಣ ಪರಿಚಿತರೇ ಕೃತ್ಯ ಎಸಗಿರುವ ಬಗ್ಗೆ ಅನುಮಾನ ವಿತ್ತು. ಸ್ಥಳೀಯರನ್ನು ವಿಚಾರಣೆ ನಡೆಸಿದಾಗ ವಿಜಯಲಕ್ಷ್ಮಿ, ಮಣಿ ಅವರ ಮನೆಗೆ ಬಂದು–ಹೋಗಿದ್ದು ಗೊತ್ತಾಯಿತು. ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬಯಲಾಯಿತು ಎಂದು ತನಿಖಾಧಿ ಕಾರಿಗಳು ಮಾಹಿತಿ ನೀಡಿದರು.
ಆ ಪಾನೀಯ ಕುಡಿದ ಸ್ವಲ್ಪ ಹೊತ್ತಿನಲ್ಲೇ ಮಣಿ ಕೆಳಗೆ ಬಿದ್ದು ಒದ್ದಾಡಲು ಆರಂಭಿಸಿದ್ದರು. ಆಗ ಆರೋಪಿಯು ಗೆಳತಿಯ ಚೀರಾಟ ನೆರೆ–ಹೊರೆಯವರಿಗೆ ಕೇಳಬಾರದೆಂದು ಬಟ್ಟೆಯಿಂದ ಬಾಯಿ ಮುಚ್ಚಿದ್ದಳು. ಅವರು ಪ್ರಜ್ಞೆ ತಪ್ಪುತ್ತಿದ್ದಂತೆಯೇ ಕೋಣೆಗೆ ಹೋಗಿ ಅಲ್ಮೆರಾದಲ್ಲಿದ್ದ ಒಡವೆ ತೆಗೆದುಕೊಂಡ ವಿಜಯಲಕ್ಷ್ಮಿ, ಗೆಳತಿಯ ಸಾವನ್ನು ಖಚಿತಪಡಿಸಿಕೊಂಡು ಹೊರ ನಡೆದಿದ್ದಳು ಎಂದು ಮಾಹಿತಿ ನೀಡಿದರು.
ಆರೋಪಿ ವಿಜಯಲಕ್ಷ್ಮಿಯ ಪತಿ ತೀರಿಕೊಂಡಿದ್ದರಿಂದ ಕುಟುಂಬಕ್ಕೆ ಆದಾಯವಿರಲಿಲ್ಲ. ಮಗಳು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಗೆಳತಿಯ ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇದ್ದುದರಿಂದ, ಅವರ ಮನೆಯಲ್ಲಿ ಹಣ–ಚಿನ್ನಾಭರಣ ದೋಚಲು ವಿಜಯಲಕ್ಷ್ಮಿ ಸಂಚು ರೂಪಿಸಿಕೊಂಡಳು. ಶುಕ್ರವಾರ ಬೆಳಿಗ್ಗೆ ಮೃತರ ಪತಿ ಹಾಗೂ ಮಗ ಹೊರ ಹೋದ ಬಗ್ಗೆ ಅರಿತ ಆರೋಪಿ, 11 ಗಂಟೆ ಸುಮಾರಿಗೆ ಮನೆಗೆ ಬಂದು ಕೃತ್ಯ ಎಸಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿರುವ ಮೃತರ ಮಗ ಇಳಂಗೊ, ತರಗತಿ ಮುಗಿಸಿಕೊಂಡು ಮಧ್ಯಾಹ್ನ 12.30ಕ್ಕೆ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
10 ವರ್ಷದ ಸ್ನೇಹ
ಮಣಿ ಅವರ ಕುಟುಂಬ ಹತ್ತು ವರ್ಷಗಳ ಹಿಂದೆ ಅಗ್ರಹಾರ ಲೇಔಟ್‌ನಲ್ಲಿ ಆರೋಪಿಯ ಮನೆ ಪಕ್ಕದಲ್ಲೇ ನೆಲೆಸಿತ್ತು. ಹೀಗಾಗಿ ಆಗಿನಿಂದಲೂ ಇಬ್ಬರ ನಡುವೆ ಸ್ನೇಹವಿತ್ತು. ಮೃತರ ಪತಿ ಸುಬ್ರಮಣಿ, ಈಚೆಗೆ ಚೋಳರ ಪಾಳ್ಯದಲ್ಲಿನ ಮನೆಗೆ ವಾಸ್ತವ್ಯ ಅಲ್ಲಿಗೆ ಬದಲಾಯಿಸಿದ್ದರು.