ಕಾರವಾರ: ನಗರದ ಎಂ.ಜಿ. ರಸ್ತೆಯಲ್ಲಿರುವ ಮನೆಯೊಂದರಲ್ಲಿ ಪಿಸ್ತೂಲ್ ತೋರಿಸಿ ಮನೆ ದರೋಡೆ ಮಾಡಿದ ಪ್ರಕರಣ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬಂಗಾರದ ವ್ಯಾಪಾರಿ ಅನಿಲ್ ಪಾವುಸ್ಕರ್ ಎಂಬುವವರ ಮನೆಗೆ ಕಸ್ಟಮ್‌್ಸ ಅಧಿಕಾರಿಗಳ ನೆಪದಲ್ಲಿ ನುಗ್ಗಿದ ದರೋಡೆಕೋರರು ನಂತರ ಪಿಸ್ತೂಲ್ ತೋರಿಸಿ ಬೆದರಿಸಿ ಅನಿಲ್ ಪಾವುಸ್ಕರ್, ಅವರ ಪತ್ನಿ, ಇಬ್ಬರು ಮಕ್ಕಳು ಹಾಗೂ ಮನೆಯ ಕೆಲಸದ ಹುಡುಗನನ್ನು ಕಟ್ಟಿ ಹಾಕಿದ್ದಾರೆ.
ಮನೆಯ ನೆಲದಲ್ಲಿದ್ದ ವಿಶೇಷ ಲಾಕರ್ ತೆರೆದು ಚಿನ್ನ ಹಾಗೂ ನಗದನ್ನು ಬ್ಯಾಗ್ ವೊಂದರಲ್ಲಿ ತುಂಬಿಕೊಂಡು ತೆರಳಿದ್ದಾರೆ. ಆದರೆ ಆಭರಣ ತುಂಬಿದ ಚೀಲ ಸ್ವಲ್ಪ ಹರಿದಿದ್ದ ಕಾರಣ ವಜ್ರದ ಹರಳು ಮನೆಯಲ್ಲಿ ಬಿದ್ದಿದೆ.
ಮನೆಯಿಂದ ಎಷ್ಟು ಪ್ರಮಾಣದ ನಗದು ಮತ್ತು ಬಂಗಾರದ ಆಭರಣ ದೋಚಲಾಗಿದೆ ಎಂಬುದನ್ನು ಅನಿಲ್ ಪಾವುಸ್ಕರ್ ಪೊಲೀಸರಿಗೆ ಖಚಿತವಾಗಿ ಹೇಳಿಲ್ಲ ಎನ್ನಲಾಗಿದೆ.
ಮಧ್ಯಾಹ್ನ 1.30ರ ವೇಳೆ ಈ ಘಟನೆ ನಡೆದಿದ್ದರೂ, ಸಂಜೆ ಪ್ರಕರಣ ದಾಖಲು ಪ್ರಕ್ರಿಯೆ ನಡೆಯಿತು. ದರೋಡೆ ನಡೆದ ಮನೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಅನತಿ ದೂರದಲ್ಲೇ ಇದೆ.
ನಗರದಲ್ಲಿ ಪಿಸ್ತೂಲ್ ತೋರಿಸಿ ಮನೆ ದರೋಡೆ ಮಾಡಿದ ಘಟನೆ ನಡೆಯುತ್ತಿರುವುದು ಇದೇ ಮೊದಲು ಎನ್ನಲಾಗಿದೆ.