ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಗಳು ಗುರುವಾರದಿಂದ ಆರಂಭವಾಗಲಿದ್ದು, ಪರೀಕ್ಷೆಯಲ್ಲಿ ನಕಲು ತಡೆಯುವುದಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಥವಾ ಟ್ಯಾಬ್ಲೆಟ್ಗಳನ್ನು ಅಳವಡಿಸುವ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಇನ್ನೂ ನಿರ್ಧಾರ ಕೈಗೊಂಡಿಲ್ಲ!
ಪತ್ರಿಕಾಗೋಷ್ಠಿ ನಡೆಸಿದ್ದ ಇಲಾಖೆ ನಿರ್ದೇಶಕಿ ಸುಷಮಾ ಗೋಡಬೋಲೆ, ನಕಲು ತಡೆಯುವ ನಿಟ್ಟಿನಲ್ಲಿ ನಿಗಾ ಇಡುವುದಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಬಗ್ಗೆ ಮಾತನಾಡಿದ್ದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಕೂಡ, ಸೂಕ್ಷ್ಮ ಎಂದು ಪರಿಗಣಿಸಲಾಗಿರುವ 300ರಿಂದ 500 ಪರೀಕ್ಷಾ ಕೇಂದ್ರಗಳಲ್ಲಿ ಟ್ಯಾಬ್ಲೆಟ್ಗಳನ್ನು ಅಳವಡಿಸಿ ಬೆಂಗಳೂರಿನಿಂದಲೇ ಮೇಲ್ವಿಚಾರಣೆ ನಡೆಸಲಾಗುವುದು ಎಂದಿದ್ದರು.
‘ಪರೀಕ್ಷೆಗೆ ಕೆಲವೇ ದಿನಗಳು ಇರುವುದರಿಂದ ಸಿಸಿಟಿವಿ ಅಳವಡಿಕೆ ಸಾಧ್ಯವಿಲ್ಲ. ಹೀಗಾಗಿ, ಗುಜರಾತ್ ಮಾದರಿಯಲ್ಲಿ ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಕೊಠಡಿಗಳಲ್ಲಿ ಟ್ಯಾಬ್ಲೆಟ್ಗಳನ್ನಿಟ್ಟು ಅದರ ಮೂಲಕ ನೇರವಾಗಿ ವಿಡಿಯೊ ಚಿತ್ರೀಕರಿಸಿ ಬೆಂಗಳೂರಿನಿಂದಲೇ ಮೇಲ್ವಿಚಾರಣೆ ನಡೆಸಲಾಗುವುದು. ಇದಕ್ಕೆ ₨1.5 ಕೋಟಿ ವೆಚ್ಚವಾಗಲಿದೆ. ಗುಜರಾತ್ನಲ್ಲಿ ಈ ವ್ಯವಸ್ಥೆ ಜಾರಿಗೊಳಿಸಿದ ಸಂಸ್ಥೆಯೇ ಇಲ್ಲೂ ಸೇವೆ ಒದಗಿಸಲಿದೆ’ ಎಂದು ಕಿಮ್ಮನೆ ರತ್ನಾಕರ ಹೇಳಿದ್ದರು.
ಆದರೆ, ಸಿಸಿಟಿವಿ ಕ್ಯಾಮೆರಾವನ್ನಾಗಲೀ ಅಥವಾ ಟ್ಯಾಬ್ಲೆಟ್‌ನ್ನಾಗಲೀ ಅಳವಡಿಸುವ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಇನ್ನೂ ನಿರ್ಧರಿಸಿಲ್ಲ.
ಪರೀಕ್ಷೆಗೆ ಸಂಬಂಧಿಸಿದಂತೆ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಸುಷಮಾ ಗೋಡಬೋಲೆ ಅವರು, ‘ಈ ಕುರಿತು ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ್ದೇವೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಹೇಳಿದರು.
ಸಕಲ ಸಿದ್ಧತೆ: ಗುರುವಾರದಿಂದ ಆರಂಭಗೊಳ್ಳಲಿರುವ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಅವಶ್ಯಕವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ. ತಾಲ್ಲೂಕು ಮಟ್ಟಗಳಲ್ಲಿ ತಹಶೀಲ್ದಾರ್, ಖಜಾನೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ: ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಸೂಕ್ಷ್ಮ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕರ (ಡಿಡಿಪಿಯು) ನೇತೃತ್ವದ ತಂಡ ಗಸ್ತು ತಿರುಗಲಿದೆ. ಕೇಂದ್ರಗಳ ಸುತ್ತಮುತ್ತಲಿನ ತರಬೇತಿ ಕೇಂದ್ರಗಳು, ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.
ಪ್ರವೇಶ ಪತ್ರದಲ್ಲಿ ಸಣ್ಣಪುಟ್ಟ ತಪ್ಪುಗಳಿದ್ದರೆ ಅದನ್ನು ಸರಿಪಡಿಸುವ ಅಧಿಕಾರವನ್ನು ಕಾಲೇಜುಗಳ ಪ್ರಾಂಶುಪಾಲರಿಗೆ ನೀಡಲಾಗಿದೆ. ಅದೇ ರೀತಿ ಶುಲ್ಕ ಪಾವತಿ ಮಾಡದ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ ನೀಡುವ ಬಗ್ಗೆ ಪ್ರಾಂಶುಪಾಲರ ಹಂತದಲ್ಲೇ ತೀರ್ಮಾನಿಸಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
2000 ವಿದ್ಯಾರ್ಥಿಗಳಿಗೆ ಅವಕಾಶ ಇಲ್ಲ
ರಾಜ್ಯದಾದ್ಯಂತ 2 ಸಾವಿರ ವಿದ್ಯಾರ್ಥಿಗಳು ಹಾಜರಾತಿ ಕೊರತೆ ಎದುರಿಸುತ್ತಿದ್ದು, ಪರೀಕ್ಷೆ ಬರೆಯುವುದಕ್ಕೆ ಅವರಿಗೆ ಅವಕಾಶ ಇಲ್ಲ ಎಂದು ಗೋಡಬೋಲೆ ಮಾಹಿತಿ ನೀಡಿದರು.
ಹೊಸ ಸಹಾಯವಾಣಿ
ಪರೀಕ್ಷೆಗೆ ಸಂಬಂಧಿಸಿದಂತೆ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿನ ಅನುಮಾನ, ಗೊಂದಲಗಳನ್ನು ಪರಿಹರಿಸುವುದಕ್ಕಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆ ಬುಧವಾರದಿಂದ ಹೊಸ ಸಹಾಯವಾಣಿ ಆರಂಭಿಸಿದೆ. ದೂರವಾಣಿ ಸಂಖ್ಯೆ: 080–23083900
‘ನಮಗೂ ಕರೆ ಮಾಡಬಹುದು’
ಪರೀಕ್ಷೆ ಬಗ್ಗೆ ಸಂದೇಹಗಳಿದ್ದರೆ ಹಾಗೂ ಅಕ್ರಮ ನಡೆಯುತ್ತಿರುವ ಮಾಹಿತಿಗಳಿದ್ದರೆ ವಿದ್ಯಾರ್ಥಿಗಳು ಅಥವಾ ಪೋಷಕರು ಇಲಾಖೆಯ ನಿರ್ದೇಶಕರ (9480814001) ಹಾಗೂ ಪರೀಕ್ಷಾ ವಿಭಾಗದ ಜಂಟಿ ನಿರ್ದೇಶಕರ (9480814006) ಮೊಬೈಲ್ ಸಂಖ್ಯೆಗಳಿಗೂ ಕರೆ ಮಾಡಬಹುದು
–ಸುಷಮಾ ಗೋಡಬೋಲೆ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ