ರಾಷ್ಟ್ರೀಯ

ಇಂಡಿಯನ್‌ ಆಯಿಲ್‌ ಅಧಿಕಾರಿ ಮಂಜುನಾಥ್‌ ಕೊಲೆ ಪ್ರಕರಣ: ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ‘ಸುಪ್ರೀಂ’

Pinterest LinkedIn Tumblr

Oil-Maphia

ನವದೆಹಲಿ: ಪೆಟ್ರೋಲ್‌ ಕಲಬೆರಕೆ ದಂಧೆ ಬಹಿರಂಗಪಡಿಸಲು ಯತ್ನಿಸಿದ್ದ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಕಾರ್ಯ­ನಿರ್ವಹ­ಣಾ­ಧಿಕಾರಿ ಎಸ್‌. ಮಂಜುನಾಥ್‌ ಅವರ ಹತ್ಯೆ ಪ್ರಕರಣದಲ್ಲಿ ಆರು ಮಂದಿಯ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ­ಕೋರ್ಟ್‌ ಸಮರ್ಥಿಸಿದೆ.

ಕೋಲಾರದ ಮಂಜುನಾಥ್‌ ಲಖನೌ ಐಐಎಂನಲ್ಲಿ ಓದಿದ್ದರು. ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದಿದ್ದರು. ಕಲ­ಬೆರಕೆ ಇಂಧನ ಮಾರಾಟ ಮಾಡುತ್ತಿದ್ದ ಪೆಟ್ರೋಲ್‌ ಪಂಪ್‌­ವೊಂದರ ಪರವಾನಗಿ ರದ್ದು ಮಾಡುವುದಾಗಿ ಮಂಜುನಾಥ್‌ ಬೆದ­ರಿಕೆ ಹಾಕಿದ್ದರು. ಇದಕ್ಕೆ ಪ್ರತೀಕಾ­ರಾರ್ಥ ಅವರನ್ನು ಗುಂಡಿಟ್ಟು ಕೊಲ್ಲ­ಲಾಗಿತ್ತು.
ಪೆಟ್ರೋಲ್‌ ಪಂಪ್‌ ಮಾಲೀಕ ಪವನ್‌ ಕುಮಾರ್‌ ಮಿತ್ತಲ್‌, ಆತನ ಸಹಚರರಾದ ದೇವೇಶ್‌ ಅಗ್ನಿ­ಹೋತ್ರಿ, ರಾಕೇಶ್‌ ಕುಮಾರ್‌ ಆನಂದ್‌, ಶಿವ­ಕೇಶ್‌ ಗಿರಿ, ವಿವೇಕ್‌ ಶರ್ಮ, ಹಾಗೂ ರಾಜೇಶ್‌ ವರ್ಮಾ ಆರೋಪಿಗಳು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ ೩೦೨ (ಕೊಲೆ), ೧೨೦ ಬಿ (ಅಪರಾಧ ಸಂಚು) ಹಾಗೂ ೨೦೧ ( ಸಾಕ್ಷ್ಯ ನಾಶ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳ ಅಡಿ ಈ 6 ಮಂದಿ ತಪ್ಪಿತಸ್ಥರು ಎಂದು ಅಲಹಾ­ಬಾದ್‌ ಹೈ ಕೋರ್ಟ್‌ ಆದೇಶ ನೀಡಿತ್ತು. ಅಲ್ಲದೇ ಇವರಿಗೆ ಜೀವಾ­ವಧಿ ಶಿಕ್ಷೆ ನೀಡಿತ್ತು. ಹೈಕೋರ್ಟ್‌ ಆದೇಶ­ ಪ್ರಶ್ನಿಸಿ ಇವ­ರೆಲ್ಲ ಸುಪ್ರೀಂ­ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಎಸ್‌. ಜೆ. ಮುಖ್ಯೋಪಾಧ್ಯಾಯ ಹಾಗೂ ಎನ್‌.ವಿ.ರಮಣ ಅವರಿದ್ದ ಪೀಠ ಈ ಮೇಲ್ಮನವಿಯನ್ನು ವಜಾ ಮಾಡಿದೆ.
ಮಿತ್ತಲ್ ಗಲ್ಲು ಶಿಕ್ಷೆಯನ್ನು ಅಲ­ಹಾ­ಬಾದ್‌ ಹೈಕೋರ್ಟ್‌ ಜೀವಾವಧಿಗೆ ಇಳಿಸಿತ್ತು. ಮಂಜುನಾಥ್‌ ಅವರ ಬರ್ಬರ ಹತ್ಯೆ ಹಿಂದಿನ ಉದ್ದೇಶಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್‌ ಮಂಡಿಸಿದ ವಾದ ನಂಬಲು ಯೋಗ್ಯವಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

‘ಶಿಕ್ಷೆ ಖಚಿತವಾಯ್ತು, ಸಂಕಟ ಮಾತ್ರ ಉಳಿಯಿತು’
‘ಮಂಜುನಾಥ್‌ ಅವರು ೨೦೦೫ರ ಸೆಪ್ಟೆಂಬರ್‌ ೧೩ರಂದು ಮಿತ್ತಲ್‌ ಆಟೊ­ಮೊಬೈಲ್ಸ್‌ನಲ್ಲಿ ತಪಾಸಣೆ ನಡೆಸಿದಾಗ ಅಕ್ರಮ ಕಂಡು ಬಂದಿತ್ತು. ಈ ಬಗ್ಗೆ ಅವರು ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ಗೆ ವರದಿ ಸಲ್ಲಿಸಿದ್ದರು. ಮಂಜುನಾಥ್‌ ಕೋರಿಕೆ­ಯಂತೆ ಮಿತ್ತಲ್‌ ಒಡೆ­ತನದ ಪೆಟ್ರೋಲ್‌ ಪಂಪ್‌ಗೆ, ಪೆಟ್ರೋಲ್‌ ಮಾರಾಟ ಹಾಗೂ ಸರಬರಾಜು ರದ್ದು ಮಾಡ­ಲಾಗಿತ್ತು’ ಎನ್ನುವುದು ಲಭ್ಯ ದಾಖಲೆ­ಯಿಂದ ಸ್ಪಷ್ಟವಾಗುತ್ತದೆ ಎಂದೂ ಅದು ತಿಳಿಸಿದೆ.
‘ಮಂಜುನಾಥ್‌ ಅವರನ್ನು ಕೊಲೆ ಮಾಡಲು ಆರೋಪಿಗಳು ಸಂಚು ಮಾಡಿ­­ದ್ದರು ಎಂದು ಕೆಳ ನ್ಯಾಯಾ­ಲಯದ ಆದೇಶದಲ್ಲಿ ಹೇಳಲಾಗಿದೆ. ಇದನ್ನು ನಾವು ಒಪ್ಪಿ­ಕೊ­ಳ್ಳುತ್ತೇವೆ. ಇಡೀ ಪ್ರಕರಣವನ್ನು ಪರಿ­ಶೀಲಿಸಿದಾಗ ಆರೋ­ಪಿಗಳ ಮೇಲ್ಮನವಿ­ಗಳನ್ನು ಪುರ­ಸ್ಕರಿ­­ಸುವುದಕ್ಕೆ ನಮಗೆ ಸೂಕ್ತ ಕಾರಣ ಸಿಗಲಿಲ್ಲ’ ಎಂದು ಕೋರ್ಟ್‌ ಹೇಳಿದೆ.

Write A Comment