ಕರ್ನಾಟಕ

ಅಕ್ರಮ ಸಂಬಂಧದ ಶಂಕೆಗೆ ಇಡೀ ಕುಟುಂಬವೇ ಬಲಿ..! ಪತ್ನಿ-ಮಗುವನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ನೇಣುಬಿಗಿದುಕೊಂಡ ಪತಿ

Pinterest LinkedIn Tumblr

Family-Killed-Suicide

ಶ್ರೀನಿವಾಸಪುರ, ಮಾ.11: ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಪತ್ನಿ ಮತ್ತು ಮಗುವನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೇಯ ಘಟನೆ ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಗ್ರಾಮಸ್ಥರು ದಿಗ್ಭ್ರಾಂತರಾಗಿದ್ದಾರೆ. ತಾಲೂಕಿನ ಮೀಸಗಾನಹಳ್ಳಿಯ ಗಂಗಾಧರ (35) ಆತ್ಮಹತ್ಯೆ ಮಾಡಿಕೊಂಡಿದ್ದು, ಪತ್ನಿ ಶಾಂತಮ್ಮ (23) ಮತ್ತು ಮಗ ಗಜೇಂದ್ರ (3)ನನ್ನು ಕೊಲೆ ಮಾಡಿದ್ದಾನೆ.

ಘಟನೆ ವಿವರ: ಶ್ರೀನಿವಾಸಪುರದ ಅಪ್ಪಯ್ಯಗಾರಿ ನಾರಾಯಣಸ್ವಾಮಿಗೆ ನಾಲ್ಕು ಜನ ಗಂಡು ಮಕ್ಕಳು. ಕೃಷಿ ಮಾಡುತ್ತಾ ಕುರಿ, ಮೇಕೆ ಸಾಕಿಕೊಂಡು ಚೆನ್ನಾಗಿಯೇ ಜೀವನ ಸಾಗಿಸುತ್ತಿದ್ದರು.

ಗಂಗಾಧರ ಮೊದಲನೆಯ ಮಗ. ಈತನಿಗೆ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿಯ ಶಾಂತಮ್ಮಳನ್ನು ವಿವಾಹ ಮಾಡಲಾಗಿತ್ತು. ಮದುವೆಯಾದ ನಂತರ ಗಂಗಾಧರ ಮೀಸಗಾನಹಳ್ಳಿಗೆ ಹೋಗಿ ನೆಲೆಸಿದ್ದ. ಮದುವೆಯಾದ ಒಂದೆರಡು ವರ್ಷಗಳ ನಂತರ ಪತಿ-ಪತ್ನಿ ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರೆಂದು ಶಂಕೆ ವ್ಯಕ್ತಪಡಿಸಿ ಸದಾ ಜಗಳವಾಡುತ್ತಿದ್ದರು.

ಶಾಂತಮ್ಮ ಎರಡನೇ ಮಗುವಿನ ಬಾಣಂತನಕ್ಕೆ ತವರಿಗೆ ಹೋಗಿದ್ದಳು. ಇತ್ತೀಚೆಗೆ ಪತ್ನಿಯನ್ನು ತವರಿನಿಂದ ಕರೆತಂದಿದ್ದ ಗಂಗಾಧರ ಮತ್ತೆ ಕ್ಯಾತೆ ತೆಗೆದಿದ್ದ. ನಿನ್ನೆ ಮಧ್ಯರಾತ್ರಿಯವರೆಗೂ ಪತಿ-ಪತ್ನಿ ಜಗಳವಾಡಿದ್ದಾರೆ. ಮಧ್ಯರಾತ್ರಿ ಯಾವಾಗಲೋ ಗಂಗಾಧರ ಪತ್ನಿ ಮತ್ತು ಮೂರು ವರ್ಷದ ಗಜೇಂದ್ರನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿ, ಎಂಟು ತಿಂಗಳ ಪುಟ್ಟ ಕಂದನನ್ನು ಅಲ್ಲೇ ಬಿಟ್ಟು ಬಾಗಿಲು ತೆಗೆದು ಊರ ಹೊರಗಿನ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮುಂಜಾನೆ ಅಕ್ಕಪಕ್ಕದವರು ಗಂಗಾಧರ ಮನೆ ಬಾಗಿಲು ದೊಡ್ಡದಾಗಿ ತೆರೆದಿರುವುದನ್ನು ಕಂಡು ಅನುಮಾನಗೊಂಡು ಒಳಗೆ ಹೋದಾಗ ಶಾಂತಮ್ಮ ಮತ್ತು ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿ ತಕ್ಷಣ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ನಂತರ ಜಮೀನಿಗೆ ಹೋದವರು ಗಂಗಾಧರ ನೇಣು ಹಾಕಿಕೊಂಡಿರುವುದನ್ನು ಕಂಡು ಓಡಿ ಬಂದು ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ, ಡಿವೈಎಸ್ಪಿ ಅಬ್ದುಲ್ ರೆಹಮಾನ್, ಇಲ್ಲಿನ ಠಾಣೆ ಸರ್ಕಲ್ ಇನ್‌್್ಪೆಕ್ಟರ್ ಶಿವಪ್ರಸಾದ್, ಸಬ್‌ಇನ್ಸ್‌ಪೆಕ್ಟರ್ ಉಮಾಶಂಕರ್ ಮತ್ತು ಸಿಬ್ಬಂದಿ ಬೆರಳಚ್ಚು ತಜ್ಞರು ಶ್ವಾನದಳದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ವಿಷಯ ತಿಳಿದು ಮೀಸಗಾನಹಳ್ಳಿಯಷ್ಟೇ ಅಲ್ಲದೆ ಸುತ್ತಮುತ್ತಲಿನ ಗ್ರಾಮದ ಜನರು ಧಾವಿಸಿದ್ದು, ಜನಜಾತ್ರೆಯೇ ನೆರೆದಿದೆ. ಇದ್ಯಾವುದೂ ಅರಿಯದ ಎಂಟು ತಿಂಗಳ ಪುಟ್ಟ ಕಂದ ತಾಯಿಗಾಗಿ ರೋದಿಸುತ್ತಿದ್ದುದು ಎಂಥವರ ಮನವನ್ನು ಕಲಕುವಂತಿತ್ತು. ಶ್ರೀನಿವಾಸಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

Write A Comment