ಮಂಗಳೂರು, ಮಾ.11: ಪಟ್ಟಣ ಪ್ರದೇಶಗಳ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಅಡುಗೆ ಅನಿಲ ಗ್ಯಾಸ್ ಸಂಪರ್ಕ ನೀಡಿರುವ ಮಾದರಿಯಲ್ಲಿ ಗ್ರಾಮೀಣ ಪ್ರದೇಶಗಳ ಬಿಪಿಎಲ್ ಕುಟುಂಬಗಳಿಗೂ ಉಚಿತ ಗ್ಯಾಸ್ ಸಂಪರ್ಕ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಪತ್ರ ಬರೆಯಲು ಜಿಲ್ಲಾ ಕೆಡಿಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.
ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಪ್ರಸ್ತುತ ನಗರ ಪ್ರದೇಶಗಳಲ್ಲಿ ಅಲ್ಲಿನ ಪುರಸಭೆ/ಪಟ್ಟಣ ಪಂಚಾಯತ್‌ಗಳ ಸಹಕಾರದಿಂದ ಬಿಪಿಎಲ್ ಕುಟುಂಬಗಳಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ. ನಗರ ಪ್ರದೇಶಗಳಲ್ಲಿ ಬಿಪಿಎಲ್ ಗ್ಯಾಸ್ ಸಂಪರ್ಕಕ್ಕೆ ಗ್ಯಾಸ್ ಕಂಪೆನಿಗಳು ಭದ್ರತಾ ಠೇವಣಿಯಿಂದ ವಿನಾಯಿತಿ ನೀಡುತ್ತದೆ. ಇದನ್ನು ಗ್ರಾಮಾಂತರ ಪ್ರದೇಶಕ್ಕೂ ವಿಸ್ತರಿಸಬೇಕು. ಅಲ್ಲದೆ, ರಾಜ್ಯ ಸರಕಾರವೂ ಇದಕ್ಕೆ ನೆರವು ನೀಡಿದರೆ, ಗ್ರಾಮೀಣ ಬಿಪಿಎಲ್ ಕುಟುಂಬಗಳಿಗೆ ಸಂಪೂರ್ಣ ಉಚಿತವಾಗಿ ಗ್ಯಾಸ್ ಸಂಪರ್ಕ ನೀಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಶರಣಬಸಪ್ಪ, ಗ್ರಾಮೀಣ ಪ್ರದೇಶಗಳಿಗೂ ಉಚಿತ ಗ್ಯಾಸ್ ಸಂಪರ್ಕ ನೀಡುವ ಬಗ್ಗೆ ಈಗಾಗಲೇ ಗ್ಯಾಸ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದರು. ಮಂಗಳೂರು ಮಹಾಣಗರಪಾಲಿಕೆ ಸೇರಿದಂತೆ ದ.ಕ. ಜಿಲ್ಲೆಯ ಎಲ್ಲ ನಗರ/ಪಟ್ಟಣ ಪ್ರದೇಶಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಸಂಪೂರ್ಣ ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ.ಮಾರ್ಚ್ ಅಂತ್ಯದೊಳಗೆ ಎಲ್ಲರಿಗೂ, ಸಂಪರ್ಕ ನೀಡಿ, ಸೀಮೆಎಣ್ಣೆ ರಹಿತ ಪ್ರದೇಶ ಎಂದು ಘೋಷಣೆ ಮಾಡಲು ಸಿದ್ಧತೆ ಮಾಡಲಾಗಿದೆ ಎಂದರು. ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮೇ ತಿಂಗಳಲ್ಲಿ ಆರಂಭವಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಮಾತನಾಡಿ, ಚಾರ್ಮಾಡಿ ಘಾಟಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿದ್ದ ಚರಂಡಿಗಳನ್ನು ಮುಚ್ಚಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ಹರಿದುಹೋಗಲು ಸ್ಥಳಾವಕಾಶವಿಲ್ಲದೆ, ರಸ್ತೆ ಸಂಚಾರಕ್ಕೆ ವ್ಯತ್ಯಯವಾಗುವ ಸಾಧ್ಯತೆ ಇದೆ. ಶಿರಾಡಿ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಗೆ ಇದುವೇ ಪ್ರಮುಖ ರಸ್ತೆಯಾಗಿದ್ದು, ಈ ನಿಟ್ಟಿನಲ್ಲಿ ತಕ್ಷಣದಿಂದಲೇ ರಸ್ತೆ ಬದಿಯಲ್ಲಿ ಮಳೆ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವಡೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಕ್ಕೆ ಇನ್ನೂ ಪರವಾನಿಗೆ ಸಿಕ್ಕಿಲ್ಲ. ಈ ಸಂಬಂಧ ಆರ್‌ಟಿಓ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮ ಪಂಚಾಯತ್‌ಗಳು ತೆರಿಗೆ ವಸೂಲಿಯನ್ನು ಸಮರ್ಪಕವಾಗಿ ನಡೆಸಿ, ವರ್ಷಾಂತ್ಯದಲ್ಲಿ ಶೇ.೧೦೦ ಗುರಿ ಸಾಧಿಸಬೇಕು. ನರೇಗಾ ಯೋಜನೆಯಲ್ಲಿ ಕಾಲುಸಂಕ ನಿರ್ಮಾಣಕ್ಕೆ ಎಲ್ಲ ಗ್ರಾಮ ಪಂಚಾಯತ್‌ಗಳಿಂದಲೂ ಪ್ರಸ್ತಾವನೆಗಳನ್ನು ಪಡೆಯುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ಅಂಗವಿಕಲರು, ಹಿರಿಯ ನಾಗರೀಕರು ಮತ್ತು ಕಾರ್ಮಿಕರಿಗೆ ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ದೊರಕಲು ಗುರುತಿನ ಚೀಟಿ ಅಗತ್ಯವಾಗಿರುವುದರಿಂದ ತ್ವರಿತವಾಗಿ ನೀಡಲು ಕ್ರಮಕೈಗೊಳ್ಳಲು ಅಧ್ಯಕ್ಷರು ತಿಳಿಸಿದರು.
ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗಾಗಲೇ ಕಂಡುಬಂದಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತಕ್ಷಣದಿಂದಲೇ ಕಾರ್ಯಪ್ರವ್ರತ್ತರಾಗುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮಾತನಾಡಿ, ಬೇಸಿಗೆಯಲ್ಲಿ ಕುಡಿಯುವ ನೀರಿನ ತುರ್ತು ಕಾಮಗಾರಿಗಳಿಗಾಗಿ ಈಗಾಗಲೇ ರಾಜ್ಯ ಸರಕಾರಕ್ಕೆ ೧೦ ಲಕ್ಷ ರೂ. ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲದೆ, ತುರ್ತು ಅಗತ್ಯಬಿದ್ದಲ್ಲಿ, ಗ್ರಾಮ ಪಂಚಾಯತ್‌ಗಳು ತಮ್ಮಲ್ಲಿರುವ ಹಣಕಾಸು ಮೂಲವನ್ನು ಇದಕ್ಕೆ ಬಳಸಿಕೊಳ್ಳುವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 36752 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಕಲಿಕೆಯಲ್ಲಿ ಹಿಂದುಳಿದವರಿಗೆ ವಿಶೇಷ ತರಗತಿ ಏರ್ಪಡಿಸಲಾಗಿದೆ ಎಂದು ಸಭೆಯಲ್ಲಿ ಡಿಡಿಪಿಐ ವಾಲ್ಟೆರ್ ಡಿಮೆಲ್ಲೋ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಸುವರ್ಣ, ಸಿ.ಕೆ. ಚಂದ್ರಕಲಾ, ಕೆ.ಮೀನಾಕ್ಷಿ ಉಪಸ್ಥಿತರಿದ್ದರು.