ನವದೆಹಲಿ: ವಿರೋಧ ಪಕ್ಷಗಳ ವಿರೋಧ ಲೆಕ್ಕಿಸದೆ ವಿವಾದಿತ ಭೂಸ್ವಾಧೀನ ಮಸೂದೆಗೆ ಲೋಕಸಭೆಯ ಅಂಗೀಕಾರ ಪಡೆಯುವಲ್ಲಿ ಕೇಂದ್ರ ಸರ್ಕಾರವು ಮಂಗಳವಾರ ರಾತ್ರಿ ಯಶಸ್ವಿಯಾಯಿತು. ಮಿತ್ರಪಕ್ಷಗಳ ಬೆಂಬಲ ಪಡೆಯಲು ಅಂತಿಮ ಕ್ಷಣದಲ್ಲಿ ಮಸೂದೆಗೆ ಒಂಬತ್ತು ತಿದ್ದುಪಡಿಗಳನ್ನು ಸೂಚಿಸಲಾಯಿತು.
ಮಸೂದೆಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್, ಟಿಎಂಸಿ, ಆರ್‌ಜೆಡಿ, ಬಿಜೆಡಿ, ಸಮಾಜವಾದಿ ಪಾರ್ಟಿ ಸದಸ್ಯರು ಸಭಾತ್ಯಾಗ ಮಾಡಿದರು. ಬಿಜೆಪಿ ಮಿತ್ರ ಪಕ್ಷವಾದ ಶಿವಸೇನೆ ಮತದಾನದಿಂದ ಹೊರಗುಳಿಯಿತು. ಎನ್‌ಡಿಎ ಮೈತ್ರಿಕೂಟದಲ್ಲಿರುವ ‘ಸ್ವಾಭಿಮಾನ ಪಕ್ಷ’ ಮಂಡಿಸಿದ ತಿದ್ದುಪಡಿಯೂ ತಿರಸ್ಕೃತಗೊಂಡಿತು. ವಿವಾದಿತ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕೆಂಬ ವಿರೋಧ ಪಕ್ಷಗಳ ಒತ್ತಾಯಕ್ಕೆ ಸರ್ಕಾರ ಕಿವಿಗೊಡಲಿಲ್ಲ. ಆದರೆ, ಮಿತ್ರಪಕ್ಷಗಳ ಮನವೊಲಿಕೆಗೆ ಕೊನೆ ಗಳಿಗೆವರೆಗೂ ಪ್ರಯತ್ನಿಸಿತು. ಕೆಲವು ಮಿತ್ರ ಪಕ್ಷಗಳ ಬೆಂಬಲ ಪಡೆಯಲು ಸಫಲವಾಯಿತು.
ವಿರೋಧ ಪಕ್ಷಗಳು ಮಸೂದೆಗೆ 52 ತಿದ್ದುಪಡಿಗಳನ್ನು ಸೂಚಿಸಿದ್ದವು. ಇದರಲ್ಲಿ ಕೆಲವು ತಿದ್ದುಪಡಿಗಳು ತಿರಸ್ಕೃತಗೊಂಡವು. ಅನೇಕ ಸದಸ್ಯರು ಮಂಡಿಸಿದ ತಿದ್ದು-ಪಡಿ ಮೇಲೆ ಮತದಾನ ನಡೆಯಬೇಕೆಂದು ಒತ್ತಾಯ ಹೇರಲಿಲ್ಲ. ಲೋಕಸಭೆಯಲ್ಲಿ ಸರ್ಕಾರ ಸಂಖ್ಯಾಬಲ ಆಧಾರದಲ್ಲಿ ಮಸೂದೆಗೆ ಅಂಗೀಕಾರ ಪಡೆಯಿತು. ಆದರೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆ ಆಡಳಿತ ಮೈತ್ರಿಕೂಟದ ಸದಸ್ಯರಿಗಿಂತ ಅಧಿಕವಾಗಿರುವುದರಿಂದ ಮಸೂದೆ ಅಗ್ನಿಪರೀಕ್ಷೆಗೊಳಗಾಗಲಿದೆ. ವಿರೋಧ ಪಕ್ಷಗಳು ಮತ್ತು ಸರ್ಕಾರದ ಕೆಲವು ಮಿತ್ರ ಪಕ್ಷಗಳು ಮಸೂದೆಗೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ.
ಮಸೂದೆಯನ್ನು ಮತಕ್ಕೆ ಹಾಕುವ ಮೊದಲು ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಬೀರೇಂದ್ರ ಸಿಂಗ್, ಈಗಾಗಲೇ ಅನೇಕ ಸಲಹೆಗಳನ್ನು ಮಸೂದೆಯಲ್ಲಿ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಹಲವು ವಿರೋಧ ಪಕ್ಷಗಳಿಂದ ಬಂದಿರುವ ಸಲಹೆಗಳು. ರೈತರ ಹಿತದೃಷ್ಟಿಯಿಂದ ಇನ್ನಷ್ಟು ಸಲಹೆಗಳು ಬಂದರೆ ಪರಿಶೀಲಿಸಲು ಸರ್ಕಾರ ಸಿದ್ಧ ಎಂದು ಹೇಳಿದರು.
ಬೀರೇಂದ್ರ ಸಿಂಗ್ ತಮ್ಮ ಮಾತಿನ ಉದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಇಷ್ಟು ವರ್ಷ ಕಾಂಗ್ರೆಸ್ ರೈತರಿಗೆ ಪುಡಿಗಾಸು ಕೊಡುವ ಕೆಲಸ ಮಾಡಿದೆ. ಇದರಿಂದ ರೈತರು ಬದುಕಿದ್ದಾರೆ ವಿನಾ, ಸಮೃದ್ಧವಾಗಿ ಜೀವನ ನಡೆಸಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ನಮ್ಮ ಸರ್ಕಾರ ರೈತರು ಹಾಗೂ ಅವರ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲಿದೆ. ಕೃಷಿಕರ ಮಕ್ಕಳಿಗೂ ಅತ್ಯುತ್ತಮ ಶಿಕ್ಷಣ ಹಾಗೂ ಸೌಲಭ್ಯ ಕೊಡಲು ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷವನ್ನು ಸಚಿವರು ಪದೇ ಪದೇ ಟೀಕಿಸಿದ್ದರಿಂದ ಜ್ಯೋತಿರಾದಿತ್ಯ ಸಿಂಧಿಯಾ, ದೀಪೇಂದರ್ ಹೂಡಾ ಸಚಿವರ ಜತೆ ವಾಗ್ವಾದಕ್ಕೆ ಇಳಿಯುತ್ತಿದ್ದರು. ಸಭಾಪತಿ ಸುಮಿತ್ರಾ ಮಹಾಜನ್ ಮಧ್ಯಪ್ರವೇಶಿಸಿ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು. ಕಾವೇರಿದ ಚರ್ಚೆ ಸಮಯದಲ್ಲಿ ಸದನದಲ್ಲಿ ಹಾಜರಿದ್ದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತಿತರ ಹಿರಿಯ ಸಚಿವರು ಸಭಾಧ್ಯಕ್ಷರನ್ನು ಉದ್ದೇಶಿಸಿ ಮಾತನಾಡುವಂತೆ ತಮ್ಮ ಸಹೋದ್ಯೋಗಳಿಗೆ ಕಿವಿ ಮಾತು ಹೇಳುತ್ತಿದ್ದರು.
ಬಿಜೆಪಿ ಮಿತ್ರ ಪಕ್ಷಗಳಾದ ತೆಲುಗು ದೇಶಂ, ಶಿರೋಮಣಿ ಅಕಾಲಿ ದಳ, ತೆಲಗು ದೇಶಂ, ಎಐಎಡಿಎಂಕೆ ಸೇರಿ ಹಲವು ಪಕ್ಷಗಳು ಭೂಸ್ವಾಧೀನ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದವು. ಮಸೂದೆ ವಿರೋಧಿಸಿ ಬಿಜೆಡಿ ಸಭಾತ್ಯಾಗ ಮಾಡಿತು. ಸದನದಿಂದ ಹೊರ ನಡೆಯುವ ಮೊದಲು ತನ್ನ ಎಲ್ಲ ಆತಂಕಗಳನ್ನು ಸರ್ಕಾರ ನಿವಾರಣೆ ಮಾಡಿಲ್ಲ ಎಂದು ಆರೋಪಿಸಿತು.