ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ನಿರ್ಮಲ್ ಸಿಂಗ್
ಜಮ್ಮು/ನವದೆಹಲಿ (ಪಿಟಿಐ): ಪ್ರತ್ಯೇಕತಾವಾದಿ ನಾಯಕ ಮಸರತ್ ಆಲಂ ಬಿಡುಗಡೆ ಭಾರಿ ವಿವಾದ ಸೃಷ್ಟಿಸಿದ ಕಾರಣ ಕಾಶ್ಮೀರದಲ್ಲಿ ತನ್ನ ಮಿತ್ರ ಪಕ್ಷವಾದ ಪಿಡಿಪಿಗೆ ತೀವ್ರ ಎಚ್ಚರಿಕೆ ನೀಡಿರುವ ಬಿಜೆಪಿಯು, ಅಧಿಕಾರದಲ್ಲಿ ಮುಂದುವರಿಯುವುದು ತನ್ನ ಆದ್ಯತೆಯಲ್ಲ. ತನ್ನನ್ನು ಸಂಪರ್ಕಿಸದೇ ಪ್ರತ್ಯೇಕವಾದಿಗಳು ಹಾಗೂ ಉಗ್ರರನ್ನು ಬಿಡುಗಡೆ ಮಾಡಿದಲ್ಲಿ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ನಿರ್ಮಲ್ ಸಿಂಗ್ ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರನ್ನು ದೆಹಲಿಯಲ್ಲಿ ಮಂಗಳವಾರ ಭೇಟಿಯಾಗಿ ರಾಜ್ಯದಲ್ಲಿನ ಸನ್ನಿವೇಶದ ಕುರಿತು ವಿವರಿಸಿದರು.
ಈ ಭೇಟಿಯ ನಂತರ ಪಿಡಿಪಿ ನಾಯಕ ಮುಫ್ತಿ ಮೊಹಮ್ಮದ್ ಸಯೀದ್ ಅವರಿಗೆ ಕಟುವಾದ ಸಂದೇಶ ರವಾನಿಸಲಾಯಿತು ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.
ಬದಲಾದ ಸರ್ಕಾರದ ಧೋರಣೆ: ಈ ನಡುವೆ ಕಾಶ್ಮೀರ ಸರ್ಕಾರ ಉಗ್ರರ ಕುರಿತಂತೆ ತನ್ನ ಧೋರಣೆ ಮೃದುಗೊಳಿಸಿದೆ. ಇನ್ನಷ್ಟು ರಾಜಕೀಯ ಕೈದಿಗಳು ಅಥವಾ ಉಗ್ರರನ್ನು ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರದ ಗೃಹ ಕಾರ್ಯದರ್ಶಿ ಸುರೇಶ್ ಕುಮಾರ್, ಮಸರತ್ ಆಲಂ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾಯ್ದೆ ಅಡಿ (ಪಿಎಸ್‌ಎ) ಮತ್ತೆ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ‘ಪಿಎಸ್‌ಎ’ ಅಡಿ ಒಬ್ಬರನ್ನು ಎರಡು ಸಲ ಮಾತ್ರ ಬಂಧಿಸಬಹುದು. ಅಲ್ಲದೇ ಆರು ತಿಂಗಳು ಮಾತ್ರ ಜೈಲಿನಲ್ಲಿ ಇಡಬಹುದು. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಒಬ್ಬರನ್ನು ಒಂದೇ ಆರೋಪದಡಿ ಪದೇ ಪದೇ ಬಂಧಿಸಲು ಸಾಧ್ಯವಿಲ್ಲ. ಹಾಗೆ ಮಾಡುವುದಾದರೆ ಹೊಸ ಆರೋಪ ಹೊರಿಸಬೇಕಾಗುತ್ತದೆ ಎಂದಿದ್ದಾರೆ.
ಆದರೆ, ಮತ್ತಷ್ಟು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಆಲಂ ಬಿಡುಗಡೆ ಮಾಡಿರುವುದಕ್ಕೆ ವಿರೋಧ ಪಕ್ಷಗಳಿಂದ ಭಾರಿ ಟೀಕೆಗೆ ಒಳಗಾಗಿರುವ ಕೇಂದ್ರ ಸರ್ಕಾರ, ತಮ್ಮ ಸರ್ಕಾರದ ಆದ್ಯತೆ ರಾಷ್ಟ್ರೀಯ ಭದ್ರತೆಯೇ ಹೊರತು ಕಾಶ್ಮೀರ ಸರ್ಕಾರದ ಮುಂದುವರಿಕೆಯಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹೇಳಿಕೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರ ಇನ್ನೂ 800 ಜನ ಪ್ರತ್ಯೇಕತಾವಾದಿಗಳನ್ನು ಬಿಡುಗಡೆ ಮಾಡಲಿದೆ ಎಂಬ ವರದಿಯ ಕಾರಣ ವಿರೋಧಪಕ್ಷಗಳು ಸಂಸತ್ತಿನಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.
ಅಲ್ಲಿನ ರಾಜ್ಯಪಾಲರು ಈ ಕುರಿತು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆಯೇ ಎಂದೂ ವಿರೋಧಪಕ್ಷಗಳು ಪ್ರಶ್ನಿಸಿದವು
