ಬೆಂಗಳೂರು: ‘ರಾಜ್ಯದಲ್ಲಿ ಆರೂಕಾಲು ಕೋಟಿ ಜನ ಇದ್ದಾರೆ. 1,500 ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿವೆ. ಅಂದ ಮಾತ್ರಕ್ಕೆ ರಾಜ್ಯದಲ್ಲಿ ಇರುವವರನ್ನೆಲ್ಲ ಅತ್ಯಾಚಾರಿಗಳು ಎಂದು ಕರೆಯಲು ಸಾಧ್ಯವೇ?’ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಾಧ್ಯಮಗಳು ಕೇವಲ ಒಂದೆರಡು ಘಟನೆಗಳನ್ನು ಕೇಂದ್ರೀಕರಿಸಿ ವರದಿ ಮಾಡುತ್ತಿವೆ. ಪೊಲೀಸರು ಮಾಡುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಬಿಸಿ ವಾಹಿನಿಯಲ್ಲಿ ಪ್ರಸಾರವಾದ ‘ಇಂಡಿಯಾಸ್ ಡಾಟರ್’ ಸಾಕ್ಷ್ಯಚಿತ್ರ ಉಲ್ಲೇಖಿಸಿ ಮಾತನಾಡಿದ ಗೃಹ ಸಚಿವರು, ‘ಜರ್ಮನಿ ಪ್ರೊಫೆಸರ್ ಒಬ್ಬರು ಭಾರತದಲ್ಲಿ ಅತ್ಯಾಚಾರದ ಸಮಸ್ಯೆ ಇದೆ ಎಂಬ ಕಾರಣ ನೀಡಿ ಭಾರತೀಯ ಸಂಶೋಧನಾ ವಿದ್ಯಾರ್ಥಿಗೆ ಮಾರ್ಗದರ್ಶನ ನೀಡಲು ನಿರಾಕರಿಸಿದ್ದಾರೆ. ಒಂದೆರಡು ಪ್ರಕರಣಗಳನ್ನು ಗುರಿಯಾಗಿಸಿಕೊಂಡು ಇಡೀ ದೇಶದ ಜನರನ್ನು ಅದೇ ದೃಷ್ಟಿಯಲ್ಲಿ ನೋಡುವುದು ಸರಿ ಅಲ್ಲ’ ಎಂದರು.
ವಿಎಚ್‌ಪಿ ಮುಖಂಡ ಪ್ರವೀಣ್ ತೊಗಾಡಿಯಾ ಅವರು ಪೊಲೀಸರ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ’ ಎಂದು ಉತ್ತರಿಸಿದರು.
ರಜೆ ಭತ್ಯೆ ಹೆಚ್ಚಳ: ಪೊಲೀಸ್ ಸಿಬ್ಬಂದಿ ರಜಾ ಭತ್ಯೆ ₨100ರಿಂದ 200ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಹೊಸ ಮನೆ: ಪೊಲೀಸ್ ಸಿಬ್ಬಂದಿಗಾಗಿ 11,500 ಹೊಸ ಮನೆಗಳನ್ನು ಕಟ್ಟಲಾಗುತ್ತಿದೆ ಎಂದರು.
ಕರ್ನಾಟಕ